ಸುದ್ದಿಗೋಷ್ಠಿ

ಕುಶಾಲನಗರದ ಕೈಗಾರಿಕೋದ್ಯಮಿಗಳ ಸಹಕಾರ ಸಂಘಕ್ಕೆ ರೂ.2.88 ಕೋಟಿ ನಿವ್ವಳ ಲಾಭ: ಸೆ.12 ರಂದು ಮಹಾಸಭೆ

ಕುಶಾಲನಗರ, ಸೆ 09 : ಕುಶಾಲನಗರದ ನಂ.19722 ಕೈಗಾರಿಕೋದ್ಯಮಿಗಳು ಮತ್ತು ವೃತ್ತಿ ನಿರತರ ವಿವಿಧೋದ್ದೇಶ ಸಹಕಾರ ಸಂಘವು 2025-26ನೇ ಸಾಲಿನಲ್ಲಿ ರೂ.2,88 ಕೋಯ ನಿವ್ವಳ ಲಾಭ ಗಳಿಸಿದೆ ಎಂದು ಸಂಘದ ಅಧ್ಯಕ್ಷ ಟಿ.ಆರ್. ಶರವಣ ಕುಮಾರ್ ಹೇಳಿದರು.

ಸಂಘದ ಕಚೇರಿಯಲ್ಲಿ ಬುಧವಾರ ನಡೆದ ಪತ್ರಿಕಾಗೋಷ್ಠಿ ಮಾಹಿತಿ ನೀಡಿದ ಅವರು, 2004ರಲ್ಲಿ ಪ್ರಾರಂಭವಾದ ಸಂಘವು 21 ವರ್ಷಗಳಿಂದ ನಿರಂತರ ಲಾಭದ ಹಾದಿಯಲ್ಲಿದೆ. ಕಳೆದ ಸಾಲಿನಲ್ಲಿ 1404 ಸದಸ್ಯರಿಂದ ರೂ.3.48 ಕೋಟಿ ಷೇರು ಬಂಡವಾಳ ಸಂಗ್ರಹಿಸಲಾಗಿತ್ತು. ಪ್ರಸಕ್ತ ಸಾಲಿನಲ್ಲಿ ಸದಸ್ಯರ ಸಂಖ್ಯೆ 1449ಕ್ಕೆ ಏರಿದ್ದು, ರೂ.3.90 ಕೋಟಿ ಷೇರು ಬಂಡವಾಳ ಸಂಗ್ರಹವಾಗಿದೆ ಎಂದರು.
ಮಾರ್ಚ್ 31,2026ರ ಅಂತ್ಯಕ್ಕೆ ಒಟ್ಟು ರೂ.88.21 ಕೋಟಿ ಠೇವಣಿ ಸಂಗ್ರಹಿಸಲಾಗಿದ್ದು, ಕಳೆದ ಸಾಲಿಗಿಂತ ರೂ.16 ಕೋಟಿ ಹೆಚ್ಚು ಠೇವಣಿ ಸಂಗ್ರಹಿಸಿ ಪ್ರಗತಿ ಸಾಧಿಸಲಾಗಿದೆ. ಸಂಘದ ದುಡಿಯುವ ಬಂಡವಾಳ ರೂ.93.10 ಕೋಟಿಯಿಂದ ರೂ.105.73 ಕೋಟಿಗೆ ಏರಿಕೆಯಾಗಿದೆ. ವಾರ್ಷಿಕ ವಹಿವಾಟು ರೂ.439 ಕೋಟಿ ದಾಟಿದ್ದು, ಸಾಲದ ಹೊರಬಾಕಿ ರೂ.82.22 ಕೋಟಿ ಇದೆ ಎಂದು ಹೇಳಿದರು.
