ಪ್ರತಿಭಟನೆ

ವಿವಿಧ ಬೇಡಿಕೆ ಈಡೇರಿಕೆ ಒತ್ತಾಯಿಸಿ ಹಕ್ಕೆ – ಹುಲುಸೆ ಗ್ರಾಮಸ್ಥರ ಮೌನ ಪ್ರತಿಭಟನೆ

ಕುಶಾಲನಗರ, ಡಿ 17: ಹೆಬ್ಬಾಲೆ ಗ್ರಾಪಂ ವ್ಯಾಪ್ತಿಯ ಹಕ್ಕೆ-ಹುಲುಸೆ ಗ್ರಾಮಸ್ಥರು ಬಗೆಹರಿಯದ ಗ್ರಾಮದ ಗಂಭೀರ ಸಮಸ್ಯೆಗಳ ಇತ್ಯರ್ಥಕ್ಕೆ ಆಗ್ರಹಿಸಿ ಮೌನ ಪ್ರತಿಭಟನೆ ನಡೆಸಿದರು.
ಹಕ್ಕೆ ಗ್ರಾಮದಲ್ಲಿ ಬಸ್ ತಂಗುದಾಣ ನಿರ್ಮಾಣ ವಿಳಂಭ, ಅತಿಕ್ರಮಣ ಕೆರೆಗಳ ಒತ್ತುವರಿ ತೆರವು, ಹಾರಂಗಿ ಎಡದಂಡೆ ನಾಲೆಯ ಸಮಸ್ಯೆ ಹಾಗೂ ಗ್ರಾಮ ವ್ಯಾಪ್ತಿಯಲ್ಲಿ ಉದ್ದೇಶಿತ ಬೀದಿನಾಯಿಗಳ ಆರೈಕೆ ಕೇಂದ್ರದ ಪ್ರಸ್ತಾವನೆ ಕೈಬಿಡುವಂತೆ ಒತ್ತಾಯಿಸಿ ಹಕ್ಕೆ ಮತ್ತು ಹುಲುಸೆ ಗ್ರಾಮಸ್ಥರು ಹಕ್ಕೆ ಸರ್ಕಲ್ ನಲ್ಲಿ ಪ್ರತಿಭಟನೆ ನಡೆಸಿದರು.
ಹಕ್ಕೆ ಗ್ರಾಮದ ನಿವಾಸಿ ಸಾಮಾಜಿಕ ಹೋರಾಟಗಾರ ಮೋಹನ್ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು.
ಸ್ಥಳಕ್ಕೆ ಆಗಮಿಸಿದ ತಾಲ್ಲೂಕು ಮಟ್ಟದ ಅಧಿಕಾರಿಗಳು, ಗ್ರಾಪಂ ಪಿಡಿಒ ಗ್ರಾಮಸ್ಥರ ಸಮಸ್ಯೆ ಆಲಿಸಿದರು. ಈ ಸಂದರ್ಭ ಗ್ರಾಮಸ್ಥರು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
ಮಡಿಕೇರಿ ಹಾಗೂ ಹಾಸನ ಹೆದ್ದಾರಿಗೆ ಹೊಂದಿಕೊಂಡಿರುವ ಗ್ರಾಮಕ್ಕೆ ಬಸ್ ತಂಗುದಾಣವಿಲ್ಲ.ಹೆದ್ದಾರಿ ಅಭಿವೃದ್ಧಿ ಸಮಯದಲ್ಲಿ ಇದ್ದ ಹಳೆಯ ಬಸ್ ನಿಲ್ದಾಣವನ್ನು ತೆರವು ಮಾಡಲಾಗಿತ್ತು.ಆದರೆ ರಸ್ತೆ ನಿರ್ಮಿಸಿ ಅನೇಕ ವರ್ಷಗಳೇ ಕಳೆದರೂ ಇದುವರೆಗೂ ಬಸ್ ತಂಗುದಾಣ ನಿರ್ಮಿಸಿಲ್ಲ. ಸಂಬಂಧಿಸಿದ ಇಲಾಖೆ ನಿರ್ಲಕ್ಷ್ಯ ವಹಿಸಿದ್ದು ರೋಟರಿ ಸಂಸ್ಥೆ ತಂಗುದಾಣ ನಿರ್ಮಾಣಕ್ಕೆ‌ ಮುಂದಾದರೂ ಸ್ಥಳೀಯರೊಬ್ಬರು ಅಡ್ಡಗಾಲು ಹಾಕುತ್ತಿದ್ದಾರೆ.
