ಶಿಕ್ಷಣ

ಕುಶಾಲನಗರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ತರಬೇತಿ ಕಾರ್ಯಗಾರ

ಕುಶಾಲನಗರ ಮಾ 25: ಇಂದು ವಿದ್ಯಾರ್ಥಿಗಳು ಸಾಮಾಜಿಕ ಬದುಕಿನಿಂದ ವಿಮುಖರಾಗುತ್ತಿದ್ದಾರೆ ಎಂದು ಭಾರತ್ ಸ್ಕೌಟ್ ಮತ್ತು ಗೈಡ್ಸ್ ನ ಮುಖ್ಯ ಜಿಲ್ಲಾ ಆಯುಕ್ತ ಕೆ.ಟಿ.ಬೇಬಿ ಮ್ಯಾಥ್ಯೂ ಕಳವಳ ವ್ಯಕ್ತಪಡಿಸಿದರು‌.

ಹಾರಂಗಿ ರಸ್ತೆಯಲ್ಲಿರುವ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ರೇಂಜರ್ ರೋವರ್ ಘಟಕಗಳು ಹಾಗೂ ಮಡಿಕೇರಿಯ ಜಿಲ್ಲಾ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಯ ಸಹಯೋಗದಲ್ಲಿ ರೇಂಜರ್ ಮತ್ತು ರೋವರ್ ನ ಸ್ವಯಂಸೇವಕರಿಗೆ ಮೂರು ದಿನಗಳ ಕಾಲ ಮೂಲ ತರಬೇತಿ ಕಾರ್ಯಗಾರಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ನಾವುಗಳು ಬದುಕಬೇಕಿರುವುದು ಸಮಾಜದೊಳಗೆ, ಅಂತಹ ಸಮಾಜವನ್ನು ಆದರ್ಶಮಯವಾಗಿಡುವುದು ಇಂದಿನ ಅಗತ್ಯಗಳಲ್ಲೊಂದು. ಈ ಕೆಲಸ ಯುವ ಸಮೂಹದಿಂದ ಸಾಧ್ಯವಾಗಲಿದೆ. ವಿದ್ಯಾರ್ಥಿಗಳು ಸಮಾಜಮುಖಿಯಾಗಲು ರೇಂಜರ್ ಮತ್ತು ರೋವರ್ ಘಟಕಗಳು ವೇದಿಕೆಯಾಗಿವೆ. ಇದರ ಸದುಪಯೋಗವನ್ನು ಸ್ವಯಂಸೇವಕರು ಪಡೆದುಕೊಳ್ಳಬೇಕು ಎಂದು ಮಾರ್ಗದರ್ಶನ ನೀಡಿದರು.

ಜಿಲ್ಲಾ ಸ್ಕೌಟ್ ನ ಆಯುಕ್ತ ಜಿಮ್ಮಿ ಸಿಕ್ವೇರಾ ಮಾತನಾಡಿ, ಮಕ್ಕಳಲ್ಲಿ ಶಿಸ್ತು, ಸಂಯಮ, ತಾಳ್ಮೆ, ಏಕಾಗ್ರತೆ ಇದ್ದಾಗ ಮಾತ್ರ ಸಾಧನೆಯ ಮೆಟ್ಟಿಲನ್ನೇರಬಹುದು ಎಂದರು.

ಜಿಲ್ಲಾ ಗೈಡ್ಸ್ ಸಹ ಆಯುಕ್ತೆ ಸುಲೋಚನ, ಜಿಲ್ಲಾ ಸಂಚಾಲಕಿ ದಮಯಂತಿ, ರೇಂಜರ್ ಘಟಕದ ಸಂಚಾಲಕ ಕೆ.ಪಿ. ಕುಸುಮ, ರೋವರ್ ಘಟಕದ ಸಂಚಾಲಕ ಡಾ.ಸುನೀಲ್ ಕುಮಾರ್ ಎಸ್ ಉಪಸ್ಥಿತರಿದ್ದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಭಾರ ಪ್ರಾಂಶುಪಾಲ ರಮೇಶ್ ಚಂದ್ರ ಪಿ ವಹಿಸಿದ್ದರು.

ಜಿಮ್ಮಿ ಸಿಕ್ವೇರಾ ಅವರು ಮೂರು ದಿನಗಳ ಕಾಲ ಸ್ವಯಂ ಸೇವಕರಿಗೆ ತರಬೇತಿಯನ್ನು ನೀಡಲಿದ್ದಾರೆ. ಈ ತರಬೇತಿ ಕಾರ್ಯಾಗಾರದಲ್ಲಿ ಕಾಲೇಜಿನ 50 ವಿದ್ಯಾರ್ಥಿಗಳು ಭಾಗವಹಿಸಿದ್ದಾರೆ.

 

Related Articles

Leave a Reply

Your email address will not be published. Required fields are marked *

Back to top button
error: Content is protected !!