ಕುಶಾಲನಗರ:
ಸೋಮವಾರಪೇಟೆ ಮತ್ತು ಕುಶಾಲನಗರ
ತಾಲೂಕು ಆಡಳಿತ, ತಾಲೂಕು ಪಂಚಾಯತ್, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಕುಶಾಲನಗರ ಮತ್ತು ಸೋಮವಾರಪೇಟೆ ಪುರಸಭೆ, ಪಟ್ಟಣ ಪಂಚಾಯತ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಶ್ರಯದಲ್ಲಿ ದಾಸ ಶ್ರೇಷ್ಠ ಶ್ರೀ ಕನಕದಾಸರ ಜಯಂತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಕುಶಾಲನಗರ ಕಲಾಮಂದಿರದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮವನ್ನು ಶಾಸಕ ಡಾ.ಮಂತರ್ ಗೌಡ ಉದ್ಘಾಟಿಸಿದರು. ನಂತರ ಮಾತನಾಡಿದ ಅವರು, ಇಂತಹ ಕಾರ್ಯಕ್ರಮಗಳು ಯಾರಿಗೂ ಕೂಡ ಯಾವುದೇ ಕಾರಣಕ್ಕೂ ಪ್ರತಿಷ್ಠೆಯ ವೇದಿಕೆಯಾಗಬಾರದು.
ಜಾತಿ, ಧರ್ಮ ವ್ಯವಸ್ಥೆ ಇಂದಿಗೂ ಬದಲಾಗದಿರುವುದು ವಿಷಾದಕರ ಸಂಗತಿ. ಇಂದಿನ ಕಾಲಘಟ್ಟದಲ್ಲಿ ಎಲ್ಲರೂ ಸುಶಿಕ್ಷಿರಾದರೂ ಕೂಡ ಪರಿಸ್ಥಿತಿ ಸುಧಾರಣೆ ಕಂಡಿಲ್ಲ. ಅಂದಿನ ಕಾಲದಲ್ಲಿ ಸಾಮಾಜಿಕ ವ್ಯವಸ್ಥೆ ಸುಧಾರಣೆ, ಸಮಾನತೆಗೆ ಪಣತೊಟ್ಟ ಕನಕದಾಸರಂತಹ ಮಹನೀಯರ ಚಿಂತನೆಗಳನ್ನು ಯಾರೂ ಕೂಡ ಮರೆಯಬಾರದು. ಸಮಾನತೆಗೆ ಯುವ ಜನಾಂಗ ಪಣ ತೊಡಬೇಕಿದೆ ಎಂದರು. ತಾಲೂಕಿನಲ್ಲಿ ಜಿಲ್ಲಾಮಟ್ಟದ ಕನಕಭವನ ನಿರ್ಮಾಣಕ್ಕೆ ಕ್ರಮವಹಿಸಲಾಗುವುದು ಎಂದರು. 1.40 ಕೋಟಿ ರೂ ವೆಚ್ಚದಲ್ಲಿ ಕಲಾಭವನದಲ್ಲಿ ಬಾಕಿ ಉಳಿದ ಅಭಿವೃದ್ಧಿ ಕಾರ್ಯ ಪೂರ್ಣಗೊಳಿಸಲಾಗುವುದು ಎಂದು ತಿಳಿಸಿದರು.
ಕುಶಾಲನಗರ ತಾಲೂಕು ಗ್ಯಾರೆಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ವಿ.ಪಿ.ಶಶಿಧರ್ ಮಾತನಾಡಿ, ಸಮುದಾಯದವರು ಬಾಂಧವರು ಇಂತಹ ಕಾರ್ಯಕ್ರಮಗಳಲ್ಲಿ ಹೆಚ್ಚು ಪಾಲ್ಗೊಳ್ಳುವ ಮೂಲಕ ನಮನ ಸಲ್ಲಿಸುವಂತಾಗಬೇಕು. ಕನಕದಾಸರ ಆದರ್ಶಗಳನ್ನು ಎಲ್ಲರೂ ಅಳವಡಿಸಿಕೊಳ್ಳಬೇಕಿದೆ ಎಂದರು.
