ಕೂಡಿಗೆ, ಆ 23: ಈದ್ ಮೀಲಾದ್ ಹಬ್ಬದ ಅಂಗವಾಗಿ ಕೂಡಿಗೆ ಘಟಕದ ಎಸ್‌ಕೆಎಸ್‌ಎಸ್‌ಎಫ್ ವಿಖಾಯ ಆಕ್ಟಿವ್ ವಿಂಗ್ ವತಿಯಿಂದ ಭಾನುವಾರ ವಿಶೇಷ ಸ್ವಚ್ಛತಾ ಅಭಿಯಾನವನ್ನು ಹಮ್ಮಿಕೊಳ್ಳಲಾಯಿತು.
ಕೂಡಿಗೆಯ ಸೋಮವಾರಪೇಟೆ ರಸ್ತೆಯ ಮಸೀದಿ ಮುಂಭಾಗದಿಂದ ಕೂಡಿಗೆ ಸರ್ಕಲ್‌ವರೆಗೆ ರಸ್ತೆ ಬದಿ ಹಾಗೂ ಸಾರ್ವಜನಿಕ ಪ್ರದೇಶಗಳಲ್ಲಿ ಸ್ವಚ್ಛತಾ ಕಾರ್ಯ ನಡೆಸಲಾಯಿತು.
ಬೆಳಗ್ಗೆಯಿಂದಲೇ ಸಂಘಟನೆಯ ಪದಾಧಿಕಾರಿಗಳು ಹಾಗೂ ಸದಸ್ಯರು ಶ್ರಮದಾನದ ಮೂಲಕ ರಸ್ತೆ ಬದಿಯ ಕಾಡು ಗಿಡಗಂಟಿಗಳನ್ನು ತೆರವುಗೊಳಿಸಿ ಪರಿಸರವನ್ನು ಸ್ವಚ್ಛಗೊಳಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಎಸ್‌ಕೆಎಸ್‌ಎಸ್‌ಎಫ್ ಕೂಡಿಗೆ ಘಟಕದ ಅಧ್ಯಕ್ಷರಾದ ಮೊಹಮ್ಮದ್, ಕಳೆದ ಹಲವು ವರ್ಷಗಳಿಂದ ಕೂಡಿಗೆ ಘಟಕದ ಎಸ್‌ಕೆಎಸ್‌ಎಸ್‌ಎಫ್ ಸಂಘಟನೆಯು ಕೂಡಿಗೆ ಮಾತ್ರವಲ್ಲದೆ ವಿವಿಧ ಕಡೆಗಳಲ್ಲಿ ಸ್ವಚ್ಛತಾ ಕಾರ್ಯ ಸೇರಿದಂತೆ ಅನೇಕ ಸಾಮಾಜಿಕ ಸೇವಾ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರುತ್ತಿದೆ
ಈದ್ ಮೀಲಾದ್ ಆಚರಣೆಯ ಸಂದರ್ಭದಲ್ಲಿ ಸ್ವಚ್ಛತೆಯನ್ನು ಕಾಪಾಡುವುದು ಅತ್ಯಂತ ಮಹತ್ವದ್ದಾಗಿದೆ. ಪ್ರವಾದಿ ಮುಹಮ್ಮದ್ ಪೈಗಂಬರ್ ﷺ ಅವರ ಜನ್ಮದಿನವನ್ನು ಆಚರಿಸುವ ಈ ಸಂದರ್ಭದಲ್ಲಿ ಸ್ವಚ್ಛತೆಯ ಬಗ್ಗೆ ವಿಶೇಷ ಕಾಳಜಿ ವಹಿಸುವುದು ನಮ್ಮ ಕರ್ತವ್ಯವಾಗಿದೆ. ಸ್ವಚ್ಛತೆಯು ನಮ್ಮ ನಂಬಿಕೆ ಮತ್ತು ಉತ್ತಮ ಜೀವನದ ಪ್ರಮುಖ ಭಾಗವಾಗಿದೆ