ಹಕ್ಕೆ ಮತ್ತು ಹುಲುಸೆ ಗ್ರಾಮಗಳು ಕಾಡಾಂಚಿನ ಗ್ರಾಮಗಳಾಗಿದ್ದು, ಕಾಡು ಪ್ರಾಣಿಗಳ ಹಾವಳಿಯಿಂದ ಈ ಭಾಗದ ರೈತರು ಹಾಗೂ ಗ್ರಾಮಸ್ಥರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ಇಂತಹ ಪರಿಸ್ಥಿತಿಯಲ್ಲೂ ಹಕ್ಕೆ ಗ್ರಾಮದಲ್ಲಿ ಬೀದಿನಾಯಿಗಳ ಆರೈಕೆ ಕೇಂದ್ರ ಸ್ಥಾಪನೆಗೆ ಪ್ರಾಸ್ತಾವನೆ ಸಲ್ಲಿಸಿ ಜಾಗವನ್ನು ಸರ್ವೇ ಮಾಡಿ ಜಾಗ ಗುರುತಿಸಿರುವ ಕ್ರಮಕ್ಕೆ ನಮ್ಮ ವಿರೋಧವಿದೆ. ಈ ಕೂಡಲೇ ಉದ್ದೇಶಿಸಿ ಬೀದಿನಾಯಿಗಳ ಆರೈಕೆ ಕೇಂದ್ರ ಪ್ರಸ್ತಾಪವನ್ನು ಹಿಂಪಡೆಯಬೇಕು ಎಂದು ಗ್ರಾಮಸ್ಥರು ತಾಲ್ಲೂಕು ಪಂಚಾಯತಿ ಸಹಾಯಕ ನಿರ್ದೇಶಕ ಶ್ರೀನಿವಾಸ್ ಹಾಗೂ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ರವಿಕುಮಾರ್ ಅವರನ್ನು ಒತ್ತಾಯಿಸಿದರು. ಕಾಡುಪ್ರಾಣಿಗಳ ಉಪಟಳದಿಂದ ನಲುಗಿ ಹೋಗಿರುವ‌ ಗ್ರಾಮಗಳಿಗೆ ಗಾಯದ‌ ಮೇಲೆ ಬರೆ ಎಳೆದಂತೆ ಬೀದಿನಾಯಿಗಳ ಆರೈಕೆ ಸ್ಥಾಪನೆಗೆ ಮುಂದಾಗಿರುವ ಅಧಿಕಾರಿಗಳ ಕ್ರಮದ ವಿರುದ್ಧ ಗ್ರಾಮಸ್ಥರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಗ್ರಾಮದಲ್ಲಿ ಒತ್ತುವರಿಗೊಂಡಿರುವ ಕೆರೆಗಳ ಅತಿಕ್ರಮಣ ತೆರವುಗೊಳಿಸಬೇಕಿದೆ, ಸ್ಮಶಾನಕ್ಕೆ ಗುರುತಿಸಿರುವ ಜಾಗದ ಹದ್ದುಬಸ್ತು ಮಾಡಿ ಬೇಲಿ ನಿರ್ಮಿಸಬೇಕಿದೆ, ಕೆಲವರು ಅಕ್ರಮವಾಗಿ ಹಾರಂಗಿ ಎಡದಂಡೆ‌ ನಾಲೆ ಮುಚ್ಚಿ ನೀರಿನ ಹರಿವಿನ ಮಾರ್ಗ ಬೇರೆಡೆಗೆ ತಿರುಗಿಸಿದ್ದು ಈ ಭಾಗದ ರೈತರ ಬೆಳೆಗೆ ಸಮರ್ಪಕ ನೀರು ಲಭಿಸುತ್ತಿಲ್ಲ. ಈ ಬಗ್ಗೆ ಸೂಕ್ತ ಕ್ರಮವಹಿಸಬೇಕಿದೆ ಎಂದು ನೀರಾವರಿ ನಿಗಮ ಸಹಾಯಕ ಅಭಿಯಂತರರು ಹಾಗೂ ಪಿಡಿಒ ಅವರನ್ನು ಒತ್ತಾಯಿಸಲಾಯಿತು.
