ಸುದ್ದಿಗೋಷ್ಠಿ

ನ.15 ರಂದು ಕುಶಾಲನಗರದ ಚೇಂಬರ್ ಆಫ್ ಕಾಮರ್ಸ್ ನ ವಾರ್ಷಿಕ ಮಹಾಸಭೆ

ಕುಶಾಲನಗರ, ನ.11: ಕುಶಾಲನಗರದ ಚೇಂಬರ್ ಆಫ್ ಕಾಮರ್ಸ್ ನ ವಾರ್ಷಿಕ ಮಹಾಸಭೆಯನ್ನು ನವೆಂಬರ್ 15ರಂದು ಹಮ್ಮಿಕೊಳ್ಳಲಾಗಿದೆ ಎಂದು ಚೇಂಬರ್ ಅಧ್ಯಕ್ಷ ಕೆ.ಎಸ್.ನಾಗೇಶ್ ತಿಳಿಸಿದರು.

ಚೇಂಬರ್ ನ ಕಚೇರಿಯಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಂಸ್ಥೆಯನ್ನು 1990 ರಿಂದ ಅತ್ಯಂತ ಬಲಿಷ್ಠವಾಗಿ ಮುನ್ನಡೆಸಿಕೊಂಡು ಬರಲಾಗಿದೆ. ಈಗಿನ ಆಡಳಿತ ಮಂಡಳಿ ಬಂದ ಮೇಲೆ ಸಾಕಷ್ಟು ಸೇವಾ ಕಾರ್ಯಗಳನ್ನು ಮಾಡುವ ಮೂಲಕ ಜನರ ಮಧ್ಯಕ್ಕೆ ಕೊಂಡೊಯ್ಯುವಲ್ಲಿ ಶ್ರಮಿಸುತ್ತಿದೆ. ಸಂಸ್ಥೆಯನ್ನು ಇನ್ನಷ್ಟು ಬಲಿಷ್ಠಗೊಳಿಸಲು ಮಹಾಸಭೆ ಅತ್ಯವಶ್ಯಕವಾಗಿದ್ದು ಚಿಕ್ಕಣ್ಣ ಬಡಾವಣೆಯಲ್ಲಿರುವ ಸಂಸ್ಥೆಯ ಸ್ವಂತ ನಿವೇಶನದಲ್ಲಿ ಮಹಾಸಭೆ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.
ಮಹಾಸಭೆಗೆ ಮುಖ್ಯ ಅತಿಥಿಗಳಾಗಿ ಮೈಸೂರು ಜಿಲ್ಲಾ ಚೇಂಬರ್ ಅಧ್ಯಕ್ಷ ಡಾ. ಕೆ.ಐ.ಲಿಂಗರಾಜು, ಕೊಡಗು ಜಿಲ್ಲಾ ಚೇಂಬರ್ ಆಫ್ ಕಾಮರ್ಸ್ ಅಧ್ಯಕ್ಷ ಬಿ.ಆರ್. ನಾಗೇಂದ್ರ ಪ್ರಸಾದ್ ಆಗಮಿಸಲಿದ್ದಾರೆ.

ಸಂಸ್ಥೆ ಸ್ಥಾಪನೆಗೆ ಶ್ರಮಿಸಿದ ಬಿ.ಆರ್.ನಾರಾಯಣ್ ಅವರನ್ನು ಸನ್ಮಾನಿಸಲಾಗುವುದು. ಹಾಗೆಯೇ ಈ ವರ್ಷದಿಂದ ಪ್ರತಿ ವರ್ಷ ಉದ್ಯಮದಲ್ಲಿ ಸಾಧನೆ ಮಾಡಿದವರಿಗೆ ‘ಬಿಸಿನೆಸ್ ಎಕ್ಸಲೆನ್ಸ್ ಅವಾರ್ಡ್’ ನೀಡಲು ತೀರ್ಮಾನಿಸಲಾಗಿದೆ. ಮೊದಲ ಪ್ರಶಸ್ತಿಯನ್ನು ಉದ್ಯಮಿ ಟಿ.ಎಲ್. ಪ್ರವೀಣ್ ಅವರಿಗೆ ನೀಡಲಾಗುವುದು ಎಂದು ತಿಳಿಸಿದರು.
ಕುಶಾಲನಗರ ಪುರಸಭಾ ವ್ಯಾಪ್ತಿಯಲ್ಲಿ ಉದ್ಯಮ ನಡೆಸುವವರು ರೂ. 1500 ಶುಲ್ಕ ಪಾವತಿಸಿ ಸದಸ್ಯರಾಗಬಹುದು. ಇದು ಯಾವುದೇ ಜಾತಿ, ಧರ್ಮ, ರಾಜಕೀಯಕ್ಕೆ ಸಂಬಂಧಿಸಿದ್ದಲ್ಲ, ಕೇವಲ ವ್ಯಾಪಾರಸ್ಥರ ಹಿತಕ್ಕಾಗಿ ಇರುವ ಸಂಸ್ಥೆಯಾಗಿದೆ. ಪ್ರಸ್ತುತ 300 ಸದಸ್ಯರಿದ್ದು, 600ಕ್ಕೆ ಏರಿಸುವ ಗುರಿ ಹೊಂದಲಾಗಿದೆ. ಕೂಡಿಗೆಯಿಂದ ಗುಡ್ಡೆಹೊಸೂರು ತನಕ ವ್ಯಾಪ್ತಿ ವಿಸ್ತರಿಸುವ ಯೋಜನೆ ಇದೆ, ಅದನ್ನು ಮಹಾಸಭೆಯಲ್ಲಿ ಅನುಮೋದನೆ ಪಡೆದುಕೊಂಡು ಕಾರ್ಯಚಟುವಟಿಕೆ ವಿಸ್ತರಣೆ ಮಾಡಿಕೊಳ್ಳಲಾಗುವುದು ಎಂದು ತಿಳಿಸಿದರು.

ಮುಂದಿನ ಬೃಹತ್ ಯೋಜನೆಗಳ ಬಗ್ಗೆ ಸಭೆಯಲ್ಲಿ ಚರ್ಚಿಸಿ ಕೈಗೆತ್ತಿಕೊಳ್ಳಲಾಗುತ್ತದೆ. ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಎಂದು ಕಾರ್ಯದರ್ಶಿ ಚಿತ್ರಾ ರಮೇಶ್ ಮನವಿ ಮಾಡಿದರು.
ಗೋಷ್ಠಿಯಲ್ಲಿ
ಕೋಶಾಧಿಕಾರಿ ಎನ್.ವಿ.ಬಾಬು,
ನಿರ್ದೇಶಕರಾದ ಮುಕೇಶ್ ಜೈನ್, ಅಶ್ವಿನಿ ರೈ ಉಪಸ್ಥಿತರಿದ್ದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!