ಕಾರ್ಯಕ್ರಮ

ನಾಟ್ಯಾನಿಕೇತನ ಸಂಗೀತ ನೃತ್ಯ ಶಾಲೆಯಲ್ಲಿ ಗೆಜ್ಜೆ ಪೂಜೆ ಕಾರ್ಯಕ್ರಮ

ಕುಶಾಲನಗರ, ಅ 16 : ಕೊಡಗು ಜಿಲ್ಲಾ ಕೇಂದ್ರ ಮಡಿಕೇರಿ ಹಾಗು ಕುಶಾಲನಗರದ ನಾಟ್ಯಾನಿಕೇತನ ಸಂಗೀತ ನೃತ್ಯ ಶಾಲೆಯ ಕಲಿಕಾ ಮಕ್ಕಳ ಗೆಜ್ಜೆಪೂಜೆ ಕಾರ್ಯಕ್ರಮ ಮಡಿಕೇರಿಯ ಬ್ರಾಹ್ಮಣರ ಕಲ್ಯಾಣ ಮಂಟಪದಲ್ಲಿ ಭಾನುವಾರ ನೆರವೇರಿತು.
ಕುಶಾಲನಗರ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಕೆ.ಎಸ್.ಮೂರ್ತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿ, ಬದಲಾಗುತ್ತಿರುವ ಆಧುನಿಕ ಜೀವನ ಘಟ್ಟದಲ್ಲಿ ನಾಡಿನ ಕಲೆ, ಸಾಹಿತ್ಯ, ಸಂಗೀತ ಹಾಗು ಭರತ ನಾಟ್ಯಗಳಂತಹ ಕಲೆಗಳನ್ನು ಉಳಿಸಿ ಬೆಳೆಸುವುದು ಇಂದು ಅತೀ ಅಗತ್ಯವಿದೆ. ಮೊಬೈಲ್ ಗಳಿಂದ ದೂರವಿಟ್ಟು ಕಲೆ, ಸಂಗೀತ, ಆಚಾರ ವಿಚಾರಗಳನ್ನು ಕಲಿಸುವ ಮೂಲಕ ಮಕ್ಕಳನ್ನು ಸಾಂಸ್ಕ್ರತಿಕವಾಗಿ ಶ್ರೀಮಂತಗೊಳಿ
ಸಬೇಕು. ಮಕ್ಕಳಿಗೆ ಅಂಕಗಳ ಆಧಾರಿತ ಶಿಕ್ಷಣಕ್ಕಿಂತ ಮೌಲ್ಯಗಳನ್ನು ವರ್ಧಿಸುವ ಇಂತಹ ನಾಟ್ಯ ಕಲೆಗಳ ಶಿಕ್ಷಣ ಇಂದು ಅಗತ್ಯ ಎಂದು ಕೆ.ಎಸ್
ಮೂರ್ತಿ ಹೇಳಿದರು.
ಮತ್ತೋರ್ವ ಅತಿಥಿ ಮಡಿಕೇರಿ ಸಾರಿಗೆ ಇಲಾಖೆಯ ಉಪ ಅಧೀಕ್ಷಕಿ ಗೀತಾ ಪ್ರವೀಣ್ ಮಾತನಾಡಿ, ನಮ್ಮ ದೇಶದ ಇತಿಹಾಸ ಪರಂಪರೆ ಸಾರುವ ಕಲೆ ಭರತನಾಟ್ಯ. ಇದು ಮನರಂಜನೆ ಮಾತ್ರವಲ್ಲ. ಇದು ಮಕ್ಕಳಲ್ಲಿ ಸಂತೋಷ ಹಾಗು ಆರೋಗ್ಯವನ್ನು ಕೊಡುವುದರಿಂದ ಪೋಷಕರು ಹೆಚ್ಚು ಪ್ರೋತ್ಸಾಹ ಕೊಡಬೇಕೆಂದು ಕರೆಕೊಟ್ಟರು‌.
ನಾಟ್ಯಾನಿಕೇತನ ಸಂಗೀತ ನೃತ್ಯ ಶಾಲೆಯ ಪೋಷಕರಾದ ಶಿವಣ್ಣ, ವ್ಯವಸ್ಥಾಪಕ ಬಿ.ಎಸ್.ವಿನಯ್, ಕಾರ್ಯದರ್ಶಿ ಸುರೇಶ್, ಸಂಗೀತ ನೃತ್ಯ ಶಾಲೆಯ ಗುರುಗಳಾದ ವಿದೂಷಿ ಪೂರ್ಣಿಮಾ ವಿನಯ್ ಇದ್ದರು.
ಗೆಜ್ಜೆಪೂಜೆ ಕಾರ್ಯಕ್ರಮದಲ್ಲಿ ಹೊಸದಾಗಿ ಇಪ್ಪತ್ತೈದು ಮಕ್ಕಳು ಪಾಲ್ಗೊಂಡಿದ್ದರು. ಹರಿಪ್ರಸಾದ್ ಪೂಜಾ ವಿಧಿ ನಡೆಸಿಕೊಟ್ಟರು.
ಶಿಕ್ಷಕಿ ರೂಪಾ ನಿರೂಪಿಸಿದರು. ಕಾರ್ಯಕ್ರಮದಲ್ಲಿ ಕುಶಾಲನಗರ ತಾಲೂಕು ಕಸಾಪ ಅಧ್ಯಕ್ಷ ಕೆ.ಎಸ್.ಮೂರ್ತಿ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.

Related Articles

Leave a Reply

Your email address will not be published. Required fields are marked *

Back to top button
error: Content is protected !!