ಪ್ರತಿಭಟನೆ

ದುಬಾರೆಯಲ್ಲಿ ಮಾವುತ, ಕಾವಾಡಿಗರ ಪ್ರತಿಭಟನೆ

ಕುಶಾಲನಗರ ಮಾ 28: ವಿವಿಧ ಹುದ್ದೆಗಳಿಗೆ ಪದೋನ್ನತಿ ನೀಡುವಾಗ ಮಾವುತರ ಮತ್ತು ಕವಾಡಿಗರಿಗೆ ಅನ್ಯಾಯ ಎಸಗಲಾಗಿದೆ ಎಂದು ಆರೋಪಿಸಿ ದುಬಾರೆ ಸಾಕಾನೆ ಶಿವಿರದ ಮಾವುತರು, ಕವಾಡಿಗರು ಸಾಕಾನೆಗಳನ್ನಹ ಕ್ಯಾಂಪ್ ಗೆ ಕರೆತರದೆ ಕಾಡಿಗೆ ಅಟ್ಟಿ
ಪ್ರತಿಭಟನೆ ನಡೆಸಿದರು.

ಇದರ ಪರಿಣಾಮವಾಗಿ ಸಾಕಾನೆ ಶಿಬಿರದಲ್ಲಿ ಸಾಕಾನೆಗಳನ್ನು‌ ನೋಡಲು ಆಗಮಿಸಿದ ಪ್ರವಾಸಿಗರು ನಿರಾಸೆಯಿಂದ ಹಿಂತೆರಳಿದ ಘಟನೆ ಗುರುವಾರ ನಡೆದಿದೆ.

ಜಮೇದಾರ್ ಹುದ್ದೆಯನ್ನು ಹಲವು ವರ್ಷಗಳಿಂದ ಮಾವುತರಾಗಿ ಕಾರ್ಯ ನಿರ್ವಹಿಸುತ್ತಿರುವ ಹಿರಿಯ ಮಾವುತರಿಗೆ ಕೊಡಬೇಕು. ಆದರೆ ಇಲಾಖೆಯ ಅಧಿಕಾರಿಗಳು ತಮ್ಮ ಕಚೇರಿಗಳಲ್ಲಿ, ಇಲ್ಲವೇ ಅರಣ್ಯ ಇಲಾಖೆಯ ಐಬಿಗಳಲ್ಲಿ ಅಡುಗೆ ಮಾಡಿಕೊಂಡಿರುವ ಒಂದಿಬ್ಬರಿಗೆ ಜಮೇದಾರ್ ಹುದ್ದೆಗಳಿಗೆ ಪದೋನ್ನತಿ ಮಾಡಲಾಗಿದೆ.

