ಕುಶಾಲನಗರ, ಜು 27: ಚಿಕ್ಕ ಅಳುವಾರ ಗ್ರಾಮದಲ್ಲಿ ನೆಟ್ ವರ್ಕ್ ಸಮಸ್ಯೆಯನ್ನು ಶಾಶ್ವತವಾಗಿ
ಬಗೆಹರಿಸುವಂತೆ ಆಗ್ರಹಿಸಿ ಗ್ರಾಮಸ್ಥರು ಪ್ರತಿಭಟಿಸಿದರು.
ಕಳೆದ 3 ವರ್ಷಗಳ ಹಿಂದೆ ಚಿಕ್ಕಅಳುವಾರ ಗ್ರಾಮದಲ್ಲಿ ಭಾರತೀ ಏರ್ಟೆಲ್ ನ ಟವರ್ ಒಂದು ಸ್ಥಾಪಿಸಲಾಗಿದ್ದು ನೆಟ್ವರ್ಕ್ ಮಾತ್ರ ಮರೀಚಿಕೆಯಾಗಿದೆ. ಆಗಾಗ ತಾಂತ್ರಿಕ ದೋಷಗಳು ಕಾಣಿಸಿಕೊಂಡರೂ ಕೂಡ ಏರ್ಟೆಲ್ ಸಂಸ್ಥೆ ಸಮಸ್ಯೆಯನ್ನು ಸರಿಯಾಗಿ ಬಗೆಹರಿಸುತ್ತಿಲ್ಲ. ಅಲ್ಲದೆ ವಿದ್ಯುತ್ ಇದ್ದಾಗ ಮಾತ್ರ ನೆಟ್ವರ್ಕ್ ಎಂಬಂತಾಗಿದೆ. ಶಾಶ್ವತ ಜನರೇಟರ್ ವ್ಯವಸ್ಥೆ ಮಾಡದಿರುವುದು ಶೋಚನೀಯ. ಇದರಿಂದ ಚಿಕ್ಕ ಅಳುವಾರ ಹಾಗೂ ಸುತ್ತಮುತ್ತಲಿನ ಗ್ರಾಮಗಳ ಜನರಿಗೆ ಸಾಕಷ್ಟು ತೊಂದರೆಯಾಗುತ್ತಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಗ್ರಾಮದಲ್ಲಿಯೆ ಕೊಡಗು ವಿಶ್ವವಿದ್ಯಾಲಯವಿದ್ದು ಗ್ರಾಮದಲ್ಲಿ ಸಾವಿರಾರು ವಿದ್ಯಾರ್ಥಿಗಳಿದ್ದಾರೆ. ಇವರೆಲ್ಲರಿಗೂ ಆಧುನಿಕ ಯುಗದಲ್ಲಿ ಅಧ್ಯಯನ ಕಷ್ಟವಾಗುತ್ತಿದೆ. ಕಳೆದ 2 ವರ್ಷಗಳಿಂದಲು ಅಧಿಕಾರಿಗಳಿಗೆ ಮನವಿ ಸಲ್ಲಿಸಿದರೂ ಸೂಕ್ತವಾಗಿ ಸ್ಪಂದಿಸುತ್ತಿಲ್ಲ. ಇದರಿಂದ ಅಧಿಕಾರಿಗಳು ಮಧ್ಯಪ್ರವೇಶಿಸಿ ಸಮಸ್ಯೆ ಬಗೆಹರಿಸಬೇಕೆಂದು ಗ್ರಾಮಸ್ಥರು ಪ್ರತಿಭಟನೆ ನಡೆಸಿದರು. ಮುಂದಿನ ದಿನಗಳಲ್ಲಿ ಟವರ್ ಮುತ್ತಿಗೆ ಹಾಕುವುದಾಗಿ ಎಚ್ಚರಿಸಿದ್ದಾರೆ.
ಈ ಸಂದರ್ಭದಲ್ಲಿ ವಿ.ಎಸ್. ಎಸ್ ಎನ್. ನಿರ್ದೇಶಕ ಮೂರ್ತಿ, ಗ್ರಾಮಸ್ಥರಾದ ಸಂತೋಷ್, ರಾಜೇಶ್, ರವಿ, ಮಹಾದೇವ, ದಿಲೀಪ್ ಅಳುವಾರ ಗ್ರಾಮದ ಯುವಕರು ಉಪಸ್ಥಿತರಿದ್ದರು.
Back to top button
error: Content is protected !!