ಕುಶಾಲನಗರ, ಏ 08: ಇಲ್ಲಿಗೆ ಸಮೀಪದ ಹೆಬ್ಬಾಲೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮರೂರು ಗ್ರಾಮದಲ್ಲಿ ಮಳೆಗಾಗಿ ಗ್ರಾಮದ ಹೊರಭಾಗದಲ್ಲಿರುವ ಬಪ್ಪುರಾಯ ಸ್ವಾಮಿ ದೇವರಿಗೆ ಗ್ರಾಮಸ್ಥರು ಭಾನುವಾರ ಪೂಜೆ ನೆರವೇರಿಸಿದರು.
ಗ್ರಾಮದ ಪ್ರಗತಿ ಪರ ಕೃಷಿಕ ಹೆಚ್.ಎಸ್.ಮಹೇಶ್ ಹಾಗೂ ಶಿಕ್ಷಕಿ ಸುನೀತಾ ಮಹೇಶ್ ದಂಪತಿಗಳು ಅರಕಲಗೂಡಿನಿಂದ ಅರ್ಚಕರನ್ನು ಆಹ್ವಾನಿಸಿ ಗ್ರಾಮಸ್ಥರನ್ನು ದೇವರ ಸನ್ನಿಧಿಗೆ ಬರಮಾಡಿಕೊಂಡು ವಿಶೇಷವಾಗಿ ಪೂಜೆ ಸಲ್ಲಿಸಿದರು. ಬಳಿಕ ಸಾಮೂಹಿಕವಾಗಿ ಮಳೆ ಸುರಿಸಿ ಭೂಮಿಯನ್ನು ತಂಪುಗೊಳಿಸೆಂದು ಮಳೆರಾಯನನ್ನು ಪ್ರಾರ್ಥಿಸಿದರು.
ಈ ಸಂದರ್ಭ ಸುದ್ದಿಗಾರರೊಂದಿಗೆ ಮಾತನಾಡಿದ ಕೃಷಿಕ ಮಹೇಶ್, ಹಿಂದೆಂದೂ ಕಂಡರಿಯದ ಬರ ನಾಡನ್ನು ಆವರಿಸಿದೆ. ಎಲ್ಲೆಡೆ ಕೊಳವೆ ಬಾವಿಗಳು ಬತ್ತಿವೆ. ಜೀವ ನದಿ ಕಾವೇರಿ ಸಂಪೂರ್ಣ ಒಣಗುತ್ತಿದೆ. ಹಾಗಾಗಿ ಮಳೆ ಸುರಿಸಿ ನಾಡಿನ ಜನರನ್ನು ಉದ್ಧರಿಸು ಎಂದು ಗ್ರಾಮದ ರೈತರು ಹಾಗೂ ಗ್ರಾಮಸ್ಥರೊಂದಿಗೆ ಮಳೆಯ ದೇವರನ್ನು ಪ್ರಾರ್ಥಿಸಿದ್ದಾಗಿ ಹೇಳಿದರು.
ಪೂಜೆ ಹಾಗೂ ಪ್ರಾರ್ಥನೆಯ ಬಳಿಕ ನೆರೆದ ಗ್ರಾಮಸ್ಥರಿಗೆಲ್ಲಾ ಸಿಹಿ ಬೋಂದಿ ಪಾಯಸದ ಊಟ ನೀಡಿ ಸತ್ಕರಿಸಲಾಯಿತು.
ಈ ಸಂದರ್ಭ ಮರೂರು ಗ್ರಾಮದ ವಯೋವೃದ್ದ ಹೆಚ್.ವಿ.ಶಿವರುದ್ರಪ್ಪ, ಕೊಡಗರಹಳ್ಳಿ ಪಿಡಿಒ ಎಂ.ಎಸ್.ರಾಜಶೇಖರ್, ಅಪ್ಪಿ, ಗ್ರಾಮದ ಶಿವಣ್ಣ, ಆನಂದ್, ಭರತ್, ಚಿದಂಬರ, ರೇವಣ್ಣ, ಮಂಜುಳಾ, ಗಿರಿಜಾ, ಶಶಿಕಲಾ, ಪುಟ್ಟಮ್ಮಣ್ಣಿ ಮೊದಲಾದವರಿದ್ದರು.
Back to top button
error: Content is protected !!