ಕ್ರೈಂ

ನಾಲ್ವರ ಕೊಲೆ‌ ಪ್ರಕರಣ: ಕೇರಳದಲ್ಲಿ ಆರೋಪಿ ಬಂಧನ

ಕುಶಾಲನಗರ, ಮಾ 28: (ಕುಶಲವಾಣಿ ನ್ಯೂಸ್) ಪೊನ್ನಂಪೇಟೆ ತಾಲೂಕಿನ
ಬೇಗೂರು ಗ್ರಾಮದಲ್ಲಿ ನಡೆದ ನಾಲ್ವರ ಕೊಲೆ ಪ್ರಕರಣ ಕೇರಳದ ತಲಪುಳ ಎಂಬಲ್ಲಿ  ಆರೋಪಿ ಗಿರೀಶ್ (38) ಬಂಧಿಸಲಾಗಿದೆ.

ಘಟನೆ ವಿವರ:ಪೊನ್ನಂಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯ ಬೇಗೂರು ಗ್ರಾಮ ಬಾಳಂಗಾಡು ಎಂಬಲ್ಲಿ ವಾಸವಿದ್ದ ಒಂದೇ ಕುಟುಂಬದ ನಾಲ್ಕು ಜನರನ್ನು ಕೊಲೆ ಮಾಡಿ ತಲೆ ಮರೆಸಿಕೊಂಡಿದ್ದ ಆರೋಪಿಯನ್ನು 06 ಗಂಟೆಯ ಒಳಗೆ ದಸ್ತಗಿರಿ ಮಾಡುವಲ್ಲಿ ಕೊಡಗು ಜಿಲ್ಲಾ ಪೊಲೀಸ್ ಯಶಸ್ವಿಯಾಗಿದೆ.

ದಿನಾಂಕ: 28-03-2025 ರಂದು ಮಧ್ಯಾಹ್ನ ಸುಮಾರು 01.30 ಗಂಟೆಗೆ ಬೇಗೂರು ಗ್ರಾಮ ಬಾಳಂಗಾಡು ಪ್ರದೇಶದ ಒಂಟಿ ಮನೆಯಲ್ಲಿ ನಾಲ್ಕು ಜನರ ಕೊಲೆಯಾಗಿರುವ ಕುರಿತು ಮಾಹಿತಿ ಬಂದಿದ್ದು, ಸದರಿ ಘಟನೆ ಸ್ಥಳಕ್ಕೆ ಮಾನ್ಯ ಡಾ.ಎಂ.ಬಿ.ಬೋರಲಿಂಗಯ್ಯ, ಐಪಿಎಸ್, ದಕ್ಷಿಣ ವಲಯ, ಮೈಸೂರು, ಶ ಕೆ.ರಾಮರಾಜನ್, ಐಪಿಎಸ್, ಪೊಲೀಸ್ ಅಧೀಕ್ಷಕರು, ಕೊಡಗು ಜಿಲ್ಲೆ,  ಸುಂದರ್ ರಾಜ್.ಕೆ.ಎಸ್. ಅಪರ ಪೊಲೀಸ್ ಅಧೀಕ್ಷಕರು, ಕೊಡಗು ಜಿಲ್ಲೆ, ಮಹೇಶ್ ಕುಮಾರ್.ಎಸ್. ಡಿಎಸ್ ಪಿ, ವಿರಾಜಪೇಟೆ ಉಪವಿಭಾಗ,  ಶಿವರಾಜ್ ಮುಧೋಳ್, ಸಿಪಿಐ, ಗೋಣಿಕೊಪ್ಪ ವೃತ್ತ,  ನವೀನ್.ಜಿ. ಪಿಎಸ್‌ಐ, ಪೊನ್ನಂಪೇಟೆ ಪೊಲೀಸ್ ಠಾಣೆ, ಮತ್ತು ಅಪರಾಧ ಪತ್ತೆ ತಜ್ಞರ ತಂಡ ಭೇಟಿ ನೀಡಿ ಅಪರಾಧ ಕೃತ್ಯದ ಕುರಿತು ಮಾಹಿತಿ ಹಾಗೂ ಸಾಕ್ಷಾಧಾರಗಳನ್ನು ಕಲೆ ಹಾಕಿ ದೂರುದಾರರು ನೀಡಿದ ಮಾಹಿತಿ ಅನ್ವಯ ಪೊನ್ನಂಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತಲೆಮರೆಸಿಕೊಂಡಿರುವ ಆರೋಪಿ ಪತ್ತೆಗಾಗಿ ಡಿಎಪಿ, ವಿರಾಜಪೇಟೆ ಉಪವಿಭಾಗ ರವರ ನೇತೃತ್ವದಲ್ಲಿ ಉಪವಿಭಾಗ ಮಟ್ಟದ ವಿಶೇಷ ತನಿಖಾ ತಂಡವನ್ನು ರಚಿಸಿ ತನಿಖೆ ಕೈಗೊಳ್ಳಲಾಗಿರುತ್ತದೆ.

