ಕುಶಾಲನಗರ, ಆ 03:ಕುಶಾಲನಗರ ಪುರಸಭೆ ವ್ಯಾಪ್ತಿಯ ಗುಂಡುರಾವ್ ಬಡಾವಣೆಯ ಜಾತ್ರಾ ಮೈದಾನದಲ್ಲಿ 100 ಬೆಡ್ ಗಳ ತಾಲೂಕು ಆಸ್ಪತ್ರೆ ನಿರ್ಮಾಣ ಉದ್ದೇಶ ಹಿನ್ನೆಲೆಯಲ್ಲಿ ಉಂಟಾಗಲಿರುವ ಸಾಧಕ ಬಾಧಕಗಳ ಕುರಿತಾಗಿ ಸಂಘಸಂಸ್ಥೆಗಳ ಪ್ರಮುಖರ ಸಭೆ ನಡೆಯಿತು.
ಶ್ರೀ ಮಹಾಗಣಪತಿ ದೇವಸ್ಥಾನ ಸಮಿತಿ ಆಶ್ರಯದಲ್ಲಿ ಕೃಷಿ ಪತ್ತಿನ ಸಹಕಾರ ಸಂಘದ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಪರ ವಿರೋಧ ಚರ್ಚೆ ನಡೆಯಿತು. ಆಸ್ಪತ್ರೆ ನಿರ್ಮಾಣಗೊಂಡರೆ ಆ ಭಾಗದಲ್ಲಿ ಇದುವರೆಗೆ ನಡೆದುಕೊಂಡು ಬರುತ್ತಿರುವ ಜಾತ್ರೋತ್ಸವ, ಕ್ರೀಡಾಕೂಟಗಳು ಸೇರಿದಂತೆ ಇನ್ನಿತರೆ ಸಾರ್ವಜನಿಕ ಕಾರ್ಯಕ್ರಮಗಳಿಗೆ ಅಡ್ಡಿ ಉಂಟಾಗಲಿದೆ ಎಂಬುದು ಒಂದು ಆಂಶವಾದರೆ, ಹೊಸ ಆಸ್ಪತ್ರೆ ಅಲ್ಲಿಯೇ ಆಗಬೇಕಿದೆ ಎಂಬ ಮತ್ತೊಂದು ಅಂಶದ ಕುರಿತು ಸಾಮಾಜಿಕ ಜಾಲತಾಣದಲ್ಲಿ ಎದ್ದಿರುವ ಅಭಿಪ್ರಾಯ ವ್ಯತ್ಯಾಸಗಳ ಕುರಿತು ಚರ್ಚೆ, ಅಭಿಪ್ರಾಯ, ಸಲಹೆ ಸೂಚನೆಗಳನ್ನು ಸಂಗ್ರಹಿಸುವ ನಿಟ್ಟಿನಲ್ಲಿ ಸಭೆ ನಡೆಯಿತು.
ಆಸ್ಪತ್ರೆಗೆ ನಿರ್ಮಾಣಕ್ಕೆ ವಿರೋಧವಿಲ್ಲ, ಆದರೆ ಬದಲಿ ಜಾಗ ಗುರುತಿಸಬೇಕಿದೆ ಎಂಬುದು ಕೆಲವರ ಅಭಿಪ್ರಾಯವಾದರೆ, ಊರಿನೊಳಗೆ ಆಸ್ಪತ್ರೆ ನಿರ್ಮಾಣವಾದರೆ ಹೆಚ್ಚಿನ ಅನುಕೂಲ ಉಂಟಾಗಲಿದೆ ಎಂದು ಹಲವರು ಅಭಿಪ್ರಾಯ. ಈ ಕುರಿತು ಸಭೆಯಲ್ಲಿ ಪಾಲ್ಗೊಂಡಿದ್ದ ವಿವಿಧ ಸಂಘಸಂಸ್ಥೆಗಳ ಪ್ರಮುಖರು ತಮ್ಮ ಅಭಿಪ್ರಾಯ ಮಂಡಿಸಿದರು.
ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಟಿ.ಆರ್.ಶರವಣಕುಮಾರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಶತಮಾನಗಳ ಇತಿಹಾಸವಿರುವ ಜಾತ್ರೋತ್ಸವ ಕೆಪಿಟಿಸಿಎಲ್ ಘಟಕ ಸ್ಥಾಪನೆ ಹಿನ್ನೆಲೆಯಲ್ಲಿ ಹಳೆ ಮಾರುಕಟ್ಟೆಯಲ್ಲಿ ನಡೆಯುತ್ತಿದ ಸಂತೆ ಹಾಗೂ ಜಾತ್ರೆ ಬೇರೆಡೆಗೆ ಸ್ಥಳಾಂತರಗೊಂಡ ಬಗ್ಗೆ ವಿವರಿಸಿದರು.
ಆರೋಗ್ಯ ಬಹು ಮುಖ್ಯ, ಸರಕಾರದ ಯೋಜನೆಗಳನ್ನು ಸ್ವಾಗತಿಸಬೇಕಿದೆ, ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣಕ್ಕೆ ಈಗಾಗಲೆ ಪ್ರಕ್ರಿಯೆಗಳು ಆರಂಭಗೊಂಡ ಹಿನ್ನೆಲೆಯಲ್ಲಿ ತುರ್ತಾಗಿ ಅಭಿಪ್ರಾಯ ಸಂಗ್ರಹಿಸಿ ಮನವಿ ಸಲ್ಲಿಸಬೇಕಿದೆ, ಕ್ರೀಡೆಗೂ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಕ್ರೀಡಾಂಗಣ ಉಳಿಸಿಕೊಳ್ಳುವ ಅಗತ್ಯವಿದೆ, ಆಸ್ಪತ್ರೆಗೆ ಇತರೆ ಸೂಕ್ತ ಜಾಗ ಗುರುತಿಸಬೇಕಿದೆ, ಶಾಸಕರ ನೇತೃತ್ವದಲ್ಲಿ ಸಭೆ ನಡೆದಲ್ಲಿ ಅನುಕೂಲವಾಗಲಿದೆ, ಪಾಳು ಬಿದ್ದಿರುವ, ಬಳಕೆಯಾಗದ ಲೋಕೋಪಯೋಗಿ, ಅರಣ್ಯ ಇಲಾಖೆ, ನೀರಾವರಿ ನಿಗಮಕ್ಕೆ ಒಳಪಡುವ ಜಾಗಗಳನ್ನು ಆಸ್ಪತ್ರೆ ನಿರ್ಮಾಣಕ್ಕೆ ಬಳಸಿಕೊಳ್ಳಿ ಎಂಬ ಅಭಿಪ್ರಾಯಗಳು ವ್ಯಕ್ತಗೊಂಡವು.
Back to top button
error: Content is protected !!