ಕುಶಾಲನಗರ, ಜು 16: ಕುಶಾಲನಗರದ ಬಟ್ಟೆ ಶೋರೂಂ ಒಂದರ ಪ್ರಚಾರ ಫಲಕಗಳಲ್ಲಿ ಸಂಪೂರ್ಣ ಆಂಗ್ಲಭಾಷೆ ಬಳಸಿ ಕನ್ನಡ ಭಾಷೆ ಕಡೆಗಣಿಸಿದ್ದಾರೆ ಎಂದು ಕರ್ನಾಟಕ ರಕ್ಷಣಾ ವೇದಿಕೆ ಹೆಚ್.ಶಿವರಾಮೇಗೌಡರ ಬಣ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ. ಇಂತಹ ಪ್ರಕರಣಗಳಿಗೆ ಕಡಿವಾಣ ಹಾಕುವಲ್ಲಿ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಆರೋಪಿಸಿ ಪುರಸಭೆಗೆ ಮುತ್ತಿಗೆ ಹಾಕಿ ಪ್ರತಿಭಟಿಸಲಾಯಿತು.
ಕರವೇ ಜಿಲ್ಲಾಧ್ಯಕ್ಷ ಡಾ.ಬಿ.ಎ.ದಿನೇಶ್ ಶೆಟ್ಟಿ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಪದಾಧಿಕಾರಿಗಳು, ಕಾರ್ಯಕರ್ತರು ಪುರಸಭೆ ಆವರಣದಲ್ಲಿ ಜಮಾಯಿಸಿ ಅಧಿಕಾರಿಗಳ ಧೋರಣೆ ವಿರುದ್ದ ಧಿಕ್ಕಾರ ಕೂಗಿದರು. ಕೂಡಲೆ ಆಂಗ್ಲಭಾಷೆ ಪೋಸ್ಟರ್ ತೆರವಿಗೆ ಕ್ರಮವಹಿಸಬೇಕು. ಇಂತಹ ಪ್ರಕರಣಗಳು ಪುನರಾವರ್ತನೆಯಾಗದಂತೆ ಸೂಕ್ತ ಕ್ರಮಕೈಗೊಳ್ಳಬೇಕೆಂದು ಒತ್ತಾಯಿಸಲಾಯಿತು.
ನಂತರ ಬಟ್ಟೆ ಶೋರೂಂ ಮುಂಭಾಗ ಕೆಲಕಾಲ ಪ್ರತಿಭಟನೆ ನಡೆಸಲಾಯಿತು. ಕನ್ನಡಭಾಷೆ ಬಳಕೆ ಮಾಡದ ಹಿನ್ನೆಲೆಯಲ್ಲಿ ಅಧಿಕಾರಿಗಳು ಸ್ಥಳದಲ್ಲೇ ಮಾಲೀಕರಿಗೆ ದಂಢ ವಿಧಿಸಿ ಶೋರೂಂ ಕಟ್ಟಡದಲ್ಲಿ ಅಳವಡಿಸಿದ್ದ ಆಂಗ್ಲ ಭಾಷಾ ಬ್ಯಾನರ್ ಗಳ ತೆರವಿಗೆ ಸೂಚಿಸಿದ ನಂತರ ಪ್ರತಿಭಟನೆ ಹಿಂಪಡೆಯಲಾಯಿತು.
