ಕುಶಾಲನಗರ, ನ 28: ಕುಶಾಲನಗರ ಪಟ್ಟಣದ ಗುಂಡೂರಾವ್ ಬಡಾವಣೆಯಲ್ಲಿ ಪಟ್ಟಣ ಪಂಚಾಯಿತಿ ವತಿಯಿಂದ ಕೈಗೊಂಡಿರುವ ವಿವಿಧ ಕಾಮಗಾರಿಗಳಿಗೆ ಸೋಮವಾರ ಶಾಸಕ ಎಂ.ಪಿ.ಅಪ್ಪಚ್ಚುರಂಜನ್ ಭೂಮಿ ಪೂಜೆ ನೆರವೇರಿಸಿದರು.
ಗುಂಡೂರಾವ್ ಬಡಾವಣೆಯಲ್ಲಿ 3.2 ಕಿಲೋಮೀಟರ್ ಉದ್ದದ ರೂ.1.22 ಕೋಟಿ ವೆಚ್ಚದ ಒಳಚರಂಡಿ ಕಾಮಗಾರಿ
ಹಾಗೂ ರೂ.42.5 ಲಕ್ಷ ವೆಚ್ಚದಲ್ಲಿ ನೇಮಿರಾಜ್ ಅವರ ಮನೆಯಿಂದ ನವೀನ್ ಅವರ ಮನೆ ತನಕ 400 ಮೀಟರ್ ಉದ್ದದ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಶಾಸಕರು ಚಾಲನೆ ನೀಡಿದರು. ಅದೇ ರೀತಿ ಪಂಚಾಯಿತಿ ವತಿಯಿಂದ ರೂ.32 ಲಕ್ಷ ವೆಚ್ಚದಲ್ಲಿ ನೂತನವಾಗಿ ಖರೀದಿಸಿರುವ ಹಿಟಾಚಿ ವಾಹನಕ್ಕೆ ಪೂಜೆ ಸಲ್ಲಿಸಿ ಚಾಲನೆ ಮಾಡುವ ಮೂಲಕ ಉದ್ಘಾಟಿಸಿದರು. ಈ ಸಂದರ್ಭ ಮಾತನಾಡಿದ ಶಾಸಕರು, ನಗರೋತ್ಥಾನ ಯೋಜನೆಯಡಿ ಪಂಚಾಯಿತಿಗೆ ಬಿಡುಗಡೆಯಾದ ರೂ.5 ಕೋಟಿ ವೆಚ್ಚದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ. ಮಳೆ ಇದ್ದ ಕಾರಣ ಕೆಲವು ಕಾಮಗಾರಿಗಳು ವಿಳಂಬವಾಗಿವೆ. ತ್ವರಿತಗತಿಯಲ್ಲಿ ಎಲ್ಲಾ ಕಾಮಗಾರಿಗಳನ್ನು ಪೂರ್ಣಗೊಳಿಸಲು ಕ್ರಮ ಕೈಗೊಳ್ಳಲಾಗುತ್ತದೆ. ಅದೇ ರೀತಿ ರೂ.5 ಕೋಟಿ ಅನುದಾನದಲ್ಲಿ ಸೋಮವಾರಪೇಟೆಯಲ್ಲಿ ವಿವಿಧ ಕಾಮಗಾರಿ ಆರಂಭಗೊಂಡಿದೆ. ಕುಶಾಲನಗರ ತಾಲ್ಲೂಕು ಆಡಳಿತ ಭವನ ನಿರ್ಮಾಣಕ್ಕೆ ರೂ.10 ಕೋಟಿ ಅನುದಾನ ಕೋರಲಾಗಿದ್ದು,ಕಂದಾಯ ಸಚಿವರು ಅನುದಾನ ಬಿಡುಗಡೆ ಮಾಡುವ ಭರವಸೆ ನೀಡಿದ್ದಾರೆ.ಅನುದಾನ ಬಿಡುಗಡೆಯಾದ ಕೂಡಲೇ ಆಡಳಿತ ಭವನ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಹೇಳಿದರು.
ಈ ಸಂದರ್ಭ ಪಟ್ಟಣ ಪಂಚಾಯಿತಿ ಅಧ್ಯಕ್ಷ ಬಿ.ಜೈವರ್ಧನ್, ಉಪಾಧ್ಯಕ್ಷೆ ಸುರಯ್ಯಬಾನು, ಸದಸ್ಯರಾದ ಡಿ.ಕೆ.ತಿಮ್ಮಪ್ಪ,ಸುರೇಶ್,ವಿ.ಎಸ್.ಆನಂದ್ ಕುಮಾರ್,ಯೋಜನಾ ಪ್ರಾಧಿಕಾರದ ಅಧ್ಯಕ್ಷ ಎಂ.ಎಂ.ಚರಣ್,ನಿರ್ದೇಶಕ ವೈಶಾಖ್,ಜಲಾಮಂಡಳಿ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಅಜಯ್, ಸಹಾಯಕ ಎಂಜಿನಿಯರ್ ಆನಂದ್, ಪಟ್ಟಣ ಪಂಚಾಯಿತಿ ಎಂಜಿನಿಯರ್ ರಂಗನಾಥ್,ಆರೋಗ್ಯ ಅಧಿಕಾರಿ ಉದಯಕುಮಾರ್,ಕೂಡುಮಂಗಳೂರು ಗ್ರಾಮ ಪಂಚಾಯತಿ ಉಪಾಧ್ಯಕ್ಷ ಭಾಸ್ಕರ್ ನಾಯಕ್,ಪ್ರವೀಣ್ ಮತ್ತಿತರರು ಇದ್ದರು.
Back to top button
error: Content is protected !!