ಕಾರ್ಯಕ್ರಮ

ಕೊಡಗು ವಿವಿಯಲ್ಲಿ ಪ್ರಚಾರೋಪನ್ಯಾಸ ಮಾಲೆ ಕಾರ್ಯಕ್ರಮ

ಕುಶಾಲನಗರ, ಅ 16: ಕನ್ನಡ ಭಾಷೆಯ ಬಗೆಗಿನ ತಾತ್ಸಾರ ಮನೋಭಾವದಿಂದ ಹೊರಬಂದು ಸಾವಿರಾರು ವರ್ಷಗಳ ಇತಿಹಾಸವನ್ನು ಹೊಂದಿರುವ ಕನ್ನಡ ಭಾಷೆಯ ಸಾಂಸ್ಕೃತಿಕ ಗರಿಮೆಯನ್ನು ಹೆಚ್ಚಿಸುವಲ್ಲಿ ಶ್ರಮಿಸಬೇಕು ಎಂದು ಕೊಡಗು ವಿಶ್ವವಿದ್ಯಾಲಯದ ಕುಲಪತಿಗಳಾದ ಪ್ರೊ. ಅಶೋಕ ಸಂ. ಆಲೂರ ಅವರು ಅಭಿಪ್ರಾಯಿಸಿದರು.

ಶಾಸ್ತ್ರೀಯ ಕನ್ನಡ ಅತ್ಯುನ್ನತ ಅಧ್ಯಯನ ಕೆಂದ್ರ, ಭಾರತೀಯ ಭಾಷಾ ಸಂಸ್ಥಾನ, ಉನ್ನತ ಶಿಕ್ಷಣ ಇಲಾಖೆ, ಶಿಕ್ಷಣ ಸಚಿವಾಲಯ, ಭಾರತ ಸರ್ಕಾರ, ಮಾನಸಗಂಗೋತ್ರಿ, ಮೈಸೂರು ಹಾಗೂ ಕೊಡಗು ವಿಶ್ವವಿದ್ಯಾಲಯದ ಸಹಯೋಗದೊಂದಿಗೆ ಜ್ಞಾನಕಾವೇರಿ ಆವರಣದ ಕಾವೇರಿ ಸಭಾಂಗಣದಲ್ಲಿ ಸೋಮವಾರದಂದು ನಡೆದ ಕಾರ್ಯಕ್ರಮದಲ್ಲಿ ಉದ್ಘಾಟನೆ ನೆರವೇರಿಸಿ, ಶಾಸ್ತ್ರೀಯ ಸ್ಥಾನಮಾನವನ್ನು ಹೊಂದಿರುವ ಕನ್ನಡ ನಾಡು-ನುಡಿ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸಬೇಕು. ಅತ್ಯಂತ ಶ್ರೀಮಂತ ಭಾಷೆಯಾಗಿರುವ ಕನ್ನಡ ಭಾಷೆಗೆ ಎಲ್ಲಾ ಕ್ಷೇತ್ರಗಳಲ್ಲೂ ಮೊದಲ ಆದ್ಯತೆ ನೀಡಬೇಕು. ಕೃಷಿ ವಿಜ್ಞಾನ, ವಚನ ಸಾಹಿತ್ಯ, ವೈದ್ಯಕೀಯ, ಪಶುಸಂಗೋಪನೆ ಮೊದಲಾದ ಕ್ಷೇತ್ರಗಳಿಗೂ ಕನ್ನಡ ಭಾಷೆಯನ್ನು ತಲುಪಿಸುವುದರ ಕಡೆಗೆ ಆದ್ಯತೆ ನೀಡಬೇಕು ಎಂದು ಸಲಹೆ ನೀಡಿದರು.

ಪ್ರಾಸ್ತಾವಿಕ ನುಡಿಗಳನ್ನಾಡಿದ ಶಾಸ್ತ್ರೀಯ ಕನ್ನಡ ಅತ್ಯುನ್ನತ ಅಧ್ಯಯನ ಕೆಂದ್ರದ ಯೋಜನಾ ನಿರ್ದೇಶಕರಾದ ಪ್ರೊ. ಎನ್. ಎಂ. ತಳವಾರ್ ಅವರು, ನಾಡಿನ ಹೆಸರಾಂತ ಹಿರಿಯ ವಿದ್ವಾಂಸರುಗಳಿಂದ ಸರಣಿ ಪ್ರಚಾರೋಪನ್ಯಾಸ ಮಾಲಿಕೆಗಳ ಮೂಲಕ ಕನ್ನಡ ನಾಡು-ನುಡಿ, ಸಂಸ್ಕೃತಿಯ ಬಗೆಗೆ ವಿಶೇಷ ಉಪನ್ಯಾಸಗಳನ್ನು ಆಯೋಜನೆ ಮಾಡಿ ವಿದ್ಯಾರ್ಥಿಗಳಿಗೆ ಮತ್ತು ಉಪನ್ಯಾಸಕರುಗಳಿಗೆ ಕನ್ನಡ ಸಾಹಿತ್ಯದ ಚಾರಿತ್ರಿಕ ಮಹತ್ವವನ್ನು ತಲುಪಿಸುವ ಉದ್ದೇಶದಿಂದ ಇಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.

