ಸಭೆ

ಮದಲಾಪುರ: ಹಾಲು ಉತ್ಪಾದಕರ ಸಂಘದ ವಾರ್ಷಿಕ ಮಹಾಸಭೆ.

ಕುಶಾಲನಗರ, ಸೆ 15 ಮದಲಾಪುರ ಹಾಲು ಉತ್ಪಾದಕರ ಸಂಘ ನಿಯಮಿತದ ವಾರ್ಷಿಕ ಮಹಾಸಭೆ ಸಂಘದ ಅಧ್ಯಕ್ಷ ಎಸ್.ಎನ್.ಸುನಿಲ್ ರಾವ್ ಅಧ್ಯಕ್ಷತೆಯಲ್ಲಿ ಶುಕ್ರವಾರ ನಡೆಯಿತು.ಸಂಘದ ಆವರಣದಲ್ಲಿ ನಡೆದ ಮಹಾಸಭೆಯಲ್ಲಿ ಸಂಘದ ಬೆಳವಣಿಗೆಗೆ ಕುರಿತು ಚರ್ಚೆ ನಡೆಯಿತು. ಮದಲಾಪುರ ಸುತ್ತಮುತ್ತಲಿನ ಗ್ರಾಮಗಳಲ್ಲಿ ರೈತರು ಹೆಚ್ಚಾಗಿದ್ದು,ಕೃಷಿಯೊಂದಿಗೆ ಹೈನುಗಾರಿಕೆ ಕೈಗೊಂಡಿದ್ದಾರೆ. ಆದರೆ ಹಸುಗಳ ಆರೋಗ್ಯ ಸುಧಾರಣೆ ಪಶುವೈದ್ಯರು ಇಲ್ಲ.ಇದರಿಂದ ರೈತರು ಕಷ್ಟ ಪಟ್ಟು ಸಾಕಿದ ಹಸು,ಎಮ್ಮೆಗಳು ಕಾಲುಬಾಯಿ ರೋಗ,ಗಂಟಲು ರೋಗಗಳಿಂದ ಮೃತಪಟ್ಟಿವೆ ಎಂದು ಸದಸ್ಯ ಕರಿಯಯ್ಯ ಅಸಮಧಾನ ವ್ಯಕ್ತಪಡಿಸಿದರು. ತಿಂಗಳಿಗೆ ಎರಡು ಬಾರಿಯಾದರೂ ಹಾಲು ಉತ್ಪಾದಕರ ಸಂಘಕ್ಕೆ ವೈದ್ಯರನ್ನು ಕರೆಸಿ ಹಸುಗಳಿಗ ಸೂಕ್ತ ಚಿಕಿತ್ಸೆ ಕೊಡಿಸಲು ಕ್ರಮ ಕೈಗೊಳ್ಳಬೇಕು ಎಂದು ಸದಸ್ಯರು ಒತ್ತಾಯಿಸಿದರು.ಸದಸ್ಯ ಗಣೇಶ್ ಮಾತನಾಡಿ ಕಳೆದ ವರ್ಷ ಕಾರ್ಯದರ್ಶಿಯಾಗಿದ್ದ ವ್ಯಕ್ತಿ ಸಂಘಕ್ಕೆ ಕಟ್ಟಬೇಕಾದ ಬಾಕಿ ಹಣ ಬಗ್ಗೆ ಏನು ಕ್ರಮ ಕೈಗೊಂಡಿದ್ದಿರಿ ಎಂದು ಪ್ರಶ್ನಿಸಿದರು.ಇದಕ್ಕೆ ಉತ್ತರಿಸಿದ ಅಧ್ಯಕ್ಷ ಸುನಿಲ್ ರಾವ್ ಅವರು ರೂ.67.000 ಹಣ ಕಟ್ಟಬೇಕು.ಸಂಘದಲ್ಲಿಅವರಿಗೆ ಸಲ್ಲಬೇಕಾದ ರೂ. 30.000 ಗ್ಯಾಜುಟಿ ಹಣ ಇದೆ.ಉಳಿಕೆ ಹಣ ಕಟ್ಟುವಂತೆ ನೋಟಿಸ್ ನೀಡಲಾಗುತ್ತದೆ ಎಂದರು. ಸಂಘದ ನಿರ್ದೇಶಕರೇ ಬೇರೆ ಸಂಘಕ್ಕೆ ಹಾಲು ಪೂರೈಕೆ ಮಾಡುತ್ತಿರುವ ಬಗ್ಗೆ ಸದಸ್ಯರು ತೀವ್ರ ಅಸಮಧಾನ ವ್ಯಕ್ತಪಡಿಸಿದರು.