ಸಭೆ

ಕೊಡಗು ವಿವಿ ಹಿತರಕ್ಷಣಾ ಬಳಗದಿಂದ ಕುಶಾಲನಗರದಲ್ಲಿ ಸಭೆ

ಕುಶಾಲನಗರ, ಫೆ 24: ಕೊಡಗು ವಿವಿ ಮುಚ್ಚುವ, ವಿಲೀನಗೊಳಿಸುವ ಸರಕಾರದ ಸಂಪುಟ ಉಪಸಮಿತಿಯ ಚಿಂತನೆ ವಿರೋಧಿಸಿ, ಕೊಡಗು ವಿವಿ ಉಳಿಸುವಂತೆ ಆಗ್ರಹಿಸಿ ಕೊಡಗು ವಿವಿ ಹಿತರಕ್ಷಣಾ ಬಳಗ ವತಿಯಿಂದ ಕುಶಾಲನಗರ ಪ್ರವಾಸಿ ಮಂದಿರದಲ್ಲಿ ಸಭೆ ನಡೆಯಿತು.

ಸಭೆಯಲ್ಲಿ ಪಾಲ್ಗೊಂಡಿದ್ದ
ಮಡಿಕೇರಿ ಕ್ಷೇತ್ರ ಶಾಸಕ ಡಾ.ಮಂತರ್ ಗೌಡ ಅವರ ಸಮ್ಮುಖದಲ್ಲಿ ಕೊಡಗು ವಿವಿ ಉಳಿವು, ಅಭಿವೃದ್ಧಿ ಬಗ್ಗೆ ಭಾಗಿಯಾಗಿದ್ದ ವಿವಿಧ ಸಂಘಸಂಸ್ಥೆ, ಸಂಘಟನೆ ಪ್ರಮುಖರು ಚರ್ಚೆ ನಡೆಸಿದರು.

ಕೊಡಗು ವಿವಿ ಯಿಂದ ಉಂಟಾಗಿರುವ ಅನುಕೂಲ, ವಿವಿ ವಜಾಗೊಳಿಸುವುದು ಅಥವಾ ವಿಲೀನಗೊಳಿಸುವುದರಿಂದ ಜಿಲ್ಲೆಯ ವಿದ್ಯಾರ್ಥಿಗಳಿಗೆ ಉಂಟಾಗುವ ಅನಾನುಕೂಲತೆ ಬಗ್ಗೆ ಕೊಡಗು ವಿವಿ ಹಿತರಕ್ಷಣಾ ಬಳಗ ಅಧ್ಯಕ್ಷ ಕೆ.ಎಸ್.ಕೃಷ್ಣೇಗೌಡ, ಕುಶಾಲನಗರ ತಾಲೂಕು ಗ್ಯಾರೆಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ವಿ.ಪಿ.ಶಶಿಧರ್, ಮುಖಂಡ ನಾಪಂಡ ಮುತ್ತಪ್ಪ ಮತ್ತಿತರರು ಮಾತನಾಡಿದರು.

ಇದೇ ಸಂದರ್ಭ ‌ಕೊಡಗು ವಿವಿ ಮುಂದುವರೆಸುವಂತೆ ಆಗ್ರಹಿಸಿ ಬಳಗದ ವತಿಯಿಂದ ಶಾಸಕರಿಗೆ ಮನವಿ ಪತ್ರ ಸಲ್ಲಿಸಲಾಯಿತು.