ಹಿರಿಯ ವಿದ್ವಾಂಸರು ಮತ್ತು ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ವಿಶ್ರಾಂತ ಕನ್ನಡ ಪ್ರಾಧ್ಯಾಪಕರು ಆದ ಪ್ರೊ. ಆರ್ವಿಯೆಸ್ ಸುಂದರಂ ಅವರು, ‘ಕವಿರಾಜಮಾರ್ಗ: ಹೊಸ ಓದು’ ಎಂಬ ವಿಷಯದ ಕುರಿತು ವಿಶೇಷ ಉಪನ್ಯಾಸ ನೀಡುತ್ತಾ, ಕವಿರಾಜಮಾರ್ಗ ಕೃತಿಯಲ್ಲಿ ಅನೇಕ ಹೊಸ ವಿಷಯಗಳನ್ನು ಕೃತಿಕಾರ ಪರಿಚಯಿಸಿದ ಸಾಂಸ್ಕೃತಿಕ ವೈಶಿಷ್ಟ್ಯತೆಗಳನ್ನು ಹೊಸ ಓದಿನ ಮೂಲಕ ಕಂಡುಕೊಳ್ಳಬಹುದಾದ ಹಲವು ರೀತಿಯ ಬಗೆಗೆ ವಿಸ್ತಾರವಾಗಿ ತಿಳಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕೊಡಗು ವಿಶ್ವವಿದ್ಯಾಲಯದ ಕುಲಸಚಿವರಾದ ಡಾ. ಸೀನಪ್ಪ ಅವರು, ಜನ್ಮಕೊಟ್ಟ ತಾಯಿ ಮತ್ತು ಕನ್ನಡ ಭಾಷೆಯ ಮೇಲಿನ ಪ್ರೀತಿಗೆ ಎಂದೂ ಕುಂದು ಬಾರದಂತೆ ನಾವು ಕಾಪಾಡಿಕೊಳ್ಳಬೇಕು. ಅನ್ಯ ಭಾಷಿಗರನ್ನು ತನ್ನ ಭಾಷಿಗರನ್ನಾಗಿ ಪರಿವರ್ತಿಸುವ ಸಾಮರ್ಥ್ಯವನ್ನು ಹೊಂದಿರುವ ಕನ್ನಡ ಭಾಷೆಯು ಇತರ ಭಾಷೆಗಳಿಗೆ ಗೌರವ ನೀಡುವುದರ ಮೂಲಕ ಬೆಳೆಯುತ್ತಿದೆ. ಹಾಗಾಗಿ ಮಾತೃಭಾಷೆಯಾಗಿರುವ ಕನ್ನಡದ ಮೇಲಿನ ಪ್ರೀತಿಗೆ ಮೊದಲ ಆದ್ಯತೆ ನೀಡಬೇಕು ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಜ್ಞಾನಕಾವೇರಿ ಸ್ನಾತಕೋತ್ತರ ಕೇಂದ್ರದ ಪ್ರಭಾರ ನಿರ್ದೇಶಕರಾದ ಪ್ರೊ. ಕೆ. ಕೆ. ಧರ್ಮಪ್ಪ, ವಿವಿಧ ವಿಭಾಗದ ಉಪನ್ಯಾಸಕರು, ಆಡಳಿತ ವರ್ಗ, ಸ್ನಾತಕೋತ್ತರ ವಿದ್ಯಾರ್ಥಿಗಳು ಹಾಗೂ ಸಂಶೋಧನಾ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಕನ್ನಡ ವಿಭಾಗದ ಉಪನ್ಯಾಸಕರು ಮತ್ತು ಕಾರ್ಯಕ್ರಮದ ಸಂಯೋಜಕರಾದ ಡಾ. ಜಮೀರ್ ಅಹಮದ್ ಅವರು ಸ್ವಾಗತಿಸಿ, ಕನ್ನಡ ಉಪನ್ಯಾಸಕಿಯಾದ ಕು. ಅರ್ಪಿತ.ಎಂ ಅವರು ವಂದಿಸಿದರು. ವಿದ್ಯಾರ್ಥಿಯಾದ ಕು. ಸಂಜೀವ್ ಕಾರ್ಯಕ್ರಮವನ್ನು ನಿರೂಪಿಸಿದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!