ಕುಶಾಲನಗರ, ಜು 14
ಕಾಂಗ್ರೆಸ್ ನೇತೃತ್ವದ ಕರ್ನಾಟಕ ಸರಕಾರದ ಪಂಚ ಗ್ಯಾರೆಂಟಿಗಳಲ್ಲಿ ಒಂದಾದ ಶಕ್ತಿಯೋಜನೆಯ ಫಲಾನುಭವಿಗಳ ಸಂಖ್ಯೆ 500 ಕೋಟಿ ಮೀರಿದ ಹಿನ್ನೆಲೆಯಲ್ಲಿ ಹಾಗೂ ಪರಿಣಾಮಕಾರಿಯಾಗಿ ಜಾರಿಗೆ ಬಂದು ಎರಡು ವರ್ಷಗಳ ಸಂಭ್ರಮಾಚರಣೆ ಕುಶಾಲನಗರದ ಸಾರಿಗೆ ಬಸ್ ನಿಲ್ದಾಣದಲ್ಲಿ ನಡೆಯಿತು.
ಕುಶಾಲನಗರ ತಾಲ್ಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯಿಂದ ನಡೆದ ಕಾರ್ಯಕ್ರಮದಲ್ಲಿ ಫಲಾನುಭವಿಗಳೊಂದಿಗೆ ಸೇರಿ ನೆರೆದಿದ್ದವರಿಗೆ ಸಿಹಿ ಹಂಚಿ, ಪಟಾಕಿ ಸಿಡಿಸಿ ಸಂಭ್ರಮಿಸಲಾಯಿತು. ಕಾರ್ಯಕ್ರಮದ ಅಂಗವಾಗಿ
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಬಸ್ ಒಂದಕ್ಕೆ ಪೂಜೆ ನೆರವೇರಿಸಲಾಯಿತು. ಇದೇ ಸಂದರ್ಭ
ಸಾರಿಗೆ ಸಂಸ್ಥೆಯ ಅಧಿಕಾರಿ, ಸಿಬ್ಬಂದಿಗಳ ಸೇವೆ ಪರಿಗಣಿಸಿ ಸನ್ಮಾನಿಸಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಗ್ಯಾರೆಂಟಿ ಯೋಜನೆಗಳ ಅನುಷ್ಠಾನ ಸಮಿತಿ ಜಿಲ್ಲಾಧ್ಯಕ್ಷ ಧರ್ಮಜ ಉತ್ತಪ್ಪ ಮಾತನಾಡಿ, ಕಾಂಗ್ರೆಸ್ ಸರಕಾರದ ಐದು ಗ್ಯಾರೆಂಟಿ ಯೋಜನೆಗಳ ಶಕ್ತಿ ಯೋಜನೆ ಮೂಲಕ ಮಹಿಳೆಯರು ಹೆಚ್ಚಿನ ಅನುಕೂಲ ಪಡೆದುಕೊಂಡಿದ್ದಾರೆ ಎನ್ನಬಹುದು. ಧಾರ್ಮಿಕ ಕ್ಷೇತ್ರಗಳಿಗೆ, ಪ್ರವಾಸಕ್ಕೆ ತೆರಳಲು ಉಂಟಾಗುತ್ತಿದ್ದ ಆರ್ಥಿಕ ಹೊರೆ ತಪ್ಪಿದೆ. ಇದರಿಂದ ಸರಕಾರ ಹಾಗೂ ರಸ್ತೆ ಸಾರಿಗೆ ಸಂಸ್ಥೆಗೂ ಕೂಡ ಪರೋಕ್ಷವಾಗಿ ಆರ್ಥಿಕ ಸ್ಥಿತಿ ಪುನಶ್ಚೇತನಗೊಂಡಿದೆ ಎನ್ನಬಹುದು. ಕೊಡಗು ಜಿಲ್ಲೆಯಲ್ಲಿ ರೂ 511 ಕೋಟಿ ಯಷ್ಟು ಹಣ ಸಾರಿಗೆ ಸಂಸ್ಥೆಗೆ ಒದಗಿದೆ ಎಂದು ಅವರು ತಿಳಿಸಿದರು.