ಮುಖ್ಯ ಭಾಷಣ ಮಾಡಿದ ಕೊಡಗು ಜಿಲ್ಲಾ ಲೇಖಕರ ಮತ್ತು ಕಲಾವಿದರ ಬಳಗದ ಅಧ್ಯಕ್ಷರೂ ಆದ ರಾಜ್ಯ ಶಿಕ್ಷಕ ಪ್ರಶಸ್ತಿ ಪುರಸ್ಕೃತ
ಟಿ.ಜಿ.ಪ್ರೇಮಕುಮಾರ್ ಮಾತನಾಡಿ,
ಕನ್ನಡದ ಮಹಾನ್ ದಾಸಶ್ರೇಷ್ಠರು, ಭಕ್ತಿ ಪಂಥದ ಕವಿಗಳು ಮತ್ತು ಸಮಾಜ ಸುಧಾರಕರಾದ ಕನಕದಾಸರು ಭಕ್ತಿ, ಸಮಾನತೆ ಮತ್ತು ಮಾನವೀಯ ಮೌಲ್ಯಗಳನ್ನು ತಮ್ಮ ಕೀರ್ತನೆಗಳ ಮೂಲಕ ಜನಸಾಮಾನ್ಯರಿಗೆ ತಲುಪಿಸಿದರು ಎಂದು ಬಣ್ಣಿಸಿದರು.
ಸಂಗೊಳ್ಳಿ ರಾಯಣ್ಣ ಕುರುಬರ ಹಿತರಕ್ಷಣಾ ವೇದಿಕೆಯ ಅಧ್ಯಕ್ಷ ಡಿ.ಆರ್.ಪ್ರಭಾಕರ್ ಮಾತನಾಡಿ, ಎಲ್ಲರೂ ಸಮಾಜದ ಏಳ್ಗೆಗೆ ಶ್ರಮಿಸಬೇಕು ಎಂದರು.
ಕನಕಗುರು ಪೀಠದ ಧರ್ಮದರ್ಶಿ ಎಂ.ನಂಜುಂಡಸ್ವಾಮಿ, ಕರ್ನಾಟಕ ರೈತ ಸಂಘ ಮತ್ತು ಅಖಿಲ ಭಾರತ ಯುನೈಟೆಡ್ ಕಿಶಾನ್ ಸಂಘದ ರಾಜ್ಯಾಧ್ಯಕ್ಷರೂ ಆದ ಸಾಮಾಜಿಕ ಹೋರಾಟಗಾರರಾದ
ಡಿ.ಎಸ್.ನಿರ್ವಾಣಪ್ಪ ಮಾತನಾಡಿದರು.
ಇದೇ ಸಂದರ್ಭ ಸಮುದಾಯದ ಶ್ರಮಿಕರು ಮತ್ತು ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಗೌರವಿಸಲಾಯಿತು.
ಈ ಸಂದರ್ಭ ತಾಪಂ ಇಒ ಕೆ.ಸಿ. ಅಪ್ಪಣ್ಣ,
ತಹಸೀಲ್ದಾರ್ ಟಿ.ರಮೇಶ್ ಬಾಬು, ಸೋಮವಾರಪೇಟೆ ಯೋಜನಾ ಪ್ರಾಧಿಕಾರ ಅಧ್ಯಕ್ಷ ಆದಂ ಕೆ.ಎ, ಕ್ಷೇತ್ರ ಶಿಕ್ಷಣಾಧಿಕಾರಿ ಕೃಷ್ಣಪ್ರಸಾದ್, ಕುಶಾಲನಗರ ಪುರಸಭೆ ಮುಖ್ಯಾಧಿಕಾರಿ ಕೃಷ್ಣಪ್ರಸಾದ್, ಡಿಎಸ್ಎಸ್ ಮುಖಂಡ ಕೆ.ಬಿ.ರಾಜು, ಸೋಮವಾರಪೇಟೆ ಪಪಂ ಮುಖ್ಯಾಧಿಕಾರಿ ಮಹೇಶ್ ಕುಮಾರ್, ವಿವಿಧ ಸಂಘಟನೆಗಳ ಪ್ರಮುಖರಾದ ನಾಗೇಶ್, ಜಯೇಂದ್ರ, ದಾಮೋದರ್, ಸಂಗಮೇಶ್, ತಾಲ್ಲೂಕು ಬಿಸಿಎಂ ಅಧಿಕಾರಿ ಎಚ್.ಎ.ಮೋಹನ್ ಕುಮಾರ್, ಬಿಸಿಎಂ ಹಾಸ್ಟೆಲ್ ಮೇಲ್ವಿಚಾರಕ ವೈ.ಡಿ.ಆನಂದ್ ಇತರರು ಇದ್ದರು.
Back to top button
error: Content is protected !!