ಕುಶಾಲನಗರ, ಸೆ 02: : ಭಾರತ ಸರಕಾರದ ಬುಡಕಟ್ಟು ವ್ಯವಹಾರಗಳ ಮಂತ್ರಾಲಯ ಹಾಗೂ ನಂಜರಾಯಪಟ್ಟಣ ಗ್ರಾಮ ಪಂಚಾಯಿತಿ ಸಹಯೋಗದಲ್ಲಿ ರಂಗಸಮುದ್ರ ಗ್ರಾನದ ಕಬ್ಬಿನಗದ್ದೆ ಹಾಡಿಯಲ್ಲಿ ಅರಣ್ಯ ಹಕ್ಕು ಸಮಿತಿ ಗ್ರಾಮಸಭೆ ನಡೆಯಿತು.
ಸಭೆಯಲ್ಲಿ ಕಬ್ಬಿನಗದ್ದೆ, ಕಟ್ಟೆಹಾಡಿ, ಮಾವಿನಹಳ್ಳ ಹಾಡಿಗಳ ನಿವಾಸಿಗಳು ತಮ್ಮ ಜಾಗಕ್ಕೆ ಹಕ್ಕುಪತ್ರ ಪಡೆದುಕೊಳ್ಳುವ ನಿಟ್ಟಿನಲ್ಲಿ ಸಲ್ಲಿಸಬೇಕಾದ ಅರ್ಜಿ ಕ್ರಮಗಳ ಬಗ್ಗೆ, ಅರಣ್ಯ ಹಕ್ಕು ಸಮಿತಿ ರಚನೆ, ಪದಾಧಿಕಾರಿಗಳ ಪಟ್ಟಿ ಅನುಮೋದನೆ ಪಡೆದುಕೊಳ್ಳುವುದು, ವೈಯಕ್ತಿಕ ಹಾಗೂ ಸಮುದಾಯ ಹಕ್ಕುಗಳ ಬಗ್ಗೆ ಚರ್ಚಿಸಲಾಯಿತು.
ಸಭೆಯಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ನಂಜರಾಯಪಟ್ಟಣ ಗ್ರಾಪಂ ಅಭಿವೃದ್ಧಿ ಅಧಿಕಾರಿ ರಾಜಶೇಖರ್, ಅರಣ್ಯ ವ್ಯಾಪ್ತಿಯಲ್ಲಿರುವ ಗಿರಿಜನರಿಗೆ ಎಲ್ಲಾ ರೀತಿಯ ಸೌಲಭ್ಯ ಹಾಗೂ ಹಕ್ಕು ಒದಗಿಸಲು, ಅರಣ್ಯ ಹಕ್ಕು ಸಮಿತಿ ರಚನೆ ಮಾಡಲಾಗಿದೆ.
ಅರ್ಜಿ ಸಲ್ಲಿಕೆ ಸಂದರ್ಭ ಪೂರಕ ದಾಖಲೆಗಳನ್ನು ಸಮರ್ಪಕವಾಗಿ ಒದಗಿಸಬೇಕಿದೆ. ಅರ್ಜಿ ಸಲ್ಲಿಸಿದ ನಂತರ ಜಂಟಿ ಸರ್ವೆಗೆ ಅರಣ್ಯ, ಕಂದಾಯ ಹಾಗೂ ಸರ್ವೆ ಇಲಾಖೆಗೆ ಕಳುಹಿಸಿಕೊಡಲಾಗುತ್ತದೆ.ಸರ್ವೆ ಆದ ನಂತರ ಫಲಾನುಭವಿಗಳು ಅನುಭವದಲ್ಲಿರುವ ಜಾಗದ ನಕ್ಷೆ ಸಿದ್ಧಪಡಿಸಲಾಗುತ್ತದೆ ಎಂದರು.
ಗ್ರಾಪಂ
ಸದಸ್ಯ ಮಾವಜಿ ರಕ್ಷಿತ್ ಮಾತನಾಡಿ, 2006ರ ಅರಣ್ಯ ಹಕ್ಕು ಕಾಯ್ದೆ ಅನುಸೂಚಿತ ಬುಡಕಟ್ಟು ಜನಾಂಗ ಹಾಗೂ ಅರಣ್ಯ ಅವಲಂಬಿತರಿಗೆ ಸಾಮಾಜಿಕ ನ್ಯಾಯ ಒದಗಿಸಲು ಕಾಯ್ದೆ ಜಾರಿಗೆ ತಂದಿದೆ. ನಮ್ಮ ನಿವಾಸಿಗಳಿಗೆ ಮೂಲಭೂತ ಸೌಕರ್ಯಗಳ ಜೊತೆಗೆ ನಾವು ಅನುಭವಿಸುತ್ತಿರುವ ಜಾಗಕ್ಕೆ ದಾಖಲೆ ಇಲ್ಲ.ಆದರೆ ಅರಣ್ಯ ಹಕ್ಕು ಸಮಿತಿ ಯಿಂದ ಬಗೆಹರಿಸಿಕೊಳ್ಳಬೇಕು.ಇದಕ್ಕಾಗಿ ನಾವು ಯಾವುದೇ ರೀತಿಯ ಹೋರಾಟ ನಡೆಸಲು ಸಿದ್ಧರಾಗಿದ್ದೇವೆ ಎಂದರು.
