ಕುಶಾಲನಗರ, ಮಾ 10: ನೌಕರರ ಸಮಸ್ಯೆಗಳಿಗೆ ಸಂಘಟನೆ ಮೂಲಕ ಪರಿಹಾರ ಕಂಡುಕೊಳ್ಳಲು ಸಾಧ್ಯ ಎಂದು ಕರ್ನಾಟಕ ರಾಜ್ಯ ಹಾಲು ಉತ್ಪಾದಕರ ಸಹಕಾರ ಸಂಘಗಳ ನೌಕರರ ಮಹಾಮಂಡಳಿ ಅಧ್ಯಕ್ಷ ಶಿವನಂಜಯ್ಯ ತಿಳಿಸಿದರು.
ಕರ್ನಾಟಕ ರಾಜ್ಯ ಹಾಲು ಉತ್ಪಾದಕರ ಸಹಕಾರ ಸಂಘಗಳ ನೌಕರರ ಮಹಾಮಂಡಳಿ ಹಾಗೂ ಕೊಡಗು ಜಿಲ್ಲಾ ಹಾಲು ಉತ್ಪಾದಕರ ಸಹಕಾರ ಸಂಘಗಳ ನೌಕರರ ಕ್ಷೇಮಾಭಿವೃದ್ಧಿ ಸಂಘ ಮತ್ತು ಕುಶಾಲನಗರ ಹಾಗೂ ಸೋಮವಾರಪೇಟೆ ತಾಲೂಕು ಹಾಲು ಉತ್ಪಾದಕರ ನೌಕರರ ಕ್ಷೇಮಾಭಿವೃದ್ಧಿ ಸಂಘದ ಆಶ್ರಯದಲ್ಲಿ ಕೂಡುಮಂಗಳೂರು ಹಾಲು ಉತ್ಪಾದಕರ ಸಹಕಾರ ಸಂಘದಲ್ಲಿ ನಡೆದ ನೌಕರರ ಕ್ಷೇಮಾಭಿವೃದ್ಧಿ ಸಂಘದ ಸಭೆ ಉದ್ಘಾಟಿಸಿ ಅವರು ಮಾತನಾಡಿದರು.
ರಾಜ್ಯದಲ್ಲಿ ಸರಿಸುಮಾರು 16 ಸಾವಿರಕ್ಕೂ ಅಧಿಕ ಹಾಲು ಉತ್ಪಾದಕರ ಸಹಕಾರ ಸಂಘಗಳಿಗೆ. ಇವುಗಳಲ್ಲಿ 35 ಸಾವಿರದಷ್ಟು ನೌಕರರು ಸಂಕಷ್ಟದ ನಡುವೆ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಎಲ್ಲರೂ ಒಗ್ಗೂಡಿ ದನಿ ಎತ್ತಿದಾಗ ಮಾತ್ರ ನಮ್ಮ ಬೇಡಿಕೆಗಳಿಗೆ ಮನ್ನಣೆ ಸಿಗುತ್ತದೆ. ಈ ನಿಟ್ಟಿನಲ್ಲಿ ನೌಕರರು ಸದಸ್ಯತ್ವ ಪಡೆದು ಸಂಘಟನೆಯಲ್ಲಿ ತೊಡಗಿಸಿಕೊಂಡು ಹೋರಾಟದಲ್ಲಿ ಭಾಗಿಯಾಗಲು ಅವರು ಕರೆ ನೀಡಿದರು.
ಮಹಾಮಂಡಳಿ ಪ್ರಧಾನ ಕಾರ್ಯದರ್ಶಿ
ಶಿವಕುಮಾರ್ ಮಾತನಾಡಿದರು. ಕನಿಷ್ಠ ವೇತನವೂ ಇಲ್ಲದೆ, ಸರಕಾರದ ಕನಿಷ್ಠ ಸವಲತ್ತುಗಳೂ ಇಲ್ಲದೆ 365 ದಿನವೂ ಕೆಲಸ ನಿರ್ವಹಿಸುವ ಅಂಗ ಎಂದರೆ ಅದು ಹಾಲು ಉತ್ಪಾದಕರ ಸಹಕಾರ ಸಂಘಗಳ ನೌಕರರು. ನಮ್ಮ ಬೇಡಿಕೆಗಳ ಈಡೇರಿಕೆಗೆ ಹೋರಾಟ ಅಗತ್ಯ ಎಂದರು.
ಕೊಡಗು ಜಿಲ್ಲಾ ಹಾಲು ಉತ್ಪಾದಕರ ಸಹಕಾರ ಸಂಘಗಳ ನೌಕರರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ರಾಮೇಗೌಡ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ನೌಕರರು ತಮ್ಮ ಸಮಸ್ಯೆಗಳು, ಬೇಡಿಕೆಗಳ ಬಗ್ಗೆ ಮಹಾಮಂಡಳದ ಗಮನ ಸೆಳೆಯುವ ನಿಟ್ಟಿನಲ್ಲಿ ಸಂಘಟಿತರಾಗಬೇಕಿದೆ. ನೌಕರರ ಕ್ಷೇಮಾಭಿವೃದ್ಧಿಗಾಗಿ ಕಡ್ಡಾಯವಾಗಿ ಎಲ್ಲಾ ನೌಕರರು ಸದಸ್ಯತ್ವ ಪಡೆದುಕೊಳ್ಳಬೇಕಿದೆ ಎಂದು ಕೋರಿದರು.
ಹಾಲು ಉತ್ಪಾದಕರ
ಸಹಕಾರ ಸಂಘಗಳಲ್ಲಿ ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಸಭೆಯಲ್ಲಿ ಪಾಲ್ಗೊಂಡಿದ್ದ ಹಾಲು ಉತ್ಪಾದಕರ ವಿವಿಧ ಸಹಕಾರ ಸಂಘಗಳ ಕಾರ್ಯದರ್ಶಿಗಳು ಅನುಭವ ವ್ಯಕ್ತಪಡಿಸಿದರು. ನೌಕರಿ ಬಗ್ಗೆ ಭರವಸೆಯಿಲ್ಲ, ದುಡಿಮೆಗೆ ತಕ್ಕ ಪ್ರತಿಫಲವಿಲ್ಲ, ನಿಗದಿತ ಅವಧಿಗಿಂತ ಹೆಚ್ಚಿನ ಸಮಯ ಕೆಲಸ ನಿರ್ವಹಿಸುವ ಪರಿಸ್ಥಿತಿಯಿದೆ ಎಂಬಿತ್ಯಾದಿ ಸಂಕಷ್ಟಗಳನ್ನು ತೋಡಿಕೊಂಡರು.
ಮಹಾಮಂಡಳಿ ಜಂಟಿ ಕಾರ್ಯದರ್ಶಿ
ಬೀರಲಿಂಗಪ್ಪ, ರಾಜ್ಯ ಪ್ರತಿನಿಧಿಗಳಾದ ಶೇಖರ್, ಸುನಿಲ್, ತೇಜಾಕ್ಷಿ, ಪ್ರಮುಖರಾದ
ತಿಮ್ಮಪ್ಪ ಪೂಜಾರಿ, ರಂಜಿತ್, ಸ್ವಾಮಿ, ಸತೀಶ್, ದಿಲೀಪ್ ಮತ್ತಿತರರು ಇದ್ದರು.
Back to top button
error: Content is protected !!