ಕಾರ್ಯಕ್ರಮ

ಸಾರ್ವಜನಿಕ ಸ್ಥಳಗಳಲ್ಲಿ ಅಳವಡಿಸಿದ ಸಿಸಿ ಕ್ಯಾಮೆರಗಳ ಉದ್ಘಾಟನೆ, ಹಸ್ತಾಂತರ ಕಾರ್ಯಕ್ರಮ

ಕುಶಾಲನಗರ, ಡಿ 27:
ಸಾರ್ವಜನಿಕ ಸ್ಥಳಗಳಲ್ಲಿ ಸಿಸಿ ಕ್ಯಾಮೆರಗಳ ಅಳವಡಿಕೆ ಮೂಲಕ ಅಪರಾಧ ಮುಕ್ತ ವ್ಯವಸ್ಥೆ ನಿರ್ಮಾಣವಾಗಲು ಸಹಕಾರಿಯಾಗುತ್ತದೆ ಎಂದು ಕೊಡಗು ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಬಿ ಪಿ ದಿನೇಶ್ ಕುಮಾರ್ ತಿಳಿಸಿದ್ದಾರೆ.
ಅವರು ಕುಶಾಲನಗರ ಗುಮ್ಮನಕೊಲ್ಲಿ ಬಸವೇಶ್ವರ ಬಡಾವಣೆ, ಬಯಲು ಬಸವೇಶ್ವರ ದೇವಾಲಯ ಸಮಿತಿ ಕುಶಾಲನಗರದ ವ್ಯಾಪ್ತಿಯ ಆಯಕಟ್ಟಿನ ಪ್ರದೇಶಗಳಲ್ಲಿ ಅಳವಡಿಸಲಾಗಿರುವ ಸಿಸಿಟಿವಿ ಕ್ಯಾಮೆರಾಗಳ ಉದ್ಘಾಟನೆ ಮತ್ತು ಅದರ ನಿರ್ವಹಣೆಗಾಗಿ ಪೊಲೀಸ್ ಇಲಾಖೆ ಮತ್ತು ಪುರಸಭೆಗೆ ಹಸ್ತಾಂತರ ಮಾಡುವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಪ್ರಸಕ್ತ ದಿನಗಳಲ್ಲಿ ಅಪರಾಧಗಳನ್ನು ಪತ್ತೆಹಚ್ಚಲು ಸಿಸಿ ಕ್ಯಾಮೆರಾ ಮಹತ್ತರ ಪಾತ್ರ ವಹಿಸುತ್ತಿದೆ ಎಂದ ಅವರು, ಪ್ರತಿಯೊಬ್ಬರು ತಮ್ಮ ಮನೆ ವ್ಯಾಪಾರ ವಹಿವಾಟು ಮಾಡುವ ಸ್ಥಳಗಳಲ್ಲಿ ಕಡ್ಡಾಯವಾಗಿ ಸಿಸಿ ಕ್ಯಾಮೆರಾ ಅಳವಡಿಸಬೇಕು. ಆ ಮೂಲಕ ಅಪರಾಧ ತಡೆ ಸಾಧ್ಯ ಎಂದರು.
ಸಮಿತಿ ಮೂಲಕ ಅತ್ಯಾಧುನಿಕ ತಂತ್ರಜ್ಞಾನದ ಕ್ಯಾಮೆರಾಗಳನ್ನು ಸಾರ್ವಜನಿಕವಾಗಿ ಅಳವಡಿಸಿ ಸ್ವಚ್ಛ ಹಾಗೂ ಸ್ವಸ್ಥ ಸಮಾಜ ನಿರ್ಮಾಣದ ಗುರಿಯೊಂದಿಗೆ ಸಮಾಜಮುಖಿ ಸೇವೆ ಸಲ್ಲಿಸಿರುವ ಬಗ್ಗೆ ಶ್ಲಾಘನೆ ವ್ಯಕ್ತಪಡಿಸಿದರು.