ಮುಖ್ಯ ಭಾಷಣ ಮಾಡಿದ ಗಿರಿಜನ ಮುಖಂಡ, ಗ್ರಾಪಂ ಸದಸ್ಯ ಆರ್.ಕೆ.ಚಂದ್ರ, ಗ್ರಾಮ ಪಂಚಾಯತಿ ಸದಸ್ಯ ಆರ್.ಕೆ.ಚಂದ್ರು ಮಾತನಾಡಿ, ಇದು ಕಬ್ಬಿನಗದ್ದೆ ನಡೆಯುತ್ತಿರುವ 9 ನೇ ಸಭೆಯಾಗಿದೆ. ನಮ್ಮ ನೆಲ,ಜಲ ಹಕ್ಕು ಪಡೆಯುವುದು ನಮ್ಮ ಕರ್ತವ್ಯ.ಈ ಹಿಂದಿನ ಪ್ರಧಾನಿಯಾಗಿದ್ದ ದೇವೇಗೌಡ ಹಾಗೂ ಮನಮೋಹನ್ ಸಿಂಗ್ ಅವರು ಜಾರಿಗೆ ತಂದ ಕಾನೂನು ಗಿರಿಜನರ ಅಭಿವೃದ್ಧಿಗೆ ಪೂರಕವಾಗಿದೆ ಎಂದರು. ಗಿರಿಜನರ ಅಭಿವೃದ್ಧಿ ವಿಚಾರದಲ್ಲಿ
ರಾಜಕೀಯ ಕುತಂತ್ರ ನಡೆಯುತ್ತಿದೆ. ಎಲ್ಲರೂ ಒಟ್ಟಾಗಿ ಸಂಘಟಿತರಾಗಿ ಹೋರಾಟ ನಡೆಸುವ ಮೂಲಕ ನಮ್ಮ ಹಕ್ಕು ಪಡೆದುಕೊಳ್ಳಬೇಕು.
ಅರಣ್ಯ ಸಿಬ್ಬಂದಿಗಳು ಈ ಜಾಗ ನಿಮ್ಮದಲ್ಲ ಎಂದು ಹೇಳಿ ಕಬ್ಬಿನಗದ್ದೆ ನುಗ್ಗಿ ಸರ್ವೆ ಮಾಡುವ ಕ್ರಮ ಸರಿಯಲ್ಲ.ಈ ಬಗ್ಗೆ ಹಿರಿಯ ಹಾಡಿ ಯಜಮಾನರನ್ನು ಕೇಳಬೇಕು.ಈ ಜಾಗದ ಹಿನ್ನೆಲೆಯಲ್ಲಿ ಬಗ್ಗೆ ತಿಳಿದುಕೊಳ್ಳಬೇಕು. ಇಲ್ಲಿ ನಮ್ಮ ಪೂರ್ವಿಕರನ್ನು ಅಂತ್ಯಸಂಸ್ಕಾರ ಮಾಡಿದ್ದೇವೆ. ನಮ್ಮ ವನದೇವತೆಗೆ ಪೂಜೆ ಸಲ್ಲಿಸುತ್ತೇವೆ.ಇದು ಆದಿವಾಸಿ ಸಂಪ್ರದಾಯದಂತೆ ಪೂಜೆ ಸಲ್ಲಿಸುತ್ತೇವೆ.ಈ ಬಗ್ಗೆ ಅರಣ್ಯ ಇಲಾಖೆ ಮಾಹಿತಿ ಪಡೆದು ಗಿರಿಜನ ವಾಸಿಸುವ ಜಾಗ ಅನುಭವಿಸಲು ಅವಕಾಶ ಮಾಡಿಕೊಡಬೇಕು ಎಂದರು. ಆದರೆ ಇತ್ತೀಚಿನ ದಿನಗಳಲ್ಲಿ
ಡೊಂಗಿ ಪರಿಸರವಾದಿ ಗಿರಿಜನರ ಅಭಿವೃದ್ಧಿ ಅಡ್ಡಿ ಪಡಿಸುತ್ತಿದ್ದಾರೆ. ಅರಣ್ಯದ ಮರಗಳನ್ನು ಲೂಟಿ ಮಾಡುತ್ತಿರುವ ಇಂತಹ ವ್ಯಕ್ತಿಗಳ ಬಗ್ಗೆ ಅರಣ್ಯ ಇಲಾಖೆ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ.ಆದರೆ ಅರಣ್ಯದಲ್ಲಿ ಗಿರಿಜನರು
ಕಿರುಉತ್ಪನ್ನಗಳಾದ ಜೇನು,ಸೀಗೆ,ಅಂಟುವಾಳ,ಗೆಣಸುಗೆಡ್ಡೆ ತರಲು ಹೋದರೆ ಅಂತಹವರ ಮೇಲೆ ಅರಣ್ಯ ಇಲಾಖೆ ದಬ್ಬಾಳಿಕೆ ನಡೆಸುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