ಹಾಸನ ಹಾಲು ಒಕ್ಕೂಟದ ನಿರ್ದೇಶಕ ಕೆ.ಕೆ.ಹೇಮಂತ್ ಕುಮಾರ್ ಮಾತನಾಡಿ, ಸಂಘದ ಸದಸ್ಯರು ಉತ್ತಮ ಗುಣಮಟ್ಟದ ಹಾಲು ಹಾಕುವ ಮೂಲಕ ಸಂಘದ ಬೆಳವಣಿಗೆಗೆ ಒತ್ತು ನೀಡಬೇಕು ಎಂದರು.ಕೆಲವರು ನೀರು ಮಿಶ್ರಿತ ಹಾಲು ಹಾಕುವುದರಿಂದ ಎಲ್ಲರಿಗೂ ತೊಂದರೆ ಆಗುತ್ತದೆ.ಉತ್ತಮ ಹಾಲಿಗೆ ಹಾಸನ ಹಾಲು ಒಕ್ಕೂಟದಿಂದ ಲೀಟರ್ ಗೆ ರೂ.34, ಕಡಿಮೆ ಗುಣಮಟ್ಟದ ಹಾಲಿಗೆ ರೂ.14 ನೀಡಲಾಗುತ್ತದೆ. ಇದರಿಂದ ಸಂಘಕ್ಕೆ ನಷ್ಟ ಆಗುತ್ತದೆ ಎಂದರು.ಎಲ್ಲಾ ಕಡೆ ಪಶುವೈದ್ಯರ ಕೊರತೆ ಇದೆ.ಆದರೂ ಹಾಸನದಿಂದ ತಜ್ಞ ಪಶುವೈದ್ಯರ‌ನ್ನು ಕರೆಸಿ ರೈತರಿಗೆ ಹೈನುಗಾರಿಕೆ ಬಗ್ಗೆ ತರಬೇತಿ ಕೊಡಿಸಲು ಪ್ರಯತ್ನಿಸುವುದಾಗಿ ಹೇಳಿದರು ‌ಪಡೆದ ಸಾಲವನ್ನು ಸರಿಯಾಗಿ ಮರುಪಾವತಿ ಮಾಡುತ್ತೇವೆ ಎನ್ನುವ ರೈತರಿಗೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಿಂದ ಹಸು ಖರೀದಿಗೆ ಸಾಲ ಸೌಲಭ್ಯ ಕಲ್ಪಿಸುವುದಾಗಿ ಹೇಮಂತ್ ಭರವಸೆ ನೀಡಿದರು.ಕೂಡಿಗೆ ಹಾಲಿನ ಡೈರಿ ವಿಸ್ತಾರಣಾಧಿಕಾರಿ ವೀಣಾ ಮಾತನಾಡಿ,ರೈತರು ಹೈನುಗಾರಿಕೆಗೆ ಹೆಚ್ಚಿನ ಒತ್ತು ನೀಡುವ ಮೂಲಕ ತಮ್ಮ ಆರ್ಥಿಕ ಮಟ್ಟವನ್ನು ಉತ್ತಮ ಪಡಿಸಿಕೊಳ್ಳಬೇಕು ಎಂದರು. ಹಾಸನ ಹಾಲು ಒಕ್ಕೂಟವು ರೈತರಿಗೆ ಎಲ್ಲಾ ರೀತಿ ನೆರವು ನೀಡುತ್ತಿದೆ. ಹಾಲು ಉತ್ಪಾದಕರಿಗೆ ವಾರ್ಷಿಕ ಬೋನಸ್ ಕೂಡ ನೀಡುತ್ತಿದೆ ಎಂದರು.ಮದಲಾಪುರ ಹಾಲು ಉತ್ಪಾದಕ ಸಂಘ 2023-24ನೇ ಸಾಲಿನ ಅಂದಾಜು ರೂ.21 .90 ಲಕ್ಷ ಎಂದರು.ಸದಸ್ಯರು ಹೆಚ್ಚಿನ ಹಾಲು ಹಾಕುವ ಮೂಲಕ ಸಂಘದ ಬೆಳವಣಿಗೆಗೆ ಕಾರಣರಾಗಬೇಕು ಎಂದರು.

