ಕಾರ್ಯಕ್ರಮ

ಕ್ರೈಸ್ತ ಸೇವಾ ಸಂಘದಿಂದ ಪ್ರತಿಭಾ ಪುರಸ್ಕಾರ, ಸನ್ಮಾನ ಕಾರ್ಯಕ್ರಮ

ಕುಶಾಲನಗರ ಘಟಕದ ಆಶ್ರಯದಲ್ಲಿ ತಪೋವನ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮ

ಕುಶಾಲನಗರ ಜೂ 16: ಕೊಡಗು ಜಿಲ್ಲಾ ಕ್ರೈಸ್ತ ಸೇವಾ ಸಂಘದ ಕುಶಾಲನಗರ ಘಟಕದ ಆಶ್ರಯದಲ್ಲಿ ಎಸ್ಸೆಸ್ಸೆಲ್ಸಿ, ಪಿಯುಸಿಯಲ್ಲಿ ಗರಿಷ್ಠ ಅಂಕ‌ಗಳಿಸಿದ ಸಮುದಾಯದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಾಗೂ ಸಾಧಕರಿಗೆ ಸನ್ಮಾನ‌ ಕಾರ್ಯಕ್ರಮ ಮುಳ್ಳುಸೋಗೆ ತಪೋವನ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿತ್ತು.

ಕಾರ್ಯಕ್ರಮದಲ್ಲಿ ಪಾಲ್ಗೊಂಡು ಸನ್ಮಾನ‌ ಹಾಗೂ ಪ್ರತಿಭಾ ಪುರಸ್ಕಾರ ನೆರವೇರಿಸಿದ‌ ಮಡಿಕೇರಿ ಕ್ಷೇತ್ರ ಶಾಸಕ ಡಾ.ಮಂಥರ್ ಗೌಡ ಮಾತನಾಡಿ, ಕೇವಲ ಪಠ್ಯ ಪುಸ್ತಗಳಿಗೆ ಮಾತ್ರ ಶಿಕ್ಷಣ ಸೀಮಿತವಾಗಬಾರದು. ವಿದ್ಯಾರ್ಥಿಗಳು ಸರ್ವತೋಮುಖ‌ ಬೆಳವಣಿಗೆ ಹೊಂದುವ ಅಗತ್ಯವಿದೆ. ಕೌಶ್ಯಲಗಳನ್ನು ಹಾಗೂ ಸಾಮಾಜಿಕವಾಗಿ ಎಲ್ಲರೊಂದಿಗೆ ಬೆರೆಯುವ ಗುಣ ಅಳವಡಿಸಿಕೊಂಡು ಶಿಸ್ತು ಬದ್ದ ಜೀವನ ರೂಡಿಸಿಕೊಂಡಾಗ ಜೀವನದಲ್ಲಿ ಯಶಸ್ಸು ಗಳಿಸಲು ಸಾಧ್ಯ ಎಂದರು. ಉತ್ತಮ ಅಂಕ‌ ಪಡೆದ ವಿದ್ಯಾರ್ಥಿಗಳನ್ನು ಹೊರತುಪಡಿಸಿ ಅವಕಾಶ ವಂಚಿತ ವಿದ್ಯಾರ್ಥಿಗಳ ಶೈಕ್ಷಣಿಕ ಅಭಿವೃದ್ಧಿಗೆ ಕೂಡ ಕಾಳಜಿ ವಹಿಸುವಂತಾಗಬೇಕಿದೆ ಎಂದು ಕರೆ ನೀಡಿದರು.

ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದ ಕೊಡಗು ಜಿಲ್ಲಾ ಕ್ರೈಸ್ತ ಸೇವಾ ಸಂಘದ ಅಧ್ಯಕ್ಷ ಕೆ.ಟಿ.ಬೇಬಿ‌ ಮ್ಯಾಥ್ಯು‌ ಮಾತನಾಡಿ, ಕೊಡಗು ಜಿಲ್ಲಾ ಕ್ರೈಸ್ತ ಸೇವಾ ಸಂಘ ರಾಜಕೀಯ ರಹಿತವಾಗಿ ಸರಕಾರದ ಸೌಲಭ್ಯಗಳನ್ನು ಸಮುದಾಯದ ಎಲ್ಲರಿಗೂ ಮನೆ ಬಾಗಿಲಿಗೆ ತಲುಪಿಸುವ ಕೆಲಸ ಮಾಡಿಕೊಂಡು ಬರುತ್ತಿದೆ ಎಂದರು.

ಕುಶಾಲನಗರ ಪುರಸಭಾ ಸದಸ್ಯ ಪ್ರಮೋದ್ ಮುತ್ತಪ್ಪ ಮಾತನಾಡಿ, ಮಕ್ಕಳನ್ನು ಸುಶಿಕ್ಷಿತರಾಗಿಸುವುದರೊಂದಿಗೆ ಉತ್ತಮ ನಾಗರಿಕರನ್ನಾಗಿಸುವ ಅಗತ್ಯವಿದೆ. ಕೇವಲ ಅಂಕಗಳಿಗೆ ಸೀಮಿತಗೊಳಿಸದೆ ಅವರಲ್ಲಿ ಸಾಮಾಜಿಕ ಮೌಲ್ಯಗಳನ್ನು ಬಿತ್ತಬೇಕಿದೆ ಎಂದು ಕರೆ ನೀಡಿದರು. ವಿದ್ಯಾರ್ಥಿಗಳು ಕೂಡ ತಾವು ಪ್ರತಿನಿಧಿಸುವ ಸಮುದಾಯ ಹಾಗೂ ಸಮಾಜ ಹೆಮ್ಮೆಪಡುವ ರೀತಿಯಲ್ಲಿ ಬೆಳವಣಿಗೆ ಹೊಂದಬೇಕಿದೆ ಎಂದರು.

ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ವಿ.ಪಿ.ಶಶಿಧರ್ ಮಾತನಾಡಿ, ದೇಶದ ಭವಿಷ್ಯತ್ತಿನ ನಿರ್ಮಾತೃಗಳಾದ ಯುವ ಸಮೂಹದಲ್ಲಿ‌ ಸಾಮಾಜಿಕ ಬದ್ದತೆ, ಹೊಣೆಗಾರಿಕೆ, ನೈತಿಕತೆ, ಉತ್ತಮ ಸಂಸ್ಕಾರ ಬಿತ್ತನೆ ಮಾಡಬೇಕಿದೆ. ಕೇವಲ ಅಂಕಗಳಿಂದ ಮಾತ್ರ ವಿದ್ಯಾರ್ಥಿಗಳ ಪ್ರತಿಭೆಗಳನ್ನು ಅಳೆಯುವ ಪರಿಪಾಠ ಕಡಿಮೆಯಾಗಬೇಕಿದೆ.

ಮಾನವ ಕುಲ ಜಾತಿ, ಮತ, ಧರ್ಮ, ಆಚರಣೆಗಳಲ್ಲಿ ವಿಭಿನ್ನತೆಗಳನ್ನು ಪಾಲಿಸುವ ಮೂಲಕ ಮನಸ್ಸುಗಳ ನಡುವೆ ಕಂದಕ ಸೃಷ್ಠಿಸಿಕೊಂಡಿರುವುದು ವಿಷಾದಕರ ಸಂಗತಿ. ಎಲ್ಲೆಡೆ ಪ್ರೀತಿ, ವಿಶ್ವಾಸ ಪಸರಿಸುವ ಅನಿವಾರ್ಯ ಇಂದು ಜಗತ್ತಿಗೆ ಎದುರಾಗಿದೆ. ಸಹನೆ, ಪ್ರೀತಿಯ ಸಂದೇಶಗಳನ್ನು ಸಾರಿದ ಏಸುಕ್ರಿಸ್ತ ಹಾಗೂ ಆತನ ಅನುಯಾಯಿಗಳು ಶಾಂತಿ, ಸೌಹಾರ್ದತೆಗೆ ಹೆಸರುವಾಸಿಯಾಗಿದ್ದಾರೆ. ವಿವಿಧ ಕ್ಷೇತ್ರಗಳಲ್ಲಿ ಸಮಾಜಕ್ಕೆ ಕ್ರೈಸ್ತರು‌ ನೀಡಿದ ಕೊಡುಗೆ ಇಂದಿಗೂ ಚಿರಸ್ಥಾಯಿಯಾಗಿರುವುದು ಕಾಣಬಹುದು ಎಂದರು.

ಕೊಡಗು ಜಿಲ್ಲಾ ರೋಮನ್ ಕ್ಯಾಥೋಲಿಕ್ ಸಂಘದ ಅಧ್ಯಕ್ಷ ಜಾನ್ಸನ್ ಪಿಂಟೋ ಮಾತನಾಡಿದರು.

ಕ್ರೈಸ್ತ ಸೇವಾ ಸಂಘದ ಕುಶಾಲನಗರ ಘಟಕದ ಅಧ್ಯಕ್ಷ ಎನ್.ಟಿ.ಜೋಸೆಫ್ ಅಧ್ಯಕ್ಷತೆ ವಹಿಸಿದ್ದರು.

ತಪೋವನದ ಫಾ.ಜೋಸೆಫ್, ಫಾ.ಲಾರೆನ್ಸ್ ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿದ್ದರು.

ಇದೇ ಸಂದರ್ಭ ವೈದ್ಯರಾದ ಡಾ.ರೂಬಲ್‌ ಕೋಟ್ಸ್, ಡಾ.ಪ್ರಣಿತ ಸಲ್ಡಾನ, ರಾಜ್ಯಮಟ್ಟದ ಚೆಸ್ ಆಟಗಾರ ಎ.ಅಗಸ್ಟಿನ್ ಸೇರಿದಂತೆ ಉತ್ತಮ ಅಂಕಗಳಿಸಿದ ವಿದ್ಯಾರ್ಥಿಗಳು ಹಾಗೂ ಪೋಷಕರಿಗೆ ಸನ್ಮಾನಿಸಿ, ಪ್ರೋತ್ಸಾಹ ಧನ‌ ವಿತರಿಸಲಾಯಿತು.

ಈ ಸಂದರ್ಭ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಕೈಸರ್ ಪೋರ್ಶೆರಾ, ಕ್ರೈಸ್ತ ಸಂಘದ ಉಪಾಧ್ಯಕ್ಷ ಪ್ಯಾಟ್ರಿಕ್, ಕಾರ್ಯದರ್ಶಿ ಸಲೀನಾ ಡಿ ಕುನ್ನಾ, ಸಹ ಕಾರ್ಯದರ್ಶಿ ಜೇಮ್ಸ್ ಡಿಸೋಜ, ಖಜಾಂಚಿ ಆಲ್ಬರ್ಟ್ ಗೋನ್ಸಲ್ವೆಸ್ ಸೇರಿದಂತೆ ಆಡಳಿತ ಮಂಡಳಿ ಪದಾಧಿಕಾರಿಗಳು, ಸದಸ್ಯರು ಇದ್ದರು.

 

Related Articles

Leave a Reply

Your email address will not be published. Required fields are marked *

Back to top button
error: Content is protected !!