ಗ್ಯಾರೆಂಟಿ ಯೋಜನೆಗಳ ಅನುಷ್ಠಾನ ಸಮಿತಿ ತಾಲೂಕು ಅಧ್ಯಕ್ಷ ವಿ.ಪಿ.ಶಶಿಧರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಇತಿಹಾಸದಲ್ಲಿ ಯಾವುದೇ ಸರಕಾರ ಇಷ್ಟೊಂದು ಬೃಹತ್ ಪ್ರಮಾಣದಲ್ಲಿ ಮಹಿಳಾ ಫಲಾನುಭವಿಗಳಿಗೆ ಉಚಿತ ಸಾರಿಗೆ ಸೌಲಭ್ಯ ನೀಡಿದ ದೃಷ್ಟಾಂತ ಮತ್ತೊಂದಿಲ್ಲ. ಇಂಥದೊಂದು ಯೋಜನೆಯನ್ನು ಪರಿಣಾಮಕಾರಿಯಾಗಿ ಹಾಗೂ ವ್ಯವಸ್ತಿತವಾಗಿ ಜಾರಿಗೆ ತಂದ ಶ್ರೇಯಸ್ಸು ರಾಜ್ಯ ಕಾಂಗ್ರೆಸ್ ನೇತ್ರತ್ವದ ಸರಕಾರದ ಹಿರಿಮೆಯಾಗಿದೆ ಎಂದರು. ಮಡಿಕೇರಿ ಘಟಕವೊಂದರಲ್ಲೇ 1 ಕೋಟಿ 21 ಲಕ್ಷದ 61 ಸಾವಿರದ 634 ಮಹಿಳೆಯರು ಫಲಾನುಭವಿಗಳಾಗಿದ್ದಾರೆ. ಚಾಲಕರು, ನಿರ್ವಾಹಕರು, ಸಂಸ್ಥೆ ಅಧಿಕಾರಿಗಳ ಸೇವೆ ಕೂಡ ಗಮನಾರ್ಹವಾಗಿದೆ ಎಂದರು. ಚಾಲಕರು, ನಿರ್ವಾಹಕರು ಸೇವೆ ಒದಗಿಸಲು ತಾತ್ಸಾರ ತೋರದಂತೆ ಮಹಿಳೆಯರೊಂದಿಗೆ ಸೌಜನ್ಯದಿಂದ ವರ್ತಿಸುವಂತೆ ಅವರು ಅಧಿಕಾರಿಗಳಿಗೆ ಸೂಚಿಸಿದರು.
ಈ ಸಂದರ್ಭ ಕುಶಾಲನಗರ ಪುರಸಭೆ ಅಧ್ಯಕ್ಷೆ ಜಯಲಕ್ಷ್ಮಿ ಚಂದ್ರ, ಮಡಿಕೇರಿ ಘಟಕ ಸಾರಿಗೆ ಸಂಸ್ಥೆ ಸಹಾಯಕ ಸಂಚಾರ ಅಧೀಕ್ಷಕ ಎ.ಈರಸಪ್ಪ, ಕೆಡಿಪಿ ಸದಸ್ಯ ಟಿ.ಪಿ.ಹಮೀದ್, ನಗರ ಕಾಂಗ್ರೆಸ್ ಅಧ್ಯಕ್ಷ ಜೋಸೆಫ್ ವಿಕ್ಟರ್ ಸೋನ್ಸ್, ಕುಡಾ ಅಧ್ಯಕ್ಷ ಪ್ರಮೋದ್ ಮುತ್ತಪ್ಪ ಸೇರಿದಂತೆ ಪುರಸಭೆ ಸದಸ್ಯರುಗಳು, ಪಕ್ಷದ ಮುಖಂಡರು, ಕಾರ್ಯಕರ್ತರು ಇದ್ದರು.
Back to top button
error: Content is protected !!