ಸುದ್ದಿಗೋಷ್ಠಿ

ಶುಂಠಿ ಬೆಳೆಗೆ ಮಾರಕರೋಗ: ಸರಕಾರ ಪರಿಹಾರ ಒದಗಿಸಲು ಬೆಳೆಗಾರರ ಆಗ್ರಹ

ಕುಶಾಲನಗರ, ಜು 20: ಕೊಡಗು ಮತ್ತು ಮೈಸೂರು ಸೇರಿದಂತೆ ನೆರೆ ಜಿಲ್ಲೆಗಳ ವ್ಯಾಪ್ತಿಯಲ್ಲಿ ಬೆಳೆದಿರುವ ಶುಂಠಿ ಬೆಳೆಗೆ ಮಾರಕ ರೋಗ ಬಂದಿರುವ ಹಿನ್ನೆಲೆಯಲ್ಲಿ ಶುಂಠಿ ಬೆಳೆಗಾರರು ಸಂಪೂರ್ಣ ಕಂಗಾಲಾಗಿದ್ದಾರೆ ಎಂದು ತಿಳಿಸಿರುವ ಕೊಡಗು ಮೈಸೂರು ಜಿಲ್ಲೆ, ಶುಂಠಿ ಬೆಳೆಗಾರರು ಮತ್ತು ವರ್ತಕರ ಸಂಘದ ಅಧ್ಯಕ್ಷರಾದ ಹೆಚ್ ಎನ್ ರಾಜಶೇಖರ್, ಸರ್ಕಾರ ಶುಂಠಿ ಬೆಳೆಗಾರರಿಗೆ ಎಕರೆಗೆ ಮೂರು ಲಕ್ಷದಂತೆ ಪರಿಹಾರ ನೀಡಬೇಕು ಎಂದು ಮನವಿ ಮಾಡಿದ್ದಾರೆ.
ಕುಶಾಲನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಅವರು ಕಳೆದ ಕೆಲವು ಸಮಯದಿಂದ ಈ ರೋಗ ವ್ಯಾಪಕವಾಗಿ ಹರಡುತ್ತಿದ್ದು ಇದನ್ನು ತಡೆಗಟ್ಟುವಲ್ಲಿ ರೈತ ಸಂಪೂರ್ಣ ಅಸಹಾಯಕರಾಗಿದ್ದಾರೆ.
ಇದರಿಂದ ಶುಂಠಿ ಬೆಳೆಗಾರರು ಲಕ್ಷಾಂತರ ರು ನಷ್ಟ ಅನುಭವಿಸುತ್ತಿದ್ದಾರೆ.
ಜೊತೆಗೆ ಶುಂಠಿ ಬೆಳೆಗೆ ಈ ಸಾಲಿನಲ್ಲಿ ಅತಿ ಕಡಿಮೆ ಬೆಲೆ ಇದ್ದು ರೈತಾಪಿ ವರ್ಗ ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ಮಾಹಿತಿ ನೀಡಿದರು.
ಈ ಬಗ್ಗೆ ತಕ್ಷಣ ಸಂಬಂಧಿಸಿದ ಕೃಷಿ ಅಧಿಕಾರಿಗಳು ಗಮನಹರಿಸಿ ಸರ್ಕಾರಕ್ಕೆ ವರದಿ ಸಲ್ಲಿಸಬೇಕು. ತಕ್ಷಣ ಶುಂಠಿ ಬೆಳೆಗಾರರಿಗೆ ಎಕರೆ ಒಂದಕ್ಕೆ ಮೂರು ಲಕ್ಷ ರೂ ಪರಿಹಾರ ನೀಡಬೇಕು. ರೋಗಭಾದೆ ನಿವಾರಣೆಗೆ ಉಚಿತ ಔಷಧಿ ಒದಗಿಸಬೇಕು, ಜೊತೆಗೆ ಶುಂಠಿ ಬೆಳೆಗೆ ಚೀಲವೊಂದಕ್ಕೆ ಕನಿಷ್ಠ ರು. 2 ಸಾವಿರ ನಿಗದಿಪಡಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.
ಎಕರೆ ಒಂದಕ್ಕೆ ಶುಂಠಿ ಬೆಳೆಯಲು ಸುಮಾರು ಐದರಿಂದ ಆರು ಲಕ್ಷ ರೂಪಾಯಿ ಖರ್ಚಾಗುತ್ತಿದ್ದು ಈ ನಿಗೂಢ ರೋಗದಿಂದ ಬಹುತೇಕ ಬೆಳೆ ಹಾನಿಯಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.
ಕೊಡಗು ಮೈಸೂರು ಹಾಸನ ಭಾಗ ಸೇರಿದಂತೆ ವಿವಿದೆಡೆ ಸುಮಾರು ಲಕ್ಷಾಂತರ ಎಕರೆ ಪ್ರದೇಶದಲ್ಲಿ ಶುಂಠಿ ಬೆಳೆಯಲಾಗುತ್ತಿದೆ.
ಶೇ. 60ರಷ್ಟು ರೈತರು ಶುಂಠಿ ಬೆಳೆಯನ್ನು ಅವಲಂಬಿಸಿದ್ದಾರೆ ಎಂದು ತಿಳಿಸಿದ ರಾಜಶೇಖರ್ ತಕ್ಷಣ ಸರ್ಕಾರ ಈ ಬಗ್ಗೆ ಗಮನಹರಿಸಬೇಕು ರೈತರ ಸಹಾಯಕ್ಕೆ ಕೈಜೋಡಿಸಬೇಕಾಗಿದೆ ಎಂದು ಹೇಳಿದ್ದಾರೆ.
ಈ ಬಗ್ಗೆ ಈ ತಿಂಗಳ 23ರಂದು ಕೊಡಗು ಮೈಸೂರು ಹಾಸನ ಭಾಗದ ಶುಂಠಿ ಬೆಳೆಗಾರರ ಪ್ರತಿನಿಧಿಗಳು ಕುಶಾಲನಗರ ತಹಸೀಲ್ದಾರ್ ಮೂಲಕ ಜಿಲ್ಲಾಧಿಕಾರಿಗಳಿಗೆ ಮತ್ತು ಸರಕಾರಕ್ಕೆ ಮನವಿ ಸಲ್ಲಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಅವರು ಹೇಳಿದರು. ಈ ಭಾಗದ ರೈತಾಪಿ ವರ್ಗ ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವಂತೆ ಅವರು ಮನವಿ ಮಾಡಿದರು.
ಸುದ್ದಿಗೋಷ್ಠಿಯಲ್ಲಿ ಸಂಘದ ನಿರ್ದೇಶಕರಾದ ಸಿ ಎ ರಾಜು, ಕೆ ಸಿ ಸತ್ಯ, ಮಲ್ಲಿಕಾರ್ಜುನ ಮತ್ತು ಆಲಿ ಇದ್ದರು.

ಚಿತ್ರ ಸುದ್ದಿಗೋಷ್ಠಿ ಸಂದರ್ಭ

Related Articles

Leave a Reply

Your email address will not be published. Required fields are marked *

Back to top button
error: Content is protected !!