ಸುದ್ದಿಗೋಷ್ಠಿ

ಆಡಳಿತ ಪಕ್ಷದ ವೈಫಲ್ಯ ಬೊಟ್ಟು ಮಾಡಿ ತೋರಿಸುವುದು ಪ್ರತಿಪಕ್ಷದ ಹಕ್ಕು: ಮಾಜಿ ಶಾಸಕರ ವಿರುದ್ದ ತುಚ್ಚ ಹೇಳಿಕೆಗೆ ಬಿಜೆಪಿಗರ ಖಂಡನೆ

ಕುಶಾಲನಗರ, ಸೆ 27:
ರಾಜ್ಯದಾದ್ಯಂತ ಗುಂಡಿಮಯ ರಸ್ತೆ ಅವ್ಯವಸ್ಥೆ ಖಂಡಿಸಿ ಬಿಜೆಪಿಯಿಂದ ನಡೆಸಿದ ಪ್ರತಿಭಟನೆಗೆ ಪ್ರತಿಯಾಗಿ ಕಾಂಗ್ರೆಸ್ ನಡೆಸಿದ ಪ್ರತಿಭಟನೆ ಖಂಡಿಸಿದ ಬಿಜೆಪಿ ಮುಖಂಡರು ಮಾಜಿ ಶಾಸಕರ ವಿರುದ್ದ ತುಚ್ಚ ಹೇಳಿಕೆ ನೀಡಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕುಶಾಲನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ನಗರ ಬಿಜೆಪಿ ಅಧ್ಯಕ್ಷ ಎಂ.ಎಂ.ಚರಣ್, ಕೊಡಗಿನಾದ್ಯಂತ ಕೂಡ ಬಹುತೇಕ ರಸ್ತೆಗಳು ಹದಗೆಟ್ಟಿದ್ದ ಹಿನ್ನೆಲೆಯಲ್ಲಿ ಮಾಜಿ ಶಾಸಕ ಅಪ್ಪಚ್ಚುರಂಜನ್ ಅವರ ನೇತೃತ್ವದಲ್ಲಿ ಕುಶಾಲನಗರದಲ್ಲಿ ರಸ್ತೆ ಗುಂಡಿ ‌ಮುಚ್ಚಿ ಪ್ರತಿಭಟಿಸಲಾಯಿತು. ಸರಕಾರದ ವೈಫಲ್ಯಗಳನ್ನು ಬೊಟ್ಟು ಮಾಡಿ ತೋರಿಸುವುದು ಪ್ರಜಾಪ್ರಭುತ್ವದ ಹಕ್ಕು. ಗುಂಡಿ ಮುಚ್ಚಲು ಒತ್ತಾಯಿಸಿ ನಡೆಸಿದ ಪ್ರತಿಭಟನೆಗೆ ಪ್ರತಿಯಾಗಿ ಕುಶಾಲನಗರ ಬ್ಲಾಕ್ ಕಾಂಗ್ರೆಸ್ ಪ್ರತಿಭಟನೆ ನಡೆಸಿದಲ್ಲದೆ ಮಾಜಿ ಶಾಸಕರಿಗೆ ವಯಸ್ಸಾಗಿದೆ, ಮುಂದಿನ ದಿನಗಳಲ್ಲಿ ಅವರನ್ನು ಬೆತ್ತಲು ಮಾಡುತ್ತೇವೆ ಎಂಬ ಹೇಳಿಕೆಗಳು‌ ಖಂಡನೀಯ. ಮಾಜಿ ಶಾಸಕರು ತಮ್ಮ ಅಧಿಕಾರಾವಧಿಯಲ್ಲಿ ಹತ್ತು ಹಲವು ಯೋಜನೆಗಳನ್ನು ಕ್ಷೇತ್ರದಲ್ಲಿ ಕಾರ್ಯ ರೂಪಕ್ಕೆ ತಂದಿದ್ದಾರೆ ಎಂದರು.