ಈ ಸಂದರ್ಭ ಮಾತನಾಡಿದ ಡಾ.ಬಿ.ಎ.ದಿನೇಶ್ ಶೆಟ್ಟಿ, ಕರ್ನಾಟಕದಲ್ಲಿ ಕಡ್ಡಾಯವಾಗಿ ಕನ್ನಡ ಭಾಷೆ ಬಳಕೆಯ ಬಗ್ಗೆ ಆದೇಶವಿದ್ದರೂ ಪುರಸಭಾ ವ್ಯಾಪ್ತಿಯಲ್ಲಿ ಸಮರ್ಪಕವಾಗಿ ಅನುಷ್ಠಾನಕ್ಕೆ ಬಂದಿಲ್ಲ. ಹೊರ ರಾಜ್ಯದಿಂದ ಬಂದು ಇಲ್ಲಿ ಬದುಕು ಕಟ್ಟಿಕೊಂಡು ಉದ್ಯಮ ನಡೆಸುತ್ತಿರುವ ಕೆಲವರು ಕನ್ನಡ ಬಳಕೆಗೆ ತಾತ್ಸಾರ ತೋರುತ್ತಿದ್ದಾರೆ. ನಾಮಫಲಕಗಳಲ್ಲಿ ಶೇ. 60 ರಷ್ಟು ಕನ್ನಡ ಭಾಷೆಗೆ ಆದ್ಯತೆ ನೀಡಬೇಕೆನ್ನುವ ವಿಚಾರವಾಗಿ ನಾವು ನಿಯಮಾನುಸಾರವಾದ ಬೇಡಿಕೆ ಮುಂದಿಡುತ್ತಿದ್ದೇವೆ. ಆದರೂ ಹಲವು ಪ್ರಕರಣಗಳು ಮರುಕಳಿಸುತ್ತಲೇ ಇರುವುದು ಸಹಿಸಲಸಾಧ್ಯ. ಪುರಸಭೆ ಈ ಬಗ್ಗೆ ಕಟ್ಟುನಿಟ್ಟಿನ ಕ್ರಮವಹಿಸುವಲ್ಲಿ ವಿಫಲವಾಗಿದೆ ಎಂದು ಆರೋಪಿಸಿದರು.
ಜಿಲ್ಲಾ ಸಂಚಾಲಕ
ಎಂ.ಎಸ್.ಮಣಿಕಂಠ ಮಾತನಾಡಿ, ಕರ್ನಾಟಕದಲ್ಲಿರುವವರು ಕನ್ನಡ ಭಾಷೆಯನ್ನು ಬಳಸಿದರೆ ಸಾಕು, ಅದು ಅದಾಗಿಯೇ ಬೆಳೆಯುತ್ತದೆ. ಹಲವು ಹೋರಾಟಗಳನ್ನು ನಡೆಸಿದರೂ ಆಂಗ್ಲ ವ್ಯಾಮೋಹ ಕೊನೆಗಾಣುತ್ತಿಲ್ಲ ಎಂಬುದು ವಿಷಾದಕರ ಸಂಗತಿ ಎಂದರು.
ಪ್ರತಿಭಟನೆಯಲ್ಲಿ ಕುಶಾಲನಗರ ತಾಲೂಕು ಅಧ್ಯಕ್ಷ ಪುಟ್ಟಸ್ವಾಮಿ, ಪೊನ್ನಂಪೇಟೆ ತಾಲೂಕು ಅಧ್ಯಕ್ಷ ಪ್ರವೀಣ್ ಪೂಜಾರಿ, ಜಿಲ್ಲಾ ಗೌರವಾಧ್ಯಕ್ಷ ನಾಗರಾಜ್ ಕಾವಲು ಕೊಂಡ, ಜಿಲ್ಲಾ ಕಾರ್ಯದರ್ಶಿ ವಿನ್ಸೆಂಟ್ ಲೋಬೋ ಜಿಲ್ಲಾ ಪ್ರಧಾನ ಕಾರ್ಯದರ್ಶಿ
ಸರಳ ರಾಮಣ್ಣ, ಸೋಮವಾರ ಪೇಟೆ ತಾಲೂಕು ಅಧ್ಯಕ್ಷ ಸೋಮೇಶ್ , ಮುಖಂಡರಾದ ಪುಟ್ಟಮ್ಮ,ಶೋಭಾ,ಗಂಗಾ ಪೂರ್ಣೇಶ್ ನಾಯಕ್,ಕಮಾಲುದ್ದೀನ್,ವೀಕ್ಷಿತ್,ಅನಂತಸಂಪತ್ ಕುಮಾರ್,ಗಣೇಶ್ ಮಾಸ್ಟರ್ ಇನ್ನಿತರರು ಹಾಜರಿದ್ದರು
Back to top button
error: Content is protected !!