ಸುದ್ದಿಗೋಷ್ಠಿ

ಮೃತ್ಯುಂಜಯ ದೇವರ ವಾರ್ಷಿಕ ಉತ್ಸವದಲ್ಲಿ ಗಲಭೆ ಪೂರ್ವನಿಯೋಜಿತ: ಗೌಡ ಜನಾಂಗದ ಅವಹೇಳನದ ವಿರುದ್ದ ದೂರು

ಉತ್ಸವದ ಕೊನೆಯ ದಿನ ವಿನಾಕಾರಣ ಗಲಭೆಗೆ ಪ್ರಯತ್ನ ಆರೋಪ

 

ಕುಶಾಲನಗರ, ಡಿ 28 : ಕೊಡಗು ಜಿಲ್ಲೆಯ ಕಟ್ಟೆಮಾಡು ಗ್ರಾಮದಲ್ಲಿ ಮೃತ್ಯುಂಜಯ ದೇವರ ವಾರ್ಷಿಕ ಉತ್ಸವ ಸಂದರ್ಭ ಕೆಲವು ಕಿಡಿಗೇಡಿಗಳು ಉದ್ದೇಶಪೂರ್ವಕವಾಗಿ ಅಶಾಂತಿ ವಾತಾವರಣ ಸೃಷ್ಠಿಸಿದ್ದಾರೆ ಎಂದು ಕುಶಾಲನಗರ ಗೌಡ ಸಮಾಜ ಪ್ರಮುಖರು ಆರೋಪಿಸಿದ್ದಾರೆ.

ಕುಶಾಲನಗರ ಗೌಡ ಸಮಾಜದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಗೌಡ ಸಮಾಜದ ಅಧ್ಯಕ್ಷ ಚಿಲ್ಲನ ಗಣಿಪ್ರಸಾದ್, ಗೌಡ ಯುವಕ ಸಂಘದ ಅಧ್ಯಕ್ಷ ಕೊಡಗನ ಹರ್ಷ ಹಾಗೂ ಮುಖಂಡ ಆನಂದ್ ಕರಂದ್ಲಾಜೆ ಅವರು, ದೇವರ ಉತ್ಸವದಲ್ಲಿ  ಸಂಪ್ರದಾಯ ಹಾಗೂ ಕಟ್ಟುಪಾಡುಗಳನ್ನು ಪಾಲಿಸದ‌ವರಿಗೆ ತಡೆಯೊಡ್ಡಲಾಗಿದೆ. ಈ ಘಟನೆ ಬಳಿಕ