ಸಂಘದ ಅಧ್ಯಕ್ಷ ಎಸ್.ಎನ್.ಸುನಿಲ್ ರಾವ್ ಮಾತನಾಡಿ, ನಮ್ಮ ಸಂಘಕ್ಕೆ ದಿನನಿತ್ಯ ಹತ್ತು ಕ್ಯಾನ್ ಗಳಷ್ಟು ಹಾಲು ಬರುತ್ತಿತ್ತು. ಆದರೆ ಈಗ ಹಾಲು ಕಡಿಮೆ ಆಗಿದೆ.ಸದಸ್ಯರು ಹೆಚ್ಚಿನ ಹಾಲು ಹಾಕಬೇಕು.ಸದಸ್ಯರ ಹಿತಕಾಯಲು ಸಂಘವು ಬದ್ಧವಾಗಿದೆ. ಮುಂದಿನ ವಾರದಿಂದ 10 ದಿನಕ್ಕೆ ಒಮ್ಮೆ ಹಣ ಪಾವತಿ ಮಾಡಲು ಕ್ರಮ ಕೈಗೊಳ್ಳಲಾಗುತ್ತದೆ.ಹಾಸನ ಹಾಲು ಒಕ್ಕೂಟ ದಿಂದ ರೂ.1.5 ಲಕ್ಷ ಬರಬೇಕಾಗಿದ್ದು,ಬಂದ ನಂತರ ಎಲ್ಲರಿಗೂ ಹಣ ಪಾವತಿಸಲಾಗುತ್ತದೆ ಎಂದರು.

ಕಳೆದ 32 ವರ್ಷ ಸಂಘದ ಅಧ್ಯಕ್ಷರಾಗಿ ಸೇವೆ ಸಲ್ಲಿಸುವ ಮೂಲಕ ದಿ.ಎಸ್.ಎನ್.ರಾಜಾರಾವ್ ಸಂಘದ ಏಳಿಗೆಗೆ ಶ್ರಮಿಸಿದ್ದಾರೆ.ಅವರ ಜ್ಞಾಪಕಾರ್ಥವಾಗಿ ರೂ.2 ಲಕ್ಷ ದೇಣಿಗೆಯನ್ನು ಸಂಘಕ್ಕೆ ನೀಡುವುದಾಗಿ ಘೋಷಣೆ ಮಾಡಿದರು.

ಸಂಘದ ಕಾರ್ಯದರ್ಶಿ ಎಂ.ಎನ್.ಯೋಗೇಶ್ ಕಳೆದ ಸಾಲಿನ ವರದಿ ವಾಚಿಸಿ ಅನುಮೋದನೆ ಪಡೆದರು.

ಈ ಸಂದರ್ಭ ಸಂಘದ ಉಪಾಧ್ಯಕ್ಷ ಪುಟ್ಟಣಯ್ಯ,ನಿರ್ದೇಶಕರಾದ ವಿ.ಸಿ.ಸುರೇಶ್, ದೇವಿರಮ್ಮ,ದೇವರಾಜ,ಎಚ್.ವಿ.ವೈರಮುಡಿ,ಡಿ.ಬಿ.ದೇವಯ್ಯ ಇದ್ದರು. ಇದೇ ವೇಳೆ ಸಂಘಟಕ ಅತಿ ಹೆಚ್ಚು ಹಾಲು ಹಾಕಿದ‌ರಿಗೆ ಹಾಗೂ ಐವತ್ತು ಮೇಲ್ಪಟ್ಟ ಅನೇಕ ವರ್ಷಗಳಿಂದ ಹಾಲು ಹಾಕುತ್ತಿರುವವರಿಗೆ ಬಹುಮಾನ ವಿತರಣೆ ಮಾಡಲಾಯಿತು. ಸಭೆ ಮೊದಲಿಗೆ ಮೃತಪಟ್ಟ ಸದಸ್ಯರಿಗೆ ಮೌನಾಚರಣೆ ಮೂಲಕ ಶ್ರದ್ಧಾಂಜಲಿ ಸಲ್ಲಿಸಲಾಯಿತು.

Related Articles

Leave a Reply

Your email address will not be published. Required fields are marked *

Back to top button
error: Content is protected !!