ಕ್ರೈಂ

ದೇವಾಲಯ ಆವರಣದಲ್ಲಿ ಗೋರಿ‌ ನಿರ್ಮಾಣ ಪ್ರಕರಣ: 8 ಮಂದಿ‌ ಬಂಧನ

ಸಿದ್ದಾಪುರ, ಆ 01, : ಮಾಲ್ದಾರೆ ಸಮೀಪದ ಮೀಸಲು ಅರಣ್ಯ ಪ್ರದೇಶದೊಳಗೆ ಇರುವ ಶ್ರೀ ಸಿದ್ದೇಶ್ವರ ದೇವಾಲಯದ ಆವರಣದಲ್ಲಿ ಅನ್ಯ ಕೋಮಿನವರು ಗೋರಿ ನಿರ್ಮಾಣ ಮಾಡಿದ್ದಾರೆ ಎಂದು ಆರೋಪಿಸಿ ಸಿದ್ದಾಪುರ ಪೊಲೀಸ್ ಠಾಣೆಗೆ ನೀಡಿದ ದೂರಿನ ಮೇರೆಗೆ ಸಿದ್ದಾಪುರದ ಪೊಲೀಸರು ಎಂಟು ಮಂದಿಯನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿದ್ದಾರೆ.
ಶ್ರೀ ಸಿದ್ದೇಶ್ವರ ದೇವಾಲಯದ ಆವರಣದಲ್ಲಿ ತಾ. 26 ರಂದು ಯಾರೋ ಅನ್ಯಕೋಮಿನವರು ಗೋರಿ ನಿರ್ಮಾಣ ಮಾಡಿದ್ದಾರೆ ಎಂದು ಆರೋಪಿಸಿ ಹಿಂದೂಪರ ಸಂಘಟನೆಗಳು ದೇವಾಲಯದ ಆವರಣದಲ್ಲಿ ಪ್ರತಿಭಟನೆ ನಡೆಸಿ ಆರೋಪಿಗಳನ್ನು ಬಂಧಿಸುವಂತೆ ಒತ್ತಾಯಿಸಿದ್ದವು. ಅಲ್ಲದೆ ಸಿದ್ದಾಪುರ ಪೊಲೀಸ್ ಠಾಣೆಗೆ ದೂರು ನೀಡಲಾಗಿತ್ತು.

ದೂರಿನ ಮೇರೆಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿಂದುಮಣಿ ಮತ್ತು ಮಡಿಕೇರಿ ಭಾಗದ ಡಿ.ವೈ.ಎಸ್ಪಿ ಸೂರಜ್ ಮಾರ್ಗದರ್ಶನದಲ್ಲಿ ಸಿ.ಐ. ಚಂದ್ರಶೇಖರ್ ಮತ್ತು ಸಿದ್ದಾಪುರ ಠಾಣಾಧಿಕಾರಿ ಮಂಜುನಾಥ್ ನೇತೃತ್ವದಲ್ಲಿ ತನಿಖೆ ಕೈಗೊಂಡ ಪೊಲೀಸರು ಪಿರಿಯಾಪಟ್ಟಣ ತಾಲೂಕಿನ ಆಯಾರಬೀಡು ಗ್ರಾಮದ ನಿವಾಸಿಗಳಾದ ಮುಜಾಮಿಲ್(32) ಅಶ್ವಿಕ್ ಪಾಷ(28) ರಶೀದ್ ಖಾನ್ ( 30) ಸೈಯದ್ ಸಾಧಿಕ್ (34) ಆಲಂ ಶರೀಫ್ (19) ತಂಜೀವ್ ಪಾಷ(30) ಮನ್ಸೂರ್ ಪಾಷ (33) ನಿಸಾರ್ ಅಹ್ಮದ್ (33) ಎಂಬವರುಗಳನ್ನು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ. ಅಲ್ಲದೆ ಅರಣ್ಯ ಪ್ರದೇಶದಲ್ಲಿ ಇರುವ ದೇವಾಲಯಕ್ಕೆ ಆಗಮಿಸಲು ಬಂದಂತಹ ಎರಡು ವಾಹನಗಳನ್ನು ಕೂಡ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಶ್ರೀ ಸಿದ್ದೇಶ್ವರ ದೇವಾಲಯದಲ್ಲಿ ನಡೆದ ಘಟನೆ ಸಂಬಂಧ ಹಿಂದೂ ಸಂಘಟನೆ ವತಿಯಿಂದ ಪ್ರತಿಭಟನೆ ನಡೆಸಿ ದೇವಾಲಯಕ್ಕೆ ತೆರಳುವ ರಸ್ತೆಯಲ್ಲಿ ಸಿ.ಸಿ. ಕ್ಯಾಮರಾ ಅಳವಡಿಸುವಂತೆ ಒತ್ತಾಯಿಸಿದ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ವತಿಯಿಂದ ದೇವಾಲಯಕ್ಕೆ ತೆರಳುವ ರಸ್ತೆಯ ಬದಿಯಲ್ಲಿ ಸಿ.ಸಿ. ಕ್ಯಾಮರಾ ಅಳವಡಿಸಲಾಗಿದೆ. ಅಲ್ಲದೆ ಅರಣ್ಯ ಇಲಾಖೆಯ ಎರಡು ಸಿಬ್ಬಂದಿಯನ್ನು ಹಗಲಿನ ವೇಳೆ ಗಸ್ತು ತಿರುಗಲು ಮತ್ತು ಕಾವಲು ಕಾಯಲು ನಿಯೋಜನೆ ಮಾಡಲಾಗಿದೆ. ರಾತ್ರಿ ಸಮಯದಲ್ಲಿ ಕೂಡ ಮೀಸಲು ಅರಣ್ಯ ಪ್ರದೇಶದ ಒಳಗೆ ಬೇರೆಯವರು ಪ್ರವೇಶ ಮಾಡದಂತೆ ಗಮನಹರಿಸಲು ಅರಣ್ಯ ಇಲಾಖೆಗೆ ಸೇರಿದ ವಾಹನದಲ್ಲಿ ಗಸ್ತು ತಿರುಗಲು ಎರಡು ಸಿಬ್ಬಂದಿಯನ್ನು ನೇಮಿಸಲಾಗಿದೆ ಎಂದು ತಿಳಿದು ಬಂದಿದೆ. ಈಗಾಗಲೇ ಮೀಸಲು ಅರಣ್ಯ ಪ್ರದೇಶದ ಒಳಗೆ ಇರುವ ದೇವಾಲಯಕ್ಕೆ ಅಕ್ರಮ ಪ್ರವೇಶ ಮಾಡಿದ ಹಿನ್ನೆಲೆಯಲ್ಲಿ ಕೆಲವರ ವಿರುದ್ಧ ಕುಶಾಲನಗರ ವಲಯ ಅರಣ್ಯ ಅಧಿಕಾರಿಗಳು ಕೂಡ ಮೊಕದ್ದಮೆ ದಾಖಲಿಸಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button
error: Content is protected !!