ಕುಶಾಲನಗರ, ನ 29:
ರಾಜ್ಯ ಸರ್ಕಾರವು ಜ್ಞಾನಕಾವೇರಿ ಸ್ನಾತಕೋತ್ತರ ಕೇಂದ್ರವನ್ನು ನೂತನ ಕೊಡಗು ವಿಶ್ವವಿದ್ಯಾನಿಲಯವಾಗಿ ಘೋಷಣೆ ಮಾಡಿರುವುದು ಸಂತಸ ತಂದಿದೆ ಎಂದು ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಅವರು ತಿಳಿಸಿದರು.
ಚಿಕ್ಕ ಅಳುವಾರದಲ್ಲಿರುವ ಮಂಗಳೂರು ವಿಶ್ವವಿದ್ಯಾನಿಲಯ ಜ್ಞಾನಕಾವೇರಿ ಸ್ನಾತಕೋತ್ತರ ಕೇಂದ್ರದ ವಿಜ್ಞಾನ ಸಂಕೀರ್ಣದಲ್ಲಿ ಹಮ್ಮಿಕೊಂಡಿದ್ದ 67ನೇ ಕನ್ನಡ ರಾಜ್ಯೋತ್ಸವ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು, ವಿದ್ಯಾರ್ಥಿಗಳಿಗೆ ಉತ್ತಮ ಗುಣಮಟ್ಟದ ಉನ್ನತ ಶಿಕ್ಷಣವನ್ನು ನೀಡುತ್ತಾ ಉತ್ತಮ ಕಾರ್ಯಚಟುವಟಿಕೆಗಳನ್ನು ಮತ್ತು ಉತ್ತಮ ಬೋಧನಾ ವ್ಯವಸ್ಥೆಯನ್ನು ಹೊಂದಿರುವ ಈ ಸಂಸ್ಥೆಯ ಸರ್ವತ್ತೋಮುಖ ಅಭಿವೃದ್ಧಿಗೆ ಸಹಕಾರ ನೀಡಲಾಗುವುದು. ಮುಂದಿನ ದಿನಗಳಲ್ಲಿ ಇನ್ನೂ ಹಲವಾರು ಕೋರ್ಸ್ಗಳನ್ನು ಪ್ರಾರಂಭಿಸುವುದಕ್ಕೆ ಉತ್ತೇಜನ ನೀಡಲಾಗುವುದು. ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ಗಮನ ಸೆಳೆದು ಕೊಡಗು ವಿಶ್ವವಿದ್ಯಾನಿಲಯವನ್ನು ಒಂದು ಮಾದರಿ ವಿಶ್ವವಿದ್ಯಾನಿಲಯವಾಗಿ ರೂಪುಗೊಳಿಸುವಲ್ಲಿ ಹಗಲಿರುಳು ಶ್ರಮಿಸಲಾಗುವುದು. ಕೊಡಗು ಸುತ್ತಮುತ್ತಲ ಜಿಲ್ಲೆಗಳ ವಿದ್ಯಾರ್ಥಿಗಳಿಗೆ ಉತ್ತಮ ಭವಿಷ್ಯವನ್ನು ರೂಪಿಸುವಲ್ಲಿ ಜ್ಞಾನಕಾವೇರಿ ಸ್ನಾತಕೋತ್ತರ ಕೇಂದ್ರವು ಒಂದು ಉತ್ತಮ ಸಂಸ್ಥೆಯಾಗಿದೆ ಎಂದು ತಿಳಿಸಿದರು.
ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಆಗಮಿಸಿದ ಹಾಸನ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲೆ ಪ್ರೊ. ಕವಿತಾ ಅವರು ಮಾತನಾಡಿ, ಭಾಷೆ ಉಳಿಯಬೇಕಾದರೆ ಹೆಚ್ಚಾಗಿ ಬಳಕೆಯಾಗಬೇಕು. ಅತೀ ಹೆಚ್ಚು ಕನ್ನಡ ಭಾಷೆ ಬಳಕೆ ಆಗುತ್ತಿರುವುದು ಗ್ರಾಮೀಣ ಪ್ರದೇಶಗಳಲ್ಲಿ, ಹಳ್ಳಿಗರು ಬಳಸುತ್ತಿರುವ ಭಾಷೆ ಇತ್ತೀಚಿನ ದಿನಗಳಲ್ಲಿ ಬದಲಾಗುತ್ತಿದೆ. ಅದಕ್ಕೆ ಸಮೂಹ ಮಾಧ್ಯಮ ಪ್ರಮುಖ ಕಾರಣ. ಅಚ್ಚಗನ್ನಡದ ಅನೇಕ ಪದಗಳು ಮರೆಯಾಗುತ್ತಿವೆ. ಅಮ್ಮನ ಗರ್ಭಕೋಶದಿಂದಲೇ ಅರ್ಥೈಸಿಕೊಂಡ ಭಾಷೆ ಮಾತೃಭಾಷೆ. ಕನ್ನಡಿಗರ ನಿರಾಭಿಮಾನದ ಬಗ್ಗೆ ಅರಿವಿಗೆ ಬರಬೇಕಾದರೆ ರಾಜ್ಯ ಬಿಟ್ಟು ಹೊರಗಡೆ ಹೋದಾಗ ಮಾತ್ರ ಕನ್ನಡ ಭಾಷೆಯ ವೈಶಿಷ್ಟ್ಯ ತಿಳಿಯುತ್ತದೆ. ಹೀಗಾಗಿಯೇ ಕನ್ನಡಕ್ಕೆ ಒಂದು ಕಾವಲು ಸಮಿತಿ ಬೇಕಾಯಿತು. ಮಾತೃಭಾಷೆ ಭಾವನೆಗಳನ್ನು ಕೆರಳಿಸುತ್ತದೆ. ಕನ್ನಡ ಎನ್ನುವುದು ಆಪ್ತವಾದುದು, ಪ್ರೀತಿಗೂ ಬೈಗುಳಕ್ಕೂ ಬಳಸುವ ಭಾಷೆ ಮಾತೃಭಾಷೆ ಮಾತೃಭಾಷೆಗೆ ಬದಲಿ ವ್ಯವಸ್ಥೆ ಇಲ್ಲ ಎಂದು ಮಾತೃಭಾಷೆಯ ಪ್ರಾಮುಖ್ಯತೆಯನ್ನು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಜ್ಞಾನಕಾವೇರಿ ಸ್ನಾತಕೋತ್ತರ ಕೇಂದ್ರದ ಪ್ರಭಾರ ನಿರ್ದೇಕ ಡಾ. ಕೆ. ಕೆ. ಧರ್ಮಪ್ಪ ಅವರು, ನಮ್ಮ ಸಂಸ್ಥೆಯು ಉನ್ನತ ಶಿಕ್ಷಣವನ್ನು ಗ್ರಾಮೀಣ ಪ್ರದೇಶದಲ್ಲಿ ಸಹ ಲಭ್ಯವಾಗುವಂತೆ ಮಾಡಿದೆ. ಮೂಲಭೂತ ಸೌಕರ್ಯಗಳೊಂದಿಗೆ ಇಂದು ಕೊಡಗು ವಿಶ್ವವಿದ್ಯಾನಿಲಯವಾಗಿ ಘೋಷಣೆಗೊಂಡಿದೆ. ನಮ್ಮ ಸಂಸ್ಥೆಗೆ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಪ್ರವೇಶಾತಿ ಪಡೆಯುವುದಕ್ಕೆ ಎಲ್ಲರ ಸಹಕಾರ ಬೇಕು ಎಂದು ನುಡಿದರು.
ಕೊಡಗು ವಿಶ್ವವಿದ್ಯಾನಿಲಯವಾಗಿ ರೂಪುಗೊಳ್ಳುವಲ್ಲಿ ಪ್ರಮುಖ ಪಾತ್ರವಹಿಸಿದ ಮಡಿಕೇರಿ ವಿಧಾನಸಭಾ ಸದಸ್ಯರು ಮತ್ತು ಜ್ಞಾನಕಾವೇರಿ ಸ್ನಾತಕೋತ್ತರ ಕೇಂದ್ರದ ಅಭಿವೃದ್ಧಿ ಸಲಹಾ ಸಮಿತಿ ಅಧ್ಯಕ್ಷರು ಆದ ಎಂ.ಪಿ. ಅಪ್ಪಚ್ಚು ರಂಜನ್ ಅವರಿಗೆ ಸಂಸ್ಥೆಯ ಪರವಾಗಿ ಅಭಿನಂದನೆಗಳನ್ನು ಸಲ್ಲಿಸಲಾಯಿತು.
ಕಾರ್ಯಕ್ರಮದಲ್ಲಿ ಸೂಕ್ಷ್ಮಾಣು ಜೀವವಿಜ್ಞಾನ ವಿಭಾಗದ ಮುಖ್ಯಸ್ಥ ಡಾ. ಬಿ.ಎಸ್. ಗುಣಶ್ರೀ, ತೊರೆನೂರು ಗ್ರಾಮ ಪಂಚಾಯತಿ ಅಧ್ಯಕ್ಷೆ ರೂಪ ಮಹೇಶ್, ಉಪಾಧ್ಯಕ್ಷ ಬೇಬಿ, ಸದಸ್ಯರಾದ ಕೆ.ಬಿ.ದೇವರಾಜ್, ಶಿವಕುಮಾರ್, ಯಶೋಧ, ಶೋಭಾ ಪ್ರಕಾಶ್, ಮುಖಂಡ ಶಿವಪ್ಪ, ದಿನೇಶ್, ಸಹಾಯಕ ಪ್ರಾಧ್ಯಾಪಕ ಡಾ. ಐ.ಕೆ. ಮಂಜುಳಾ, ಕನ್ನಡ ಉಪನ್ಯಾಸಕಿ ಕು. ಅರ್ಪಿತಾ ಜಮೀರ್ ಅಹಮದ್, ಕೆ.ಎಸ್.ಶ್ರೀನಿವಾಸ್, ಡಾ.ರಮೇಶ್ ಸೇರಿದಂತೆ
ವಿವಿಧ ವಿಭಾಗದ ಉಪನ್ಯಾಸಕರು, ಆಡಳಿತ ಸಿಬ್ಬಂದಿಗಳು, ತಾಂತ್ರಿಕ ವರ್ಗ, ಸ್ನಾತಕೋತ್ತರ ವಿದ್ಯಾರ್ಥಿಗಳು, ಸಂಶೋಧನಾ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
Back to top button
error: Content is protected !!