ಈ ಸಂದರ್ಭ ಮಾತನಾಡಿದ ಶಾಸಕ ಡಾ.ಮಂತರ್ ಗೌಡ, ಕೊಡಗು‌ ಜಿಲ್ಲೆಯ ಪ್ರತಿಷ್ಠೆಯಾಗಿರುವ ಕೊಡಗು ವಿವಿ ಉಳಿಸಿಕೊಳ್ಳುವುದು‌ ನಮ್ಮೆಲ್ಲರ ಜವಾಬ್ದಾರಿಯಾಗಿದೆ.‌ ನಿಮ್ಮೆಲ್ಲರ‌ ಬೇಡಿಕೆಯಂತೆ ವಿದ್ಯಾರ್ಥಿಗಳ ಪ್ರಗತಿಗೆ ಕೊಡಗು ವಿವಿ ಉಳಿಸಿಕೊಳ್ಳಲು ನನ್ನ ಸಹಮತವಿದೆ.
ಜಿಲ್ಲೆಯ ಸಾಕ್ಷರತೆ ಪ್ರಮಾಣ ಕೂಡ ಉತ್ತಮವಾಗಿದ್ದು ಉನ್ನತ ಶಿಕ್ಷಣ ನಿಟ್ಟಿನಲ್ಲಿ ಕೊಡಗು ವಿವಿ ಉಳಿಸಿ‌ ಬೆಳೆಸುವ ಅಗತ್ಯವಿದೆ. ಮಂಗಳೂರು, ಬೆಂಗಳೂರು ವಿವಿ ಮಾದರಿಯಲ್ಲಿ ಕೊಡಗು ವಿವಿ ಕೂಡ ಅಭಿವೃದ್ಧಿ ಹೊಂದುವಂತಾಗಬೇಕು.
ಕೊಡಗು ವಿವಿ ಅಗತ್ಯತೆ ಬಗ್ಗೆ ಈಗಾಗಲೆ ಮುಖ್ಯಮಂತ್ರಿ ಸೇರಿದಂತೆ ಸಂಬಂಧಿಸಿದವರ ಬಳಿ ಜಿಲ್ಲೆಯ ಇಬ್ಬರು ಶಾಸಕರು, ಉಸ್ತುವಾರಿ ಸಚಿವರಾದಿಯಾಗಿ ಚರ್ಚಿಸಿದ್ದೇವೆ. ಮತ್ತೊಂದೆಡೆ ಕೊಡಗು‌ ವಿವಿ ವಿಲೀನಗೊಳಿಸುವ ಪ್ರಯತ್ನಕ್ಕೆ ಕೂಡ‌ ಕೆಲವರು ತೆರೆಮರೆಯಲ್ಲಿ ಮುಂದಾಗಿದ್ದಾರೆ. ಕೇವಲ ಆರ್ಥಿಕ ಸ್ಥಿತಿಗತಿ ಮೇಲೆ ವಿವಿಯ ಅಸ್ತಿತ್ವ ಪ್ರಶ್ನೆಯಾಗಬಾರದು. ಖಾಸಗಿ ಸಂಸ್ಥೆಗಳ‌ ಸಿ.ಎಸ್.ಆರ್. ಅನುದಾನ ಒಳಗೊಂಡಂತೆ ಶಾಸಕರ ನಿಧಿಯ ಪಾಲನ್ನು ವಿನಿಯೋಗಿಸಿ ಕೊಡಗು ವಿವಿ ಉಳಿಸಿಕೊಳ್ಳಲು ಪ್ರಯತ್ನಿಸುತ್ತೇನೆ. ಮಾರ್ಚ್ ತಿಂಗಳಲ್ಲಿ ದಿನಾಂಕ ನಿಗದಿಗೊಳಿಸಿ ಜಿಲ್ಲೆಯಿಂದ ಬೆಂಗಳೂರಿಗೆ ನಿಯೋಗ ತೆರಳಿ ಮುಖ್ಯಮಂತ್ರಿಗಳು ಹಾಗೂ ಉಪಸಮಿತಿಯ ಬಳಿ‌ ವಿವಿಯ ಸ್ಥಿತಿಗತಿ, ವಾಸ್ತವಾಂಶದ ಬಗ್ಗೆ ಗಮನ ಸೆಳೆಯಲು ಸಿದ್ದರಾಗಲು ಅವರು ಸೂಚಿಸಿದರು.

ಈ ಸಂದರ್ಭ ಪುರಸಭೆ ಅಧ್ಯಕ್ಷೆ ಜಯಲಕ್ಷ್ಮಿ ಚಂದ್ರು, ಕುಡಾ ಅಧ್ಯಕ್ಷ ಪ್ರಮೋದ್ ಮುತ್ತಪ್ಪ, ಕೆಪಿಸಿಸಿ ಸದಸ್ಯ ಮಂಜುನಾಥ್ ಗುಂಡುರಾವ್, ಪುರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಎಂ.ಬಿ
ಸುರೇಶ್,
ಸದಸ್ಯರಾದ ದಿನೇಶ್, ಜಯಲಕ್ಷ್ಮಿ ನಂಜುಂಡಸ್ವಾಮಿ, ಎಂ.ಎಂ.ಪ್ರಕಾಶ್, ಶಿವಶಂಕರ್, ಜಿ.ಬಿ.ಜಗದೀಶ್, ನಗರ ಕಾಂಗ್ರೆಸ್ ಅಧ್ಯಕ್ಷ ಜೋಸೆಫ್ ವಿಕ್ಟರ್ ಸೋನ್ಸ್, ಕುಡಾ ಸದಸ್ಯ ಕಿರಣ್, ಶಾಜಿ ಸೇರಿದಂತೆ ವಿವಿಧ ಸಂಘಸಂಸ್ಥೆಗಳ ಪ್ರಮುಖರಾದ ಟಿ.ಆರ್.ಶರವಣಕುಮಾರ್, ದೀಪಕ್, ದೀಪಾ ಪೂಜಾರಿ, ಲೋಕೇಶ್ ಸಾಗರ್, ಹೆಚ್.ವಿ.ಶಿವಪ್ಪ, ಶಾಂಭಶಿವಮೂರ್ತಿ, ಉದಯಕುಮಾರ್ ಸೇರಿದಂತೆ ಪಕ್ಷದ ಮುಖಂಡರು, ಕೊಡಗು ವಿವಿ ಉಪನ್ಯಾಸಕರು ಇದ್ದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!