ಒಂದು ವರ್ಷದ ನಿರಖು ಠೇವಣಿಗೆ ಶೇ.9ರಷ್ಟು ಅಧಿಕ ಬಡ್ಡಿ, ಮೂರು ವರ್ಷದ ಲಾಕಿಂಗ್ ಅವಧಿಗೆ ಶೇ.9.50ರಷ್ಟು ಅಧಿಕ ಬಡ್ಡಿ ನೀಡಲಾಗುತ್ತಿದೆ. ಹಿರಿಯ ನಾಗರಿಕರು, ಮಾಜಿ ಸೈನಿಕರು, ಅಂಗವಿಕಲರು ಹಾಗೂ ಸಹಕಾರ ಸಂಘಗಳಿಗೆ ಶೇ.0.50 ಹೆಚ್ಚುವರಿ ಬಡ್ಡಿ ನೀಡಲಾಗುತ್ತಿದೆ. ಸಂಘದಲ್ಲಿ ಒಟ್ಟು ರೂ.10.17 ಕೋಟಿ ನಿಧಿ ಇದ್ದು, ಚಿಟ್ ಫಂಡ್ ವ್ಯವಹಾರದಿಂದಲೇ ರೂ.65.38 ಲಕ್ಷ ಲಾಭ ಗಳಿಸಲಾಗಿದೆ. ಮುಂದಿನ ದಿನಗಳಲ್ಲಿ ರೂ.50 ಲಕ್ಷ ಮುಖಬೆಲೆಯ ಚಿಟ್ ಫಂಡ್ ಪ್ರಾರಂಭಿಸಲು ತೀರ್ಮಾನಿಸಲಾಗಿದೆ ಎಂದರು.
ಸಂಘದ ಸುಸ್ತಿ ಸಾಲದ ಪ್ರಮಾಣ ಕೇವಲ ಶೇ.4.21ರಷ್ಟಿದ್ದು, ವಸೂಲಾತಿ ಪ್ರಗತಿ ಶೇ.95.79ರಷ್ಟಿದೆ. ಲೆಕ್ಕಪರಿಶೋಧನಾ ವರದಿಯಲ್ಲಿ ಸಂಘವು ‘ಎ’ ಶ್ರೇಣಿಯನ್ನು ಪಡೆದುಕೊಂಡಿದೆ. ಒಬ್ಬ ಸದಸ್ಯನಿಗೆ ಗರಿಷ್ಠ ರೂ.2.60 ಕೋಟಿ ವರೆಗೆ ಸಾಲ ನೀಡಲಾಗುತ್ತಿದ್ದು, ಮುಂದಿನ ಮೂರು ವರ್ಷಗಳಲ್ಲಿ ಸಾಲದ ಮೊತ್ತವನ್ನು ರೂ.100 ಕೋಟಿಗೆ ಏರಿಸುವ ಗುರಿ ಹೊಂದಲಾಗಿದೆ. ಹೊಸ ಲಾರಿ, ಟಿಪ್ಪರ್ ಸೇರಿದಂತೆ ಎಲ್ಲಾ ರೀತಿಯ ಸರಕು ಸಾಗಾಣೆ ವಾಹನಗಳಿಗೆ ಗರಿಷ್ಠ ರೂ.50 ಲಕ್ಷದವರೆಗೆ ಶೇ.90ರಷ್ಟು ಸಾಲ ನೀಡಲಾಗುತ್ತಿದೆ.
ಮಹಿಳಾ ಚೇತನಾ ಜಂಟಿ ಭಾದ್ಯತಾ ಗುಂಪುಗಳಿಗೆ ರೂ.13.53 ಕೋಟಿ ಸಾಲ ವಿತರಿಸಲಾಗಿದೆ. ಸಾಲಗಾರರು ಮರಣ ಹೊಂದಿದಲ್ಲಿ ಅವರ ಕುಟುಂಬಕ್ಕೆ ಸಾಲ ಮನ್ನಾ ಮಾಡಲು ಸಾಲಗಾರರ ಮರಣೋತ್ತರ ಪರಿಹಾರ ನಿಧಿಯನ್ನು ಒಟ್ಟು ರೂ.1.27 ಕೋಟಿ ಸ್ಥಾಪಿಸಲಾಗಿದೆ. ಮರಣ ನಿಧಿ ವಂತಿಕೆಯನ್ನು ರೂ.1000ದಿಂದ ರೂ.2500ಕ್ಕೆ ಮತ್ತು ಪರಿಹಾರ ಮೊತ್ತವನ್ನು ರೂ.12 ಸಾವಿರದಿಂದ ರೂ.25 ಸಾವಿರಕ್ಕೆ ಏರಿಸಲು ನಿರ್ಧರಿಸಲಾಗಿದೆ.