58 ಕುಟುಂಬ ಇಲ್ಲಿ ವಾಸ ಮಾಡುತ್ತಿದ್ದೇವೆ.ಆದರೆ ಸಂಬಂಧಿಸಿದ ಸಮಾಜ ಕಲ್ಯಾಣ ಹಾಗೂ ಐಟಿಡಿಪಿ ಇಲಾಖೆ ಮಾಹಿತಿಯೇ ಇಲ್ಲ.ನಾನು ನಿಮ್ಮ ಜೊತೆ ಇದ್ದೇನೆ ಯಾವುದೇ ಹೋರಾಟ ನಾನು ಸಿದ್ಧನಾಗಿದ್ದೇನೆ.ಈ ಭಾಗದ ಗಿರಿಜನರಿಗೆ ಹಕ್ಕುಪತ್ರ ಕೊಡಿಸಲು ಪ್ರಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಭರವಸೆ ನೀಡಿದರು.
ಗಿರಿಜನ ಮುಖಂಡ ಜೆ.ಟಿ. ಕಾಳಿಂಗ ಮಾತನಾಡಿ,
ನಾವು ಭಿಕ್ಷೆ ಕೇಳಲು ಬರುತ್ತಿಲ್ಲ. ನಮ್ಮ ಪೂರ್ವಿಕರು ಅನುಭವಿಸುತ್ತಿದ್ದ ಜಾಗದ ಹಕ್ಕು ನೀಡಬೇಕು.ಸಮುದಾಯದ ಹಕ್ಕು ಸಿಗಬೇಕು. ಅರಣ್ಯ ಹಕ್ಕು ಸಮಿತಿಗೆ ಮಾಹಿತಿ ನೀಡಿ ಅಧಿಕಾರಿಗಳು ಮುಂದಿನ ಕ್ರಮ ಕೈಗೊಳ್ಳಬೇಕು ಎಂದರು.
ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿ ರವಿ,
ಅರಣ್ಯ ಇಲಾಖೆ ಬೀಟ್ ಫಾರೆಸ್ಟ್ ಎಂ.ಕೂಡ್ಲೆಪ್ಪ ಮಾಹಿತಿ ನೀಡಿದರು.
ಈ ಸಂದರ್ಭ ಕಬ್ಬಿನಗದ್ದೆ ಹಾಡಿ ಅರಣ್ಯ ಹಕ್ಕು ಸಮಿತಿ ಅಧ್ಯಕ್ಷ ಸತೀಶ್, ಕಟ್ಟೆಹಾಡಿಯ ಅಪ್ಪು, ಮಾವಿನಹಳ್ಳದ ನಾಗೇಶ್, ಕಬ್ಬಿನಗದ್ದೆ ಹಾಡಿ ಯಜಮಾನ ಧರ್ಮಪ್ಪ, ಪಂಚಾಯಿತಿ ಕಾರ್ಯದರ್ಶಿ ಶೇಷಾಚಲ,ವಿವಿಧ ಇಲಾಖೆಯ ಅಧಿಕಾರಿಗಳು ಭಾಗವಹಿಸಿದ್ದರು.
ಬಾಕ್ಸ್ : ನಂಜರಾಯಪಟ್ಟಣ ವ್ಯಾಪ್ತಿಯ ಫೋಕ್ಸೊ ಪ್ರಕರಣಗಳು ಹೆಚ್ಚು ನಡೆಯುತ್ತಿದೆ.ಈ ಬಗ್ಗೆ ಗಿರಿಜನರು ಜಾಗೃತರಾಗಬೇಕು. ಯಾವುದೇ ಕಾರಣಕ್ಕೂ ಬಾಲ್ಯ ವಿವಾಹ ಮಾಡಬಾರದು,ಪೋಷಕರ ಮೇಲೆ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ ಎಂದರು.ಲೈಂಗಿಕ ದೌರ್ಜನ್ಯ ತಡೆಗೆ ಹಾಡಿಗಳ ಯಜಮಾನ ಗಿರಿಜನರಿಗೆ ತಿಳುವಳಿಕೆ ನೀಡಬೇಕು ಎಂದು ಪಿಡಿಒ ಸಲಹೆ ನೀಡಿದರು.
Back to top button
error: Content is protected !!