ಸಭೆ

ಹನುಮ‌ಜಯಂತಿ ಶೋಭಾಯಾತ್ರೆ: ಸರ್ವಧರ್ಮ‌ ಪ್ರಮುಖರ ಸಭೆ

ಕುಶಾಲನಗರ, ಡಿ 20: ಡಿಸೆಂಬರ್ 24 ರಂದು ಕುಶಾಲನಗರದಲ್ಲಿ ನಡೆಯಲಿರುವ ಹನುಮ ಜಯಂತಿಯಯ ದಶಮಂಟಪ ಮೆರವಣಿಗೆ ಕುರಿತಾಗಿ ಸರ್ವಧರ್ಮ ಪ್ರಮುಖರ ಸೌಹಾರ್ದ ಸಭೆ ಖಾಸಗಿ ಸಭಾಂಗಣದಲ್ಲಿ ಕೊಡಗು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ. ರಾಮರಾಜನ್ ರವರ ಅಧ್ಯಕ್ಷತೆಯಲ್ಲಿ ನಡೆಯಿತು.

ಸಭೆಯಲ್ಲಿ ಮೊದಲಿಗೆ ದಶಮಂಟಪ ಸಮಿತಿಯ ಪದಾಧಿಕಾರಿಗಳನ್ನು ಉದ್ದೇಶಿಸಿ ಮಾತನಾಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ಹನುಮ ಜಯಂತಿಯ ದಶಮಂಟಪದ ಮೆರವಣಿಗೆಯ ಸಂದರ್ಭ ನ್ಯಾಯಾಲಯದ ಆದೇಶವನ್ನು ಪ್ರತಿಯೂಬ್ಬರೂ ಪಾಲಿಸಬೇಕು.ಮೆರವಣಿಗೆಯ ಸಂದರ್ಭ ವಾಹನ ಸಂಚಾರಕ್ಕೆ ಅಡಚಣೆ ಆಗದಂತೆ ಹಾಗೂ ಸಾರ್ವಜನಿಕರಿಗೆ ತೊಂದರೆ ಆಗದಂತೆ ಎಚ್ಚರ ವಹಿಸಬೇಕು. ಅಲ್ಲದೇ ದಶಮಂಟಪಗಳ ಅಲಂಕಾರಕ್ಕೆ ಅತೀ ಹೆಚ್ಚಿನ ವಿದ್ಯುತ್ ಅಲಂಕಾರಿಕಾ ಅಪಾಯಕಾರಿ ವಸ್ತುಗಳನ್ನು ಬಳಸಿದಂತೆ ಮತ್ತು ಅತಿ ಹೆಚ್ಚಿನ ಕರ್ಕಶ ಡಿ.ಜೆ. ಸೌಂಡ್ ನಿಂದ ಸಾರ್ವಜನಿಕ ಕಿರಿಕಿರಿ ಉಂಟಾಗದಂತೆ ಎಚ್ಚರ ವಹಿಸಬೇಕು. ಮೆರವಣಿಗೆ ಸಾಗುವ ಮಾರ್ಗದಲ್ಲಿ ಗುಂಡಿ ಬಿದ್ದಿರುವ ರಸ್ತೆಯನ್ನು ಸರಿಪಡಿಸಲು ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಚರ್ಚಿಸಲಾಗುವುದು. ಅಲ್ಲದೆ ಹನುಮ ಜಯಂತಿಯಂದು ಮೆರವಣಿಗೆ ವೀಕ್ಷಿಸಲು ಮತ್ತು ಮೆರವಣಿಗೆಯಲ್ಲಿ ಪಾಲ್ಗೊಳ್ಳಲು ಹೊರ ಜಿಲ್ಲೆಗಳಿಂದ ಆಗಮಿಸುವ ಸಾರ್ವಜನಿಕರ ಮೇಲೆ ಹೆಚ್ಚಿನ ನಿಗಾ ವಹಿಸಲಾಗುವುದು. ಮೆರವಣಿಗೆಯಲ್ಲಿ ಯಾವುದೇ ರೀತಿಯಾದ ಅಹಿತಕರ ಘಟನೆಗಳು ಜರುಗದಂತೆ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗುವುದು ಎಂದು ತಿಳಿಸಿದ ಅವರು, ಪೊಲೀಸ್ ಇಲಾಖೆಯ ಸಿಬ್ಬಂದಿಗಳ ಜೊತೆಗೆ ದಶ ಮಂಟಪ ಸಮಿತಿಯ ಪದಾಧಿಕಾರಿಗಳು ಕೂಡ ರಕ್ಷಣಾ ಕಾರ್ಯದಲ್ಲಿ ಸಹಕರಿಸಬೇಕು ಎಂದು ತಿಳಿಸಿದರು.