ಸಂಘವು ಕೇವಲ ಲಾಭದ ಉದ್ದೇಶವನ್ನಷ್ಟೇ ಹೊಂದಿಲ್ಲ. ಸಾಮಾಜಿಕ ಕಳಕಳಿಯೊಂದಿಗೆ ಇದುವರೆಗೆ 700ಕ್ಕೂ ಹೆಚ್ಚು ಗಿಡಗಳನ್ನು ನೆಟ್ಟು ಪೋಷಣೆ ಮಾಡಲಾಗಿದೆ. ಈ ಸಾಲಿನಲ್ಲಿ 450 ಗಿಡಗಳನ್ನು ನೆಡಲು ಸ್ಥಳ ಪರಿಶೀಲನೆ ನಡೆಸಲಾಗಿದೆ. ಕುಶಾಲನಗರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಬಡ ಮಕ್ಕಳ ಅನುಕೂಲಕ್ಕಾಗಿ ರೂ.12 ಲಕ್ಷ ವೆಚ್ಚದಲ್ಲಿ 42 ಕಂಪ್ಯೂಟರ್‌ಗಳನ್ನು ಹೊಂದಿರುವ ಸುಸಜ್ಜಿತ ಗಣಕಯಂತ್ರ ಪ್ರಯೋಗಾಲಯವನ್ನು ನಿರ್ಮಿಸಿಕೊಡಲಾಗಿದೆ. ಬಡ ವಿದ್ಯಾರ್ಥಿಗಳಿಗೆ ಉಚಿತ ಕಂಪ್ಯೂಟರ್ ಶಿಕ್ಷಣಕ್ಕೆ ಅವಕಾಶ ಮಾಡಿಕೊಡಲಾಗಿದೆ. ಜೊತೆಗೆ ಸರ್ಕಾರಿ ಆಸ್ಪತ್ರೆಗೆ ಉಸಿರಾಟದ ತೊಂದರೆ ಹಾಗೂ ಡಯಾಲಿಸಿಸ್ ಸೌಲಭ್ಯ, ರಕ್ತದಾನ ಶಿಬಿರ, ಅಯ್ಯಪ್ಪ ಸ್ವಾಮಿ ದೇವಸ್ಥಾನದ ಕಟ್ಟಡ ನಿರ್ಮಾಣಕ್ಕೆ ದೇಣಿಗೆ ನೀಡಲು ರೂ.8 ಲಕ್ಷ ಬಜೆಟ್ ಮೀಸಲಿಡಲು ತೀರ್ಮಾನಿಸಲಾಗಿದೆ ಎಂದು ಹೇಳಿದರು.
ಸಂಘದ 2025-26ನೇ ಸಾಲಿನ ವಾರ್ಷಿಕ ಮಹಾಸಭೆಯು ಸೆ. 12 ರಂದು ಶನಿವಾರ ಬೆಳಿಗ್ಗೆ 11 ಗಂಟೆಗೆ ಇಲ್ಲಿನ ಎ.ಪಿ.ಸಿ.ಎಂ.ಎಸ್ ಸಭಾಂಗಣದಲ್ಲಿ ನಡೆಯಲಿದೆ ಎಂದು ತಿಳಿಸಿದರು.ಈ ಸಂದರ್ಭ ನಿರ್ದೇಶಕರಾದ ಎನ್.ಇ.ಶಿವಪ್ರಕಾಶ್, ಎಂ.ವಿ.ನಾರಾಯಣ, ಕೆ.ಎನ್.ಸುರೇಶ್ ಕುಮಾರ್, ಅಮೃತ್, ಕವಿತಾ, ಕೃತಿಕಾ‌ಪೊನ್ನಪ್ಪ, ಕೀರ್ತಿ ಲಕ್ಷ್ಮಿ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶ್ರಿಜೇಶ್, ವ್ಯವಸ್ಥಾಪಕ ಆರ್.ರಾಜು ಭಾಗವಹಿಸಿದ್ದರು.

ಕುಶಾಲನಗರ ಕೈಗಾರಿಕೋದ್ಯಮಿಗಳು ಹಾಗೂ ವೃತ್ತಿನಿರತ ವಿವಿಧೋದ್ದೇಶ ಸಹಕಾರ ಸಂಘದ ಅಧ್ಯಕ್ಷ ಟಿ.ಆರ್. ಶರವಣ ಕುಮಾರ್ ಬುಧವಾರ ಮಾತನಾಡಿದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!