ಸ್ವಚ್ಛತೆಯು ಆರೋಗ್ಯವನ್ನು ಕಾಪಾಡುವುದರ ಜೊತೆಗೆ ಅನೇಕ ರೋಗಗಳನ್ನು ತಡೆಯಲು ಸಹಕಾರಿಯಾಗುತ್ತದೆ. ಸ್ವಚ್ಛ ಹಾಗೂ ಸುಂದರ ಪರಿಸರವು ಸಮಾಜದಲ್ಲಿ ಶಾಂತಿ, ಸೌಹಾರ್ದತೆ ಮತ್ತು ಉತ್ತಮ ಜೀವನಶೈಲಿಯನ್ನು ಬೆಳೆಸುತ್ತದೆ. ಬೀದಿಗಳು ಹಾಗೂ ಸಾರ್ವಜನಿಕ ಸ್ಥಳಗಳನ್ನು ಸ್ವಚ್ಛವಾಗಿಡುವುದು, ತ್ಯಾಜ್ಯವನ್ನು ಸರಿಯಾದ ರೀತಿಯಲ್ಲಿ ವಿಲೇವಾರಿ ಮಾಡುವುದು ಹಾಗೂ ಮಸೀದಿಗಳು ಸೇರಿದಂತೆ ಧಾರ್ಮಿಕ ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಸ್ವಚ್ಛತೆಯನ್ನು ಕಾಪಾಡುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ
ಈದ್ ಮೀಲಾದ್ ಪ್ರಯುಕ್ತ ಸಾರ್ವಜನಿಕರಲ್ಲಿ ಸ್ವಚ್ಛತೆಯ ಕುರಿತು ಜಾಗೃತಿ ಮೂಡಿಸುವ ಉದ್ದೇಶದಿಂದ ಈ ವಿಶೇಷ ಸ್ವಚ್ಛತಾ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆ. ಸಂಘಟನೆಯ ಸರ್ವ ಸದಸ್ಯರು ಸ್ವಯಂಪ್ರೇರಿತರಾಗಿ ಶ್ರಮದಾನದ ಮೂಲಕ ರಸ್ತೆ ಬದಿಯ ಗಿಡಗಂಟಿಗಳನ್ನು ತೆರವುಗೊಳಿಸಿ ಸ್ವಚ್ಛತಾ ಕಾರ್ಯದಲ್ಲಿ ಪಾಲ್ಗೊಂಡಿದ್ದಾರೆ ಎಂದು ಮೊಹಮ್ಮದ್ ರವರು ಹೇಳಿದರು.
ಈ ಸಂದರ್ಭದಲ್ಲಿ ಕೂಡಿಗೆ ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಕೆ.ಎಸ್. ಶಿವಕುಮಾರ್, ಎಸ್.ಎನ್. ಅನಂತ್, ಎಸ್‌ಕೆಎಸ್‌ಎಸ್‌ಎಫ್ ವಿಖಾಯ ಕೂಡಿಗೆ ಘಟಕದ ಕಲಂದರ್, ರಫೀಕ್, ಆಸಿಫ್, ಮುಸ್ತಫಾ, ಮೊಹಮ್ಮದ್ ರಾಹಿಫ್, ಹನೀಫ್, ಅಬ್ದುಲ್ ರಝಾಕ್, ಮದೀನಾ ಟಿಂಬರ್ ಶಂಸುದ್ದೀನ್, ಶಾಫಿ ಸೇರಿದಂತೆ ಎಸ್‌ಕೆಎಸ್‌ಎಸ್‌ಎಫ್ ಸಂಘಟನೆಯ ಪದಾಧಿಕಾರಿಗಳು ಹಾಗೂ ಹಲವಾರು ಸದಸ್ಯರು ಉಪಸ್ಥಿತರಿದ್ದು ಸ್ವಚ್ಛತಾ ಕಾರ್ಯದಲ್ಲಿ ಭಾಗವಹಿಸಿದ್ದರು..
Back to top button
error: Content is protected !!