ಸೋಮವಾರಪೇಟೆ, ಜೂ 20:ರಾಜ್ಯ ಸರಕಾರದ ನಿವೃತ್ತ ನೌಕರರಿಗೂ ಆರೋಗ್ಯ ಸಂಜೀವಿನಿ ಸೇವೆಯನ್ನು ವಿಸ್ತರಿಸಬೇಕೆಂದು ರಾಜ್ಯ ಸರಕಾರಿ ನಿವೃತ್ತ ನೌಕರರ ಸಂಘದ ತಾಲೂಕು ಘಟಕದ ಅಧ್ಯಕ್ಷರಾದ ಸಿ.ಕೆ.ಮಲ್ಲಪ್ಪ ಹೇಳಿದರು.
ಇಲ್ಲಿನ ಮಹಿಳಾ ಸಹಕಾರ ಸಮಾಜದ ಸಭಾಂಗಣದಲ್ಲಿ ಮಂಗಳವಾರ ನಡೆದ ನಿವೃತ್ತ ನೌಕರರ ಸಂಘದ ಬೆಳ್ಳಿಹಬ್ಬ ಆಚರಣೆ ಮತ್ತು ಸಂಘದ ವಾರ್ಷಿಕ ಮಹಾಸಭೆ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.ಬಹುತೇಕ ನಿವೃತ್ತ ನೌಕರರು ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದಾರೆ.ಕೆಲವರಿಗೆ ಪಿಂಚಣಿ ಹಣ ಆಸ್ಪತ್ರೆ ಬಿಲ್‌ಗೂ ಸಾಕಾಗುವುದಿಲ್ಲ.ಈ ನಿಟ್ಟಿನಲ್ಲಿ ಆರೋಗ್ಯ ಸಂಜೀವಿನಿ ಸೇವೆ ಎಲ್ಲಾ ನಿವೃತ್ತ ನೌಕರರಿಗೂ ದೊರಕುವಂತಾಗಬೇಕು ಎಂದರು.ನಿವೃತ್ತರು ಮತ್ತು ಕುಟುಂಬ ಪಿಂಚಣಿದಾರರ ಸಮಸ್ಯೆಗಳನ್ನು ಆಲಿಸಿ ಜಿಲ್ಲಾ ಸಮಿತಿಯ ಗಮನಕ್ಕೆ ತಂದು ರಾಜ್ಯ ಸಮಿತಿಯೊಂದಿಗೆ ಚರ್ಚಿಸಿ ಪರಿಹಾರಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದರು.
2008-09ರಲ್ಲಿ ಕೊಡಗು ಜಿಲ್ಲೆಯಲ್ಲಿಯೇ ಪ್ರಪ್ರಥಮವಾಗಿ ನಿವೃತ್ತ ನೌಕರರ ಸಂಘದಲ್ಲಿ ಮರಣ ನಿಧಿಯನ್ನು ಪ್ರಾರಂಭಿಸಲಾಗಿದ್ದು, ಇದು ಸಂಘದ ಸದಸ್ಯರ ಕುಟುಂಬಕ್ಕೆ ಅನುಕೂಲವಾಗಿದೆ ಎಂದರು.
ಇದೇ ಸಂದರ್ಭ ನಿವೃತ್ತ ಶಿಕ್ಷಕ ಚಂದ್ರಹಾಸ್ ಭಟ್ ಸಂಪಾದಕತ್ವದಲ್ಲಿ ಹೊರತಂದ ಸಂಧ್ಯಾರಾಗ ಸ್ಮರಣ ಸಂಚಿಕೆ ಬಿಡುಗಡೆಗೊಳಿಸಲಾಯಿತು.
ವೇದಿಕೆಯಲ್ಲಿ ಸಂಘದ ಜಿಲ್ಲಾಧ್ಯಕ್ಷ ಮಾದಮಯ್ಯ,ತಾಲೂಕು ಘಟಕದ ಗೌರವಾಧ್ಯಕ್ಷ ಹಾಲೇಬೇಲೂರು ನಿರ್ವಾಣಿ ಶೆಟ್ಟಿ,ಸಂಘದ ಎಲ್ಲಾ ಪದಾಧಿಕಾರಿಗಳು ಹೋಬಳಿ ಘಟಕದ ಅಧ್ಯಕ್ಷರುಗಳು ಉಪಸ್ಥಿತರಿದ್ದರು.
Back to top button
error: Content is protected !!