ಸ್ಥಳಕ್ಕೆ ಆಗಮಿಸಿದ ತಾಲ್ಲೂಕು ತಹಸೀಲ್ದಾರ್ ಕಿರಣ್ ಜಿ.ಗೌರಯ್ಯ ಹಾಗೂ ಇತರೆ ಅಧಿಕಾರಿಗಳೊಂದಿಗೆ ಗ್ರಾಮದ ಸಾಮಾಜಿಕ ಹೋರಾಟಗಾರ ಮೋಹನ್, ಜಿ.ಪಂ ಮಾಜಿ ಅಧ್ಯಕ್ಷ ಎಚ್.ಎಸ್.ಅಶೋಕ್, ಕಾಂಗ್ರೆಸ್ ಮುಖಂಡ ಎಚ್.ಕೆ.ನಟೇಶ್ ಗೌಡ ,ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಲತಾ,ಸದಸ್ಯರಾದ ಮಂಜುನಾಥ್ ಹಾಗೂ ಶಿವನಂಜಪ್ಪ ಮಾತುಕತೆ ನಡೆಸಿದರು.

ರಸ್ತೆ ಅಭಿವೃದ್ಧಿ ವೇಳೆ ಮುಚ್ಚಿರುವ ಚರಂಡಿಯಿಂದ ಗ್ರಾಮಸ್ಥರಿಗೆ ತೊಂದರೆ ಆಗಿದೆ ಕೊಳಚೆ ನೀರು ಸರಾಗವಾಗಿ ಹೋಗಲು ಚರಂಡಿ ಇಲ್ಲದೆ ರಸ್ತೆಯ ಮೇಲೆ ಹರಿಯುತ್ತಿದೆ ಎಂದು ಗ್ರಾಮಸ್ಥರು ದೂರಿದರು. ಗ್ರಾಮಸ್ಥರ ಭರವಸೆಗಳನ್ನು ಈಡೇರಿಸಲು ಸೂಕ್ತ ಕ್ರಮವಹಿಸುವುದಾಗಿ ಅಧಿಕಾರಿಗಳು ಭರವಸೆ ನೀಡಿದ ಮೇರೆಗೆ ಗ್ರಾಮಸ್ಥರು ಪ್ರತಿಭಟನೆಯನ್ನು ಹಿಂಪಡೆದರು. ನಮ್ಮ ಬೇಡಿಕೆಗಳು ಸಂಪೂರ್ಣವಾಗಿ ಈಡೇರದಿದ್ದಲ್ಲಿ ಮುಂದಿನ ದಿನಗಳಲ್ಲಿ ಮತ್ತೆ ಉಗ್ರ ಪ್ರತಿಭಟನೆ ಹಮ್ಮಿಕೊಳ್ಳುವುದಾಗಿ ಮುಖಂಡರುಗಳು ಎಚ್ಚರಿಸಿದರು.

ಈ ಸಂದರ್ಭ ಕಂದಾಯ ಅಧಿಕಾರಿ ಸಂತೋಷ್,
ಎಚ್.ಶಿವರಾಮೇಗೌಡ ಕರ್ನಾಟಕ ರಕ್ಷಣಾ ವೇದಿಕೆಯ ಜಿಲ್ಲಾಧ್ಯಕ್ಷ ಬಿ.ಎ. ದಿನೇಶ್ ಶೆಟ್ಟಿ ಅವರ ನೇತೃತ್ವದಲ್ಲಿ ಜಿಲ್ಲಾ ಉಪಾಧ್ಯಕ್ಷ ರಾಜಶೇಖರ್ ಗೌಡ, ತಾಲೂಕು ಅಧ್ಯಕ್ಷ ಶಿವ, ತಾಲೂಕು ಉಪಾಧ್ಯಕ್ಷ ಜಯರಾಜ್, ತಾಲೂಕು ಸಂಘಟನಾ ಕಾರ್ಯದರ್ಶಿ ರಂಗಸ್ವಾಮಿ ಹಾಗೂ ಪದಾಧಿಕಾರಿಗಳು ಹಾಗೂ ದಲಿತ ಮುಖಂಡ ನಿರ್ವಾಣಪ್ಪ, ಮಾಜಿ ಗ್ರಾಮ ಪಂಚಾಯಿತಿ ಸದಸ್ಯ ವೆಂಕಟೇಶ್,
ಗ್ರಾಮಸ್ಥರಾದ ಸಂಪತ್ತು,ಲೋಕೇಶ್,ಕುಮಾರ,ತಮ್ಮಯ್ಯ, ದೇವು,ಚಂದ್ರ, ಪರಶಿವ, ಕೃಷ್ಣಪ್ಪ,ಮಂಜುನಾಥ ಸ್ವಾಮಿ,ರಾಜಪ್ಪ,ವಾರಿಜಾ,ಹೃತಿಕ್, ಈಶ, ಪಾಪಣ್ಣ ಮತ್ತಿತರರು ಪಾಲ್ಗೊಂಡಿದ್ದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!