ಕುಶಾಲನಗರ, ನ 28:
ಕುಶಾಲನಗರ ಶ್ರೀ ಹನುಮ ದಶಮಂಟಪಗಳ ಸೇವಾ ಟ್ರಸ್ಟ್ ಆಶ್ರಯದಲ್ಲಿ ನಡೆಯುವ ಹನುಮ ಜಯಂತಿ ಕಾರ್ಯಕ್ರಮದ ಪೂರ್ವಭಾವಿ ಸಭೆ ನಡೆಯಿತು. ದಶಮಂಟಪ ಸಮಿತಿ ಅಧ್ಯಕ್ಷರಾದ ಎಂ ಡಿ ಕೃಷ್ಣಪ್ಪ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಉಪಸ್ಥಿತರಿದ್ದ ಮಡಿಕೇರಿ ಕ್ಷೇತ್ರ ಶಾಸಕರಾದ ಡಾ ಮಂತರ್ ಗೌಡ ಮಾತನಾಡಿ ಕುಶಾಲನಗರದಲ್ಲಿ ನಾಡ ಹಬ್ಬದ ರೀತಿಯಲ್ಲಿ ನಡೆಯುತ್ತಿರುವ ವಿಜೃಂಭಣೆಯ ಹನುಮ ಜಯಂತಿ ಶೋಭಾ ಯಾತ್ರೆ ಸಂಬಂಧ ಅಗತ್ಯ ಪೂರ್ವ ಸಿದ್ಧತೆಗಳನ್ನು ನಡೆಸಲು ಸಂಬಂಧಿಸಿದ ಇಲಾಖಾ ಅಧಿಕಾರಿಗಳೊಂದಿಗೆ ಚರ್ಚಿಸಲು ಸಭೆ ಏರ್ಪಡಿಸಲಾಗುವುದು ಎಂದರು.
ವಾಹನ ನಿಲುಗಡೆ ವ್ಯವಸ್ಥೆ ಮಂಟಪಗಳು ಸಾಗುವ ರಸ್ತೆಗಳ ದುರಸ್ತಿ ಹಾಗೂ ಭಕ್ತಾದಿಗಳಿಗೆ ಅಗತ್ಯ ಮೂಲಭೂತ ಸೌಕರ್ಯಗಳನ್ನು ಒದಗಿಸಲು ಸಂಬಂಧಿಸಿದ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗುವುದು ಎಂದರು.
ಶೋಭಾಯಾತ್ರೆ ಸಂದರ್ಭ ಹೆದ್ದಾರಿ ವಾಹನ ಸಂಚಾರಗಳಿಗೆ ಯಾವುದೇ ರೀತಿಯ ಅಡ್ಡಿ ಆಗದಂತೆ ಪರ್ಯಾಯ ವ್ಯವಸ್ಥೆ ಕಲ್ಪಿಸಬೇಕು.
ಮಂಟಪ ಸಮಿತಿಗಳು ಸಮಯಕ್ಕೆ ಹೆಚ್ಚಿನ ಆದ್ಯತೆ ನೀಡುವುದರ ಜೊತೆಗೆ ಸುರಕ್ಷತೆಗೆ ಎಲ್ಲ ರೀತಿಯ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಸೂಚಿಸಿದರು.
ಈ ಸಂದರ್ಭ ಸಭೆಯಲ್ಲಿ ಗ್ಯಾರಂಟಿ ಅನುಷ್ಠಾನ ಸಮಿತಿಯ ತಾಲೂಕು ಅಧ್ಯಕ್ಷರಾದ ವಿ ಪಿ ಶಶಿಧರ್, ಕುಶಾಲನಗರ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಪ್ರಮೋದ್ ಮುತ್ತಪ್ಪ, ಬಿಜೆಪಿ ಪ್ರಮುಖರಾದ ಬಿ ಬಿ ಭಾರತೀಶ್, ವಿವಿಧ ಸಂಘ ಸಂಸ್ಥೆಗಳ ಪ್ರಮುಖರಾದ ರಾಜೀವ್, ಹ್ಯಾರಿ ಚಿಟ್ಟಿಯಪ್ಪ, ಡಿ ವಿ ರಾಜೇಶ್, ದೇವಾಲಯ ಸಮಿತಿಗಳ ಒಕ್ಕೂಟದ ಅಧ್ಯಕ್ಷರಾದ ಎಂ ಕೆ ದಿನೇಶ್, ಪ್ರಧಾನ ಕಾರ್ಯದರ್ಶಿ ಎಂ ಎನ್ ಚಂದ್ರಮೋಹನ್, ಮಂಟಪಗಳ ಸಮಿತಿಯ ಉಪಾಧ್ಯಕ್ಷರಾದ ಹೆಚ್ ಟಿ ವಸಂತ್, ಬಾಲಕೃಷ್ಣ, ಕಾರ್ಯದರ್ಶಿ ರಾಮನಾಥನ್, ಸುನಿಲ್ ಗಿರೀಶ್, ಕೆ ಎಸ್ ನಾಗೇಶ್, ಚಂದ್ರಶೇಖರ್ ಹೇರೂರು, ಮಂಟಪ ಸಮಿತಿಯ ಅಧ್ಯಕ್ಷರು ಪದಾಧಿಕಾರಿಗಳು ಇದ್ದರು.
Back to top button
error: Content is protected !!