ಕುಶಾಲನಗರ, ಮೇ 07: ಕುಶಾಲನಗರ ರೋಟರಿ ಮೂಲಕ ಭುವನಗಿರಿಯಲ್ಲಿ ಸ್ಥಾಪಿಸಿರುವ ವೆಟ್ ವೇಸ್ಟ್ ಮೇನೇಜ್ಮೆಂಟ್ ಯೋಜನೆ ಇಡೀ ಭಾರತದ ರೋಟರಿ ಸಂಸ್ಥೆಗಳ ಇತಿಹಾಸದಲ್ಲಿ ಪ್ರಥಮ ಪ್ರಯತ್ನ ಎಂದು ರೋಟರಿ ಸಂಸ್ಥೆ 3181 ಜಿಲ್ಲಾ ರಾಜ್ಯಪಾಲ ಪಿ.ಕೆ.ರಾಮಕೃಷ್ಣ ತಿಳಿಸಿದ್ದಾರೆ.
ಕೂಡಿಗೆಯ ಭುವನಗಿರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕುಶಾಲನಗರ ರೋಟರಿ ಸುವರ್ಣ ಸಂಭ್ರಮ ಅಂಗವಾಗಿ ಸ್ವಚ್ಚ ಕುಶಾಲನಗರ ಯೋಜನೆಯಡಿ ಹಸಿ ಕಸವನ್ನು ಗೊಬ್ಬರವಾಗಿಸುವ ಘಟಕವನ್ನು ಸ್ಥಾಪಿಸಿರುವುದು ಸ್ವಚ್ಚ ಸಮಾಜ ನಿರ್ಮಾಣ ಕನಸಿಗೆ ಅಡಿಪಾಯವಾಗಿದೆ. ಭಾರತದ 45 ಸಾವಿರ ರೋಟರಿ ಸಂಸ್ಥೆ ಪೈಕಿ ಇದು ಪ್ರಥಮ ಪ್ರಯತ್ನ. ಇದು ಯಶಸ್ವಿಯಾದಲ್ಲಿ ಇತರೆ ರೋಟರಿ ಸಂಸ್ಥೆಗಳು ಕೂಡ ಇದನ್ನು ಜಾರಿಗೆ ತರುವ ಚಿಂತನೆ ಮಾಡಲಾಗುತ್ತದೆ ಎಂದು ತಿಳಿಸಿದರು.
ಸರಕಾರಿ ಶಾಲೆಗಳ ಉಳಿವಿನ ಬಗ್ಗೆ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಅವರು, ಶತಮಾನಗಳನ್ನು ಕಂಡಿರುವ ಶಾಲೆಗಳು ಬಹಳಷ್ಟಿವೆ. ಶಿಕ್ಷಣ ವ್ಯವಸ್ಥೆ ಕೂಡ ಉತ್ತಮವಾಗಿದ್ದರೂ ಖಾಸಗಿ ಶಾಲೆಗಳ ಕಾರಣ ಸರಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಕ್ಷೀಣಿಸುತ್ತಿದೆ. ದೂರದಿಂದ ಶಾಲೆಗೆ ಆಗಮಿಸುವ ವಿದ್ಯಾರ್ಥಿಗಳ ಅನುಕೂಲಕ್ಕೆ ಸಂಸ್ಥೆ ಮೂಲಕ ಬಸ್ ಗಳ ವ್ಯವಸ್ಥೆ ಕಲ್ಪಿಸುವ ಬಗ್ಗೆ ಚಿಂತನೆ ನಡೆಸಲಾಗುತ್ತಿದೆ ಎಂದು ತಿಳಿಸಿದರು.
ಕುಶಾಲನಗರ ರೋಟರಿ ಸಂಸ್ಥೆ ಅಧ್ಯಕ್ಷ ಮನು ಪೆಮ್ಮಯ್ಯ ಮಾತನಾಡಿ ರೋಟರಿ ಸುವರ್ಣ ಮಹೋತ್ಸವ ಅಂಗವಾಗಿ ಕ್ಲೀನ್ ಸಿಟಿ ಯೋಜನೆಯಡಿ ಕೈಗೊಂಡ ಹತ್ತು ಹಲವು ಸಾಮಾಜಿಕ ಯೋಜನೆಗಳ ಬಗ್ಗೆ ಮಾಹಿತಿ ಒದಗಿಸಿದರು. ಪ್ಲಾಸ್ಟಿಕ್ ತ್ಯಾಜ್ಯ ನಿರ್ಮೂಲನೆಗೆ ಆಯ್ದ ಸ್ಥಳಗಳಲ್ಲಿ ಬಾಟಲ್ ಮಾದರಿ ಕಸ ಸಂಗ್ರಹ ಘಟಕ ಅಳವಡಿಕೆ, ಭಿತ್ತಿಚಿತ್ರಗಳ ಮೂಲಕ ಜಾಗೃತಿ ಮೂಡಿಸುವುದು ಸೇರಿದಂತೆ ಕೊಡಗು-ಮೈಸೂರು ಗಡಿಯಲ್ಲಿರುವ ಹಳೆಯ ಸೇತುವೆ ಆಧುನೀಕರಣಗೊಳಿಸಿ ಪಾರ್ಕ್ ರೂಪ ನೀಡುವ ಯೋಜನೆ ಪ್ರಗತಿಯಲ್ಲಿದೆ ಎಂದು ತಿಳಿಸಿದ ಅವರು, ರೋಟರಿಯ ಸ್ವಚ್ಚ ಕುಶಾಲನಗರ ಯೋಜನೆ ಯಶಸ್ಸಿಗೆ ಸಾರ್ವಜನಿಕರ ಸಹಕಾರ ಅತ್ಯಗತ್ಯ ಎಂದರು.
ಈ ಸಂದರ್ಭ ಸಹಾಯಕ ಗವರ್ನರ್ ಉಲ್ಲಾಸ್ ಕೃಷ್ಣ, ಕಾರ್ಯದರ್ಶಿ ಹೆಚ್.ಪಿ.ಮಂಜುನಾಥ್ ಇದ್ದರು.
Back to top button
error: Content is protected !!