ಕುಶಾಲನಗರ, ಅ 04: ವಿಮಾನದಲ್ಲಿ ಕುವೈತ್ ನಿಂದ ಬೆಂಗಳೂರು ಏರ್ ಪೋರ್ಟ್ ನಲ್ಲಿ ಬಂದಿಳಿದ ಸುಂಟಿಕೊಪ್ಪ ವ್ಯಕ್ತಿ ಹೃದಯಾಘಾತಕ್ಕೆ ಬಲಿಯಾದ ಘಟನೆ ನಡೆದಿದೆ.
ಸುಂಟಿಕೊಪ್ಪ ಕೆ.ಇ.ಬಿ. ಸಮೀಪದ ಮಾಸ್ಟರ್ ಬಡಾವಣೆ ನಿವಾಸಿ ಬಶೀರ್ (51) ಎಂಬುವವರೇ ಈ ರೀತಿ ಮೃತಪಟ್ಟ ದುರ್ದೈವಿ.
ಬದುಕು ಕಟ್ಟಿಕೊಳ್ಳಲೆಂದು ಸುಂಟಿಕೊಪ್ಪದಿಂದ ಸಹಸ್ರಾರು ಕಿ.ಮೀ. ದೂರದಲ್ಲಿರುವ ಕುವೈತ್ ಗೆ ಕೆಲಸಕ್ಕೆಂದು ಹೋಗಿದ್ದವರು. ಕೆಲ ವರ್ಷ ಅಲ್ಲಿಯೇ ನೆಲೆಸಿ ದುಡಿದ ಹಣವನ್ನು ಸುಂಟಿಕೊಪ್ಪದಲ್ಲಿರುವ ಕುಟುಂಬಕ್ಕೆ ಕಳುಹಿಸಿಕೊಡುತ್ತಿದ್ದರು. ಇವರ ದುಡಿಮೆಯ ಹಣದಲ್ಲಿ ಪತ್ನಿ ಹಾಗೂ ಇಬ್ಬರು ಹೆಣ್ಣು ಮಕ್ಕಳ ಜೀವನ ಸಾಗುತ್ತಿತ್ತು. ವರ್ಷಗಳ ನಂತರ ಸಿಕ್ಕಿದ ರಜೆಯಲ್ಲಿ ಪತ್ನಿ ಮತ್ತು ಮಕ್ಕಳೊಂದಿಗೆ ಕಾಲ ಕಳೆಯಲೆಂದು ವಿಮಾನದಲ್ಲಿ ಹೊರಟು ಬಂದವರು ವಿಮಾನ ನಿಲ್ದಾಣದಲ್ಲಿಯೇ ಕಾಲನ ಆಟ್ಟಹಾಸಕ್ಕೆ ಸಿಲುಕಿ ಹೃದಯಾಘಾತಕ್ಕೊಳಗಾಗಿ ಇಹಲೋಕ ತ್ಯಜಿಸಿದ್ದಾರೆ.
ನೆನ್ನೆ ರಾತ್ರಿ 3ಗಂಟೆ ಸಮಯದಲ್ಲಿ ಕುವೈತ್ ನಿಂದ ವಿಮಾನದಲ್ಲಿ ಬೆಂಗಳೂರು ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂದಿಳಿದ ಬಶೀರ್ ಅವರಿಗೆ ಇದ್ದಕ್ಕಿದ್ದಂತೆ ಎದೆನೋವು ಕಾಣಿಸಿಕೊಂಡು ಹೃದಯಾಘಾತವಾಗಿ ಕೊನೆಯುಸಿರು ಎಳೆದಿದ್ದಾರೆ.
ಬಶೀರ್ ರವರ ಮೃತ ದೇಹ ಬೆಂಗಳೂರಿನಲ್ಲಿದ್ದು ಕುಟುಂಬಸ್ಥರು ಅಲ್ಲಿಗೆ ತೆರಳಿದ್ದಾರೆ. ಮೃತ ದೇಹವನ್ನು ತಂದು ಅಂತಿಮ ದರ್ಶನದ ಬಳಿಕ ಇಂದು ಮಧ್ಯಾಹ್ನ 3 ಗಂಟೆ ನಂತರ 7 ಹೊಸಕೋಟೆಯ ಮುಸ್ಲಿಂ ಸ್ಮಶಾನದಲ್ಲಿ ಅಂತ್ಯ ಸಂಸ್ಕಾರ ನೆರವೇರಲಿದೆ.
Back to top button
error: Content is protected !!