ಕುಶಾಲನಗರ, ಅ 12: 2023ರ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ನಾಪಂಡ ಮುತ್ತಪ್ಪ ಅವರು, ಚುನಾವಣೆಯ ನಿರ್ಣಾಯಕ ಸಂದರ್ಭದಲ್ಲಿ ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡಿದ್ದೀರಿ ಎಂಬುದು ನಿಮ್ಮ ರಾಜಕೀಯ ನಡೆ ಕುರಿತು ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ ಎಂದು ಮಂಡಲ ಬಿಜೆಪಿ ಯುವಮೋರ್ಚಾ ಕಾರ್ಯದರ್ಶಿ ಸುಮನ್ ಆರೋಪಿಸಿದ್ದಾರೆ.
ನೀವು ಅಂದು ನಡೆದುಕೊಂಡ ರೀತಿಯಿಂದ ಕಾಂಗ್ರೆಸ್ ಅಭ್ಯರ್ಥಿ ಮಂತರ್ ಗೌಡ ಅವರಿಗೆ ಅನುಕೂಲವಾಯಿತು ಎಂಬುದು ರಾಜಕೀಯ ವಲಯದಲ್ಲಿ ಚರ್ಚೆಯ ವಿಷಯವಾಗಿದೆ. ಇದು ಕೇವಲ ಕಾಕತಾಳೀಯವೇ ಅಥವಾ ಅದರ ಹಿಂದೆ ರಾಜಕೀಯ ಲೆಕ್ಕಾಚಾರವಿತ್ತೇ ಎಂಬ ಪ್ರಶ್ನೆಗೆ ನಿಮ್ಮಿಂದಲೇ ಸ್ಪಷ್ಟನೆ ಬರಬೇಕಿದೆ.
ಈಗ ಅದೇ ನೀವು, ಜಿಲ್ಲಾ ಪಂಚಾಯಿತಿ ಚುನಾವಣೆಯಲ್ಲಿ ಸಾಮಾನ್ಯ ಕ್ಷೇತ್ರದ ಮೀಸಲಾತಿ ದೊರೆತರೆ ಪ್ರಬಲ ಆಕಾಂಕ್ಷಿ ಎಂದು ಹೇಳುತ್ತಿರುವುದು ರಾಜಕೀಯ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ.
ನಿಮ್ಮನ್ನು ಪ್ರಶ್ನಿಸುವುದು ತಪ್ಪಲ್ಲ; ಏಕೆಂದರೆ ರಾಜಕೀಯದಲ್ಲಿ ಜನರ ಮುಂದೆ ನಿಲುವು ಸ್ಪಷ್ಟಪಡಿಸುವುದು ಪ್ರತಿಯೊಬ್ಬ ನಾಯಕನ ಜವಾಬ್ದಾರಿ.
#ಅಂದು ಜೆಡಿಎಸ್ನಿಂದ ಸ್ಪರ್ಧಿಸಿದ ನೀವು, ಕೊನೆಯ ಕ್ಷಣದಲ್ಲಿ ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡಿದ್ದರ ಹಿಂದಿನ ಕಾರಣವೇನು?
#ನಿಮ್ಮ ನಡೆ ಕಾಂಗ್ರೆಸ್ ಅಭ್ಯರ್ಥಿಗೆ ಅನುಕೂಲವಾಯಿತು ಎಂಬ ಆರೋಪಕ್ಕೆ ನಿಮ್ಮ ಉತ್ತರವೇನು?
# ಜೆಡಿಎಸ್ನಿಂದ ಸ್ಪರ್ಧಿಸಿದ ನಿಮ್ಮ ರಾಜಕೀಯ ಪಯಣ ಈಗ ಕಾಂಗ್ರೆಸ್ನೊಂದಿಗೆ ಹೇಗೆ ಮುಂದುವರಿಯುತ್ತಿದೆ?
# ಜಿಲ್ಲಾ ಪಂಚಾಯಿತಿಗೆ ಸ್ಪರ್ಧಿಸುವ ಮುನ್ನ ನಿಮ್ಮ ಹಿಂದಿನ ರಾಜಕೀಯ ನಡೆ ಬಗ್ಗೆ ಜನರಿಗೆ ಸ್ಪಷ್ಟನೆ ನೀಡುವಿರಾ?
ರಾಜಕೀಯದಲ್ಲಿ ಚುನಾವಣೆಗೆ ಸ್ಪರ್ಧಿಸುವುದು ಪ್ರತಿಯೊಬ್ಬರ ಹಕ್ಕು. ಆದರೆ ಹಿಂದೆ ತೆಗೆದುಕೊಂಡ ನಿರ್ಧಾರಗಳು ಮತ್ತು ಈಗಿನ ರಾಜಕೀಯ ನಿಲುವುಗಳ ಬಗ್ಗೆ ಜನರು ಪ್ರಶ್ನಿಸಿದಾಗ ಉತ್ತರ ನೀಡುವುದೂ ಅಷ್ಟೇ ಮುಖ್ಯ.
ನಿನ್ನೆ ಯಾವ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದೀರಿ ಎಂಬುದಷ್ಟೇ ಮುಖ್ಯವಲ್ಲ; ಚುನಾವಣೆಯ ನಿರ್ಣಾಯಕ ಸಂದರ್ಭದಲ್ಲಿ ನಿಮ್ಮ ನಿಲುವು ಏನಾಗಿತ್ತು ಎಂಬುದೂ ಜನರಿಗೆ ತಿಳಿಯಬೇಕು.
ಜಿಲ್ಲಾ ಪಂಚಾಯಿತಿ ಚುನಾವಣೆಯ ಆಕಾಂಕ್ಷಿಯಾಗಿರುವ ನಾಪಂಡ ಮುತ್ತಪ್ಪನವರೇ, ಜನರ ಪ್ರಶ್ನೆಗಳಿಗೆ ಉತ್ತರಿಸಿ. ನಿಮ್ಮ ರಾಜಕೀಯ ನಿಲುವನ್ನು ಸ್ಪಷ್ಟಪಡಿಸಿ ಎಂದು ಅವರು ಆಗ್ರಹಿಸಿದ್ದಾರೆ.
Back to top button
error: Content is protected !!