ಡಿವೈಎಸ್ಪಿ ಗಂಗಾಧರಪ್ಪ ಮಾತನಾಡಿ, ಮೆರವಣಿಗೆಯ ಸಂದರ್ಭ ಅನ್ಯ ಧರ್ಮದವರಿಗೆ ನೋವಾಗುವಂತಹಾ ಸಂಗೀತವನ್ನು ಹಾಕಬಾರದು. ಮತ್ತು ದಶಮಂಟಪಗಳು ಮೆರವಣಿಗೆಯಲ್ಲಿ ಕ್ರಮ ಬದ್ಧವಾಗಿ ಸಾಗುವ ಮೂಲಕ ಯಾವುದೇ ಸಂಚಾರಿ ಗೊಂದಲಕ್ಕೆ ಅವಕಾಶ ಮಾಡಿಕೊಡಬಾರದು. ಪೊಲೀಸ್ ಇಲಾಖೆಯಿಂದ ನೀಡಲಾಗುವ ಕೆಲ ಷರತ್ತುಗಳನ್ನು ಪ್ರತಿಯೊಬ್ಬರೂ ಕಡ್ಡಾಯವಾಗಿ ಪಾಲಿಸಬೇಕು. ದಶ ಮಂಟಪಗಳ ಮೆರವಣಿಗೆಯು ಯಶಸ್ವಿಯಾಗಿ ನೆರವೇರುವಂತೆ ಸಮಿತಿಯ ಪ್ರತಿಯೊಬ್ಬರು ಜಾಗೃತಿ ವಹಿಸಬೇಕು ಎಂದರು. ದಶಮಂಟಪ ಮೆರವಣಿಗೆಯ ಸಂದರ್ಭ ನಗರದ ಹೃದಯ ಭಾಗದಲ್ಲಿ ಆಗುವಂತಹ ಸಂಚಾರಿ ಅನಾನುಕೂಲದ ಬಗ್ಗೆ ಸಭೆಯಲ್ಲಿ ಹಾಜರಿದ್ದ ಕೆಲವರು ಎಸ್. ಪಿ. ಅವರ ಗಮನ ಸೆಳೆದರು.

ಸಭೆಯಲ್ಲಿ ಎ.ಎಸ್ಪಿ. ಸುಂದರ್ ರಾಜ್, ವೃತ್ತ ನಿರೀಕ್ಷಕರಾದ ರಾಜೇಶ್, ಪ್ರಕಾಶ್, ಠಾಣಾಧಿಕಾರಿಗಳಾದ ಚಂದ್ರಶೇಖರ್, ರವಿಕುಮಾರ್, ಭಾರತಿ, ಕಾಶೀನಾಥ್ ಬಗಲಿ, ಚಂದ್ರಪ್ಪ, ಕುಶಾಲನಗರ ವಕೀಲರ ಸಂಘದ ಅಧ್ಯಕ್ಷ ಆರ್.ಕೆ. ನಾಗೇಂದ್ರ ಬಾಬು, ದಶಮಂಟಪ ಸಮಿತಿ ಅಧ್ಯಕ್ಷ ಎಂ.ಡಿ. ಕೃಷ್ಣಪ್ಪ, ಕಾರ್ಯದರ್ಶಿ ದೇವರಾಜು, ಪ್ರಶಾಂತ್, ಪ್ರವೀಣ್, ಪುರಸಭಾ ಸದಸ್ಯ ಶೇಕ್ ಖಲೀಮುಲ್ಲಾ, ಸಂಘಸಂಸ್ಥೆಗಳ‌ ಪ್ರಮುಖರಾದ

ಎಚ್.ಟಿ. ವಸಂತ್, ಶಬೀರ್ ಅಹ್ಮದ್ ಮತ್ತಿತರರು ಹಾಜರಿದ್ದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!