ಇದು ಹಲವು ವರ್ಷಗಳಿಂದ ಅಪಾಯಕಾರಿಯಾದ ಆನೆಗಳನ್ನು ಪಳಗಿಸುತ್ತಿರುವ ಮಾವುತರು ಮತ್ತು ಕವಾಡಿಗರಿಗೆ ಮೋಸವಾಗಿದೆ ಎಂದು ಅರಣ್ಯ ಇಲಾಖೆ ಅಧಿಕಾರಿಗಳ ವಿರುದ್ಧ ಮಾವುತ ಕವಾಡಿಗರು ಒಗ್ಗೂಡಿ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ದುಬಾರೆ ಸಾಕಾನೆ ಶಿಬಿರದಲ್ಲಿ 20 ಕ್ಕೂ ಹೆಚ್ಚು ಆನೆಗಳಿದ್ದು, ಆ ಯಾವುದೇ ಆನೆಗಳನ್ನು ದುಬಾರೆ ಸಾಕಾನೆ ಶಿಬಿರಕ್ಕೆ ಕರೆತರದೆ ಆನೆಗಳನ್ನು ಬೆಳಿಗ್ಗೆ ಕಾಡಿಗೆ ಕರೆದೊಯ್ದು ಬಿಡುತ್ತಿರುವ ಮಾವುತರು, ಸಂಜೆ ವಾಪಸ್ ಆನೆಗಳನ್ನು ಕರೆತರುತ್ತಿದ್ದಾರೆ. ಆಗಲೂ ಕೂಡ, ಶಿಬಿರದ ವೀಕ್ಷಣಾ ವಲಯಕ್ಕೆ ಆನೆಗಳನ್ನು ಕರೆತರದೆ ಶಿಬಿರದಿಂದ ದೂರದಲ್ಲಿಯೇ ಆನೆಗಳನ್ನು ಕಟ್ಟಿಹಾಕುತ್ತಿದ್ದಾರೆ. ಇದರಿಂದ ದೂರದ ಜಿಲ್ಲೆ, ರಾಜ್ಯಗಳಿಂದ ಬರುವ ಪ್ರವಾಸಿಗರು ನಿರಾಸೆಯಿಂದ ವಾಪಸ್ ಆಗುತ್ತಿದ್ದಾರೆ. ಆನೆಗಳನ್ನು ಕಾಡಿಗೆ ಬಿಟ್ಟು ಬರುತ್ತಿರುವ ಮಾವುತ, ಕವಾಡಿಗರು ಸಾಕಾನೆ ಶಿಬಿರದಲ್ಲಿ ಕುಳಿತು ಮೌನ ಪ್ರತಿಭಟನೆ ನಡೆಸಿದರು. ಮಾವುತರು, ಕವಾಡಿಗರು ಪ್ರತಿಭಟನೆ ನಡೆಸುತ್ತಿರುವ ವಿಷಯ ಗೊತ್ತಾಗುತ್ತಿದ್ದಂತೆ ಸ್ಥಳಕ್ಕೆ ಕುಶಾಲನಗರ ವಲಯ ಅರಣ್ಯ ಅಧಿಕಾರಿ ರತನ್ ಕುಮಾರ್ ಭೇಟಿ ನೀಡಿ ಪ್ರತಿಭಟನಾ ನಿರತ ಮಾವುತರು ಹಾಗೂ ಕವಾಡಿಗರ ಮನವೊಲಿಸುವ ಪ್ರಯತ್ನ ಮಾಡಿದರು. ನಿಮ್ಮ‌ ಬೇಡಿಕೆಗಳನ್ನು ಮೇಲಧಿಕಾರಿಗಳ ಗಮನಕ್ಕೆ ತರಲಾಗುವುದು.ಸಾಕಾನೆಗಳನ್ನು ಶಿಬಿರಕ್ಕೆ ಕರೆತರುವಂತೆ ತಿಳಿಸಿದರು.

ಮಾವುತರು, ಕವಾಡಿಗರು 7 ವರ್ಷಗಳಿಂದ ಕವಾಡಿಗರಾಗಿಯೇ ಕರ್ತವ್ಯ ನಿರ್ವಹಿಸುತ್ತಿದ್ದೇವೆ. ಹತ್ತಾರು ವರ್ಷಗಳಿಂದ ಮಾವುತರಾಗಿಯೇ ಕೆಲಸ ಮಾಡುತ್ತಿದ್ದೇವೆ. ನಮ್ಮ ಬೇಡಿಕೆಗಳನ್ನು ಶೀಘ್ರವಾಗಿ ಈಡೇರಿಸದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಪ್ರತಿಭಟನೆ ಹಮ್ಮಿಕೊಳ್ಳುವ ಎಚ್ಚರಿಕೆ ನೀಡಿದರು.

ಪ್ರತಿಭಟನಾಕಾರರ ಮನವೊಲಿಸಲು ಪ್ರಯತ್ನಿಸಿದ ಆರ್ ಎಫ್ ಒ ರತನ್ ಕುಮಾರ್ ಅವರು ಮಾತನಾಡಿ ಅವರ ಬೇಡಿಕೆಗಳ ಮನವಿಯನ್ನು ಸ್ವೀಕರಿಸಿದ್ದೇವೆ. ಇದನ್ನು ಅಧಿಕೃತವಾಗಿ ಮೇಲಿನ ಅಧಿಕಾರಿಗಳಿಗೆ ಕಳುಹಿಸಿ ಕೊಡಲಾಗುವುದು. ಜೊತೆಗೆ ಪ್ರತಿಭಟನಾ ನಿರತರ ಮನವೊಲಿಸಿ ಕೂಡಲೇ ಪ್ರತಿಭಟನೆ ಕೈಬಿಡುವಂತೆ ಕ್ರಮ ಕೈಗೊಳ್ಳಲಾಗುವುದು ಎಂದಿದ್ದಾರೆ.

ಈ ಸಂದರ್ಭ ಹಿರಿಯ ಮಾವುತ ಡೋಬಿ, ವಿಜಯ, ಚಿಣ್ಣಪ್ಪ ಮತ್ತಿತರರು ಇದ್ದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!