ಕುಶಾಲನಗರ ಸೆ.26: ನಂಜರಾಯಪಟ್ಟಣ ಗ್ರಾಮ ಪಂಚಾಯ್ತಿಯ 2022-23ನೇ ಸಾಲಿನ ಜಮಾಬಂದಿ ಕಾರ್ಯಕ್ರಮ ಗ್ರಾಮದ ಅಂಗನವಾಡಿ ಕೇಂದ್ರದಲ್ಲಿ ಗ್ರಾಮ ಪಂಚಾಯತಿ ಅಧ್ಯಕ್ಷ ಸಿ.ಎಲ್.ವಿಶ್ವ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.
ಜಮಾಬಂಧಿ ಸಭೆಯಲ್ಲಿ ಹಾಜರಿದ್ದ ಗ್ರಾಮಸ್ಥರು 2022-23 ಸಾಲಿನಲ್ಲಿ ಕೈಗೊಳ್ಳಲಾದ ಕಾಮಗಾರಿಗಳ ವಿವರ, ಖರ್ಚು ವೆಚ್ಚ ಮತ್ತು ಮುಂದಿನ ದಿನಗಳಲ್ಲಿ ನಡೆಯಬೇಕಾಗಿರುವ ಕಾಮಗಾರಿಗಳ ಬಗ್ಗೆ ಚರ್ಚಿಸಿದರು. ಗ್ರಾಮ ವಿಕಾಸ ಯೋಜನೆಯ ಕಾಮಗಾರಿಗಳ ವಿವರ, ಪಂಚಾಯತಿ ನಿಧಿಯಡಿಯಲ್ಲಿ ಕೈಗೊಂಡಿದ್ದ ಕಾಮಗಾರಿಗಳ ವಿವರ ಮತ್ತು ಶೇ 25 ರಲ್ಲಿ ಮೀಸಲಿರಿಸಿದ್ದ ಅನುದಾನ ಸೇರಿದಂತೆ ವಾರ್ಷಿಕ ಯೋಜನೆಯ ಅಡಿಯಲ್ಲಿ ನಡೆದ ಕಾಮಗಾರಿಗಳ ಬಗ್ಗೆ ಚರ್ಚಿಸಿ ಸಭೆಯಲ್ಲಿ ಅನುಮೋದನೆ ಪಡೆಯಲಾಯಿತು.
ನಂತರ ಸಭೆ ಉದ್ದೇಶಿಸಿ ಮಾತನಾಡಿದ ಅಧ್ಯಕ್ಷ ಸಿ.ಎಲ್.ವಿಶ್ವ ಅವರು, ಈ ಹಿಂದಿನ ಆಡಳಿತ ಮಂಡಳಿ ಇದ್ದ ಸಂದರ್ಭ ಕೇವಲ 20 ರಿಂದ 30 ಲಕ್ಷದಷ್ಟಿದ್ದ ಪಂಚಾಯತ್ ಆದಾಯವನ್ನು ಇದೀಗ 90 ಲಕ್ಷಕ್ಕೆ ತಲುಪಿಸಲಾಗಿದೆ.
ಆರ್ಥಿಕ ಕ್ರೋಡೀಕರಣಕ್ಕೆ ಆದ್ಯತೆ ನೀಡಿ ಆಡಳಿತ ಮಂಡಳಿ ಹಾಗೂ ಅಧಿಕಾರಿಗಳ ಶ್ರಮದಿಂದ ಪಂಚಾಯತಿಯನ್ನು ಸರ್ವತೋಮುಖ ಅಭಿವೃದ್ಧಿಯತ್ತ ಕೊಂಡೊಯ್ಯಲಾಗುತ್ತಿದೆ. ವಾರ್ಡ್ ಸಭೆ, ಗ್ರಾಮಸಭೆ, ಜನಸ್ಪಂದನಾ ಕಾರ್ಯಕ್ರಮಗಳ ಮೂಲಕ ಜನರ ಸಮಸ್ಯೆಗಳನ್ನು ಮತ್ತಷ್ಟು ಸಮರ್ಪಕವಾಗಿ ಇತ್ಯರ್ಥಪಡಿಸಲು ಕಾರ್ಯಕ್ರಮ ರೂಪಿಸಲಾಗಿದೆ ಎಂದರು.
ಶಾಸಕರು, ಸಂಸದರ ನಿಧಿ ಸರಕಾರದ ಅನುದಾನಗಳನ್ನು ಮೀರಿದ ರೀತಿಯಲ್ಲಿ ಪಂಚಾಯ್ತಿ ಅನುದಾನದ ಮೂಲಕ ಗ್ರಾಮಗಳಲ್ಲಿ ಹಲವು ಅಭಿವೃದ್ಧಿ ಕಾಮಗಾರಿಗಳನ್ನು ಈಗಾಗಲೆ ಅನುಷ್ಠಾನಗೊಳಿಸಲಾಗಿದೆ ಎಂದರು.
ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳ ವರ್ಗಾವಣೆಯಿಂದ ಕಾರ್ಯದರ್ಶಿ ಹೆಗಲಿಗೆ ಎಲ್ಲಾ ಜವಾಬ್ದಾರಿಗಳು ಬೀಳಲಿದೆ. ತಾಂತ್ರಿಕವಾಗಿ ಕೆಲವು ಕಾರ್ಯದರ್ಶಿಗಳು ಹಿಂದಿರುವ ಕಾರಣ ಗ್ರಾಪಂ ಕೆಲಸ ಕಾರ್ಯಗಳು ಕುಂಠಿತವಾಗುವ ಹಿನ್ನಲೆಯಲ್ಲಿ ತೆರವಾದ ಸ್ಥಾನಗಳಿಗೆ ಸರಕಾರ ಶೀಘ್ರವಾಗಿ ಪಿಡಿಒಗಳ ನೇಮಿಸಲು ಕ್ರಮಕೈಗೊಳ್ಳುವಂತೆ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು.
ಸಭೆಯಲ್ಲಿ ಉಪಾಧ್ಯಕ್ಷೆ ಕುಸುಮ, ಅಭಿವೃದ್ಧಿ ಅಧಿಕಾರಿ ಕಲ್ಪ, ಕಾರ್ಯದರ್ಶಿ ಶೇಷಗಿರಿ, ನೋಡಲ್ ಅಧಿಕಾರಿ ಸಮಾಜ ಕಲ್ಯಾಣ ಇಲಾಖೆಯ ಸಿದ್ದೇಗೌಡ ಸೇರಿದಂತೆ ಸರ್ವ ಸದಸ್ಯರು, ಗ್ರಾಮಸ್ಥರು ಹಾಜರಿದ್ದರು.
Back to top button
error: Content is protected !!