ಕುಶಾಲನಗರ, ಅ 14: ಕುಶಾಲನಗರದ 5 ಸ್ಟಾರ್ ಫುಟ್ಬಾಲ್ ಕ್ಲಬ್ ಆಶ್ರಯದಲ್ಲಿ ಜಿಎಂಪಿ ಶಾಲಾ ಮೈದಾನದಲ್ಲಿ ಎರಡು ದಿನಗಳ ಕಾಲ ಹಮ್ಮಿಕೊಂಡಿರುವ ರಾಜ್ಯಮಟ್ಟದ ಸೂಪರ್-5 ಫುಟ್ಬಾಲ್ ಕ್ರೀಡಾಕೂಟಕ್ಕೆ ಚಾಲನೆ ನೀಡಲಾಯಿತು.
ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದ ಉದ್ಯಮಿ, ಸಮಾಜಕ ಸೇವಕ ಹರಪಳ್ಳಿ ರವೀಂದ್ರ ಕ್ರೀಡಾಕೂಟ ಉದ್ಘಾಟಿಸಿದರು. ನಂತರ ಮಾತನಾಡಿದ ಅವರು, ಸೈನಿಕರು, ಕ್ರೀಡಾಪಟುಗಳ ತವರೂರು ಕೊಡಗಿನಲ್ಲಿ ಕ್ರೀಡೆಯನ್ನು ಹಬ್ಬದಂತೆ ಸಂಭ್ರಮಿಸುತ್ತಾರೆ. ಆದರೆ ಇಲ್ಲಿನ ಕ್ರೀಡಾಪಟುಗಳಿಗೆ ಉತ್ತಮ ಪ್ರೋತ್ಸಾಹ ಲಭಿಸುತ್ತಿಲ್ಲ. ಕ್ರೀಡಾಪ್ರತಿಭೆಗಳನ್ನು ಗುರುತಿಸಿ ಅವರಿಗೆ ಅಗತ್ಯ ತರಬೇತಿ, ಸೌಲಭ್ಯಗಳನ್ನು ಕಲ್ಪಿಸಿ ರಾಷ್ಟ್ರ, ಅಂತರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿಗಳಿಸಲು ರಾಜಕಾರಣಿಗಳು ಸಹಕಾರ ನೀಡಬೇಕಿದೆ. ಕ್ರೀಡಾಪಟುಗಳು ಕಠಿಣ, ನಿರಂತರ ಪರಿಶ್ರಮದ ಮೂಲಕ ಯಶಸ್ಸಿಗೆ ಪ್ರಯತ್ನಿಸಬೇಕಿದೆ. ಪ್ರತಿಯೊಬ್ಬರೂ ಕೂಡ ವಿವಿಧ ಕ್ಷೇತ್ರಗಳಲ್ಲಿ ಪರಿಶ್ರಮದ ಮೂಲಕ ಸಾಧನೆ ತೋರಿ ಸಮಾಜದಲ್ಲಿ ತಮ್ಮ ಹೆಜ್ಜೆ ಗುರುತು ಮೂಡಿಸಿ ನಮ್ಮ ಜನನಕ್ಕೆ ಸಾರ್ಥಕತೆ ಉಂಟುಮಾಡಬೇಕಿದೆ ಎಂದರು.
ಅತಿಥಿಗಳಾಗಿ ಪಾಲ್ಗೊಂಡಿದ್ದ ನಂಜರಾಯಪಟ್ಟಣ ಗ್ರಾಪಂ ಸದಸ್ಯ ಮಾವಾಜಿ ರಕ್ಷಿತ್ ಮಾತನಾಡಿ, ಕ್ರೀಡಾಪಟುಗಳಿಗೆ ದೈಹಿಕ ಕ್ಷಮತೆ ಅಗತ್ಯ. ಉತ್ತಮ ಪ್ರದರ್ಶನ ತೋರಲು ದೈಹಿಕ ಹಾಗೂ ಮಾನಸಿಕವಾಗಿ ಸಬಲರಾಗಿರಬೇಕು. ನಿರಂತರ ಅಭ್ಯಾಸದ ಮೂಲಕ ಕ್ರೀಡಾಪಟುಗಳು ತಮ್ಮ ದೈಹಿಕ ಕ್ಷಮತೆ ವೃದ್ದಿಸಿಕೊಳ್ಳಬೇಕು ಎಂದರು.
ಕ್ಲಬ್ ಪ್ರಮುಖ ಸಾಹುಲ್, ಕ್ರೀಡಾಪಟುಗಳಾದ ರಿಜ್ವಾನ್, ನಂದೀಶ್, ಖಾಸಿಂ, ನಿಯಾಜ್, ಸುಹೇಲ್, ಸಾಹಿಲ್, ಜಕ್ರಿಯ, ಮಣಿ ಮತ್ತಿತರರು ಇದ್ದರು. ಕಾರ್ಯಕ್ರಮದಲ್ಲಿ ಹರಪಳ್ಳಿ ರವೀಂದ್ರ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ರಾಜ್ಯಾದ್ಯಂತ 20 ತಂಡಗಳು ಕ್ರೀಡಾಕೂಟದಲ್ಲಿ ಪಾಲ್ಗೊಂಡಿದ್ದವು.
Back to top button
error: Content is protected !!