ಕುಶಾಲನಗರ ಡಿ ವೈ ಎಸ್ ಪಿ ಚಂದ್ರಶೇಖರ್ ಪಿ ಅವರು ಮಾತನಾಡಿ ಪೊಲೀಸ್ ಇಲಾಖೆಯೊಂದಿಗೆ ನಾಗರಿಕರ ಸಹಭಾಗಿತ್ವ ಮೂಲಕ ಅಪರಾಧ ಮುಕ್ತ ಸಮಾಜ ನಿರ್ಮಾಣ ಸಾಧ್ಯ ಎಂದರು.
ಅತಿಥಿಗಳಾಗಿ ಪಾಲ್ಗೊಂಡಿದ್ದ ಕೊಡಗು ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಕೆ ಪಿ ಚಂದ್ರಕಲಾ ಸಮಿತಿಯ ಕಾರ್ಯ ವೈಖರಿಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ಪ್ರತಿಯೊಬ್ಬರೂ ಸೇವಾ ಮನೋಭಾವನೆ ಬೆಳೆಸಿಕೊಳ್ಳಬೇಕಾಗಿದೆ ಎಂದು ಹೇಳಿದರು.
ಬಯಲು ಬಸವೇಶ್ವರ ದೇವಸ್ಥಾನ ಸಮಿತಿಯ ಅಧ್ಯಕ್ಷರಾದ ಬಿ ಕೆ ಸುದೀಪ್ ಕುಮಾರ್ ಅಧ್ಯಕ್ಷತೆಯಲ್ಲಿ ನಡೆದ ಸಮಾರಂಭದಲ್ಲಿ ಪೌರಕಾರ್ಮಿಕರಾದ ಸತೀಶ್ ಮತ್ತು ರಾಜೇಶ್ವರಿ ಅವರುಗಳನ್ನು ಸನ್ಮಾನಿಸಿ ಗೌರವಿಸಲಾಯಿತು. ಅಂದಾಜು 20 ಲಕ್ಷಕ್ಕೂ ಅಧಿಕ ವೆಚ್ಚದಲ್ಲಿ ಹಾರಂಗಿ ರಸ್ತೆ, ಗುಡ್ಡೆ ಹೊಸೂರು ಹೆದ್ದಾರಿ ಜಂಕ್ಷನ್, ಕೂಡಿಗೆ ರಸ್ತೆಯ ಕೈಗಾರಿಕಾ ಬಡಾವಣೆ, ಕುಶಾಲನಗರ ಪಟ್ಟಣ ವ್ಯಾಪ್ತಿಯಲ್ಲಿ ಕ್ಯಾಮೆರಗಳನ್ನು ಅಳವಡಿಸಲಾಗಿದೆ ಎಂದು ಅಧ್ಯಕ್ಷರಾದ ಸುದೀಪ್ ಕುಮಾರ್ ಮಾಹಿತಿ ನೀಡಿದರು. ಹಾರಂಗಿ ರಸ್ತೆಯಲ್ಲಿ ಎಲ್ಲೆಂದರಲ್ಲಿ ತ್ಯಾಜ್ಯ ಎಸೆಯುತ್ತಿದ್ದ ಪ್ರಕರಣಗಳು ಈ ಮೂಲಕ ಪತ್ತೆಹಚ್ಚಲಾಗಿದ್ದು ಇದೀಗ ಶೇ. 100ರಷ್ಟು ಸ್ವಚ್ಛತೆ ಕಂಡು ಬಂದಿದೆ ಎಂದರು.
ಹೆದ್ದಾರಿಯಲ್ಲಿ ಸಾಗುವ ಪ್ರತಿ ವಾಹನಗಳ ನೊಂದಣಿ ಸಂಖ್ಯೆ ಕ್ಯಾಮೆರಾಗಳಲ್ಲಿ ಸ್ಪಷ್ಟವಾಗಿ ದಾಖಲೆ ಮೂಲಕ ಅಪರಾಧ ಪತ್ತೆ ಕಾರ್ಯ ಸುಸೂತ್ರವಾಗಿ ಕಲೆ ಹಾಕಲು ಸಾಧ್ಯ ಎಂದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪುರಸಭೆಯ ಕಂದಾಯ ಅಧಿಕಾರಿ ರಾಮು, ಎಸ್ ಎಲ್ ಎನ್ ಕಾಫಿ ಸಂಸ್ಥೆಯ ಮಾಲೀಕರಾದ ಎನ್ ಸಾತಪ್ಪನ್, ಕಾಫಿ ಉದ್ಯಮಿ ಈಶ್ವರನ್ ಜವಾಹರ್ ಮತ್ತಿತರರು ಇದ್ದರು.
ಕುಶಾಲನಗರ ಸುತ್ತಮುತ್ತ ಆಯಕಟ್ಟಿನ ಪ್ರದೇಶಗಳಲ್ಲಿ ಅಳವಡಿಸಲಾಗಿರುವ ಸಿಸಿ ಕ್ಯಾಮರ ವ್ಯವಸ್ಥೆ ಕಲ್ಪಿಸಲು ಕೈ ಜೋಡಿಸಿದ ಕುಶಾಲನಗರ ಕೈಗಾರಿಕಾ ಬಡಾವಣೆಯಲ್ಲಿರುವ 25 ಕ್ಕೂ ಅಧಿಕ ಉದ್ಯಮಿಗಳಿಗೆ ಮತ್ತು ಈ ಸಂದರ್ಭ ಸಹಕರಿಸಿದ ಸಿ ಸಿ ಕ್ಯಾಮೆರಾ ತಂತ್ರಜ್ಞ ರಜನಿಕಾಂತ್ ಮತ್ತು ಸ್ಥಳೀಯರಿಗೆ ಸಮಿತಿ ಪರವಾಗಿ ಕಿರು ಕಾಣಿಕೆ ನೀಡಿ ಗೌರವಿಸಲಾಯಿತು.
ಸಮಿತಿಯ ಕಾರ್ಯದರ್ಶಿ ರವಿಕುಮಾರ್ ಪ್ರಾಸ್ತಾವಿಕವಾಗಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಸಮಿತಿಯ ನಿರ್ದೇಶಕರು ಮತ್ತು ಬಡಾವಣೆಯ ನಿವಾಸಿಗಳು ಇದ್ದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!