ಯುವ ಮೋರ್ಚಾ ಮಾಜಿ ಅಧ್ಯಕ್ಷ ಚಂದ್ರಶೇಖರ್ ಹೇರೂರು ಮಾತನಾಡಿ, ಶಾಸಕರಾಗಿ, ಸಚಿವರಾಗಿ ಕಾರ್ಯನಿರ್ವಹಿಸಿದ ಮಾಜಿ ಶಾಸಕ ಅಪ್ಪಚ್ಚುರಂಜನ್ ಅವರ ಸಾಧನೆ ಶೂನ್ಯ ಎನ್ನುವ ಹೇಳಿಕೆ ಮೂಲಕ ಕುಶಾಲನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು ಅಪ್ರಬುದ್ದತೆಯ ಹೇಳಿಕೆ ನೀಡಿದ್ದಾರೆ ಎಂದು ಅವರನ್ನು ರಾಜಕೀಯ ವಿದೂಷಕನೆಂದು ಬಣ್ಣಿಸಿದರು. ತಮ್ಮ ಪದಬಳಕೆಯಿಂದ ರಾಜಕೀಯವಾಗಿ ಹಲವು ಬಾರಿ ಹಿನ್ನಡೆ ಅನುಭವಿಸಿದ್ದು ಪದಬಳಕೆ ಸರಿಪಡಿಸಿಕೊಳ್ಳಬೇಕಿದೆ. ಆಡಳಿತ ವ್ಯವಸ್ಥೆ ವಿರುದ್ದ ಪ್ರತಿಪಕ್ಷದ ಪ್ರತಿಭಟನೆ ಸಾಮಾನ್ಯ. ಆದರೆ ಪ್ರತಿಭಟನೆ ವಿರೋಧಿಸಿ ಮತ್ತೆ ಪ್ರತಿಭಟಿಸುವುದು ಪಬ್ಲಿಕ ನ್ಯೂಸೆನ್ಸ್ ಎಂದರು.

ವಕ್ತಾರ ಕೆ.ಜಿ.ಮನು ಮಾತನಾಡಿ, ರಾಜ್ಯಾದ್ಯಂತ ರಸ್ತೆ ಅವ್ಯವಸ್ಥೆ, ಅನಾಹುತಗಳ ಬಗ್ಗೆ ದಿನನಿತ್ಯ ವರದಿಯಾಗುತ್ತಿದೆ. ರಸ್ತೆ ದುರಸ್ಥಿಗೆ ಒತ್ತಾಯಿಸುವುದು ತಪ್ಪಾ.ಗುಂಡಿ ಮುಚ್ಚಲು ಆಗ್ರಹಿಸಿ ನಡೆಸಿದ ಹೋರಾಟಕ್ಕೆ ಪ್ರತಿಯಾಗಿ ಪ್ರತಿಭಟನೆ ನಡೆಸಿ ಬಿಜೆಪಿಗರನ್ನು ಬೆದರಿಸುವ ಕಾಂಗ್ರೆಸ್ ನ ತಂತ್ರ ನಡೆಯುವುದಿಲ್ಲ.
ಪುರಸಭೆಯಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದೆ. ಕಛೇರಿಯೊಳಗೆ ಹಲ್ಲೆ, ನಿಂದನೆ ಪ್ರಕರಣ ಜಗ್ಗಜಾಹಿರಾದರೂ ಕೂಡ ಯಾವುದೇ ಕ್ರಮಗಳು ಇದುವರೆಗೆ ಜರುಗಿಲ್ಲ ಎಂದು ಅವರು ಆರೋಪಿಸಿದರು.

ಪುರಸಭೆ ಸದಸ್ಯ ಅಮೃತ್ ರಾಜ್ ಮಾತನಾಡಿ, ಕುಶಾಲನಗರ ತಾಲೂಕಾಗಲು ಆಗ್ರಹಿಸಿ ಹಲವು ಹೋರಾಟಗಳು ನಡೆದರೂ ಕೂಡ ಅದು ಫಲಪ್ರದವಾಗಿಸಲು ಮಾಜಿ ಶಾಸಕರ ಪ್ರಯತ್ನ ಕೂಡ ಮುಖ್ಯವಾಗಿದೆ. ಸರಕಾರದ ಎಲ್ಲಾ ಯೋಜನೆಗಳು ತಾನಾಗಿಯೇ ಅನುಷ್ಠಾನಗೊಳ್ಳುವುದಿಲ್ಲ. ರಂಜನ್ ಅವರ ಪ್ರಯತ್ನದಿಂದ ಹಲವು ಯೋಜನೆಗಳು ಕ್ಷೇತ್ರಕ್ಕೆ ಬಂದಿದೆ ಎಂದರು.
ಗೋಷ್ಠಿಯಲ್ಲಿ ನಗರ ಬಿಜೆಪಿ ಕಾರ್ಯದರ್ಶಿ ಮಧುಸೂದನ್, ಯುವ ಮೋರ್ಚಾ ಅಧ್ಯಕ್ಷ ರಾಮನಾಥನ್, ಉಪಾಧ್ಯಕ್ಷ ಅನುದೀಪ್, ಕಾರ್ಯದರ್ಶಿ ಸಚಿನ್, ಪ್ರಮುಖರಾದ ಎಂ.ಡಿ.ಕೃಷ್ಣಪ್ಪ, ಪ್ರವೀಣ್, ವೈಶಾಖ್, ಸುಮನ್ ಇದ್ದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!