ಬೇಗೂರು ಗ್ರಾಮ ಬಾಳಂಗಾಡು ಪ್ರದೇಶದಲ್ಲಿ ಬುಡಕಟ್ಟು ಜನಾಂಗದ ಶ್ರೀ ಕರಿಯ, ಶ್ರೀಮತಿ ಗೌರಿ, 70 ವರ್ಷ ಮೇಲ್ಪಟು, ಶ್ರೀಮತಿ ನಾಗಿ, 30 ವರ್ಷ, ಮತ್ತು ಕು ಕಾವೇರಿ, 7 ವರ್ಷ ಹಾಗೂ ಗಿರೀಶ್, 38 ವರ್ಷ ಎಂಬುವವರು ಒಂಟಿ ಮನೆಯಲ್ಲಿ ವಾಸವಿದ್ದು, ಆರೋಪಿ ಗಿರೀಶ್ ಎಂಬಾತನು ನಾಗಿಯ ಮೂರನೇ ಗಂಡನಾಗಿದ್ದು ಒಂದು ವರ್ಷದಿಂದ ಒಟ್ಟಿಗೆ ವಾಸವಿರುತ್ತಾರೆ. ನಾಗಿಯ ಎರಡನೇ ಗಂಡನಾದ ಸುಬ್ರಮಣಿಯೊಂದಿಗೆ ಮತ್ತೆ ಸಂಬಂಧವಿರುವ ಬಗ್ಗೆ ಸಂಶಯದಿಂದ ಆರೋಪಿ ಗಿರೀಶನು ದಿ: 27-03-2025 ರಂದು ರಾತ್ರಿ ಸಮಯದಲ್ಲಿ  ಕರಿಯ ( ನಾಗಿಯ ಅಜ್ಜ), ಶ್ರೀಮತಿ ಗೌರಿ ( ನಾಗಿಯ ಅಜ್ಜಿ), 70 ವರ್ಷ ಮೇಲ್ಪಟು,  ನಾಗಿ, 30 ವರ್ಷ. ಮತ್ತು ಕು| ಕಾವೇರಿ, 7 ವರ್ಷ (ಗಿರೀಶನ ಮಲ ಮಗಳು) ನಾಲ್ಕು ಜನರನ್ನು ಕತ್ತಿಯಿಂದ ಕಡಿದು ಕೊಲೆ ಮಾಡಿ ತಲೆ ಮರೆಸಿಕೊಂಡಿರುವುದು ಪ್ರಾಥಮಿಕ ತನಿಖೆಯಲ್ಲಿ ಕಂಡುಬಂದಿರುತ್ತದೆ.

ಸದರಿ ಪ್ರಕರಣದ ಆರೋಪಿಯನ್ನು ಪ್ರಕರಣ ದಾಖಲಾದ 06 ಗಂಟೆಯಲ್ಲಿ ಕೇರಳ ರಾಜ್ಯದ ತಲಪುಳ ಎಂಬ ಸ್ಥಳದಲ್ಲಿ ವಿಶೇಷ ತನಿಖಾ ತಂಡವು ದಸ್ತಗಿರಿ ಮಾಡಿ ಕಾನೂನು ಕ್ರಮ ಕೈಗೊಳ್ಳಲಾಗಿರುತ್ತದೆ.

Related Articles

Leave a Reply

Your email address will not be published. Required fields are marked *

Back to top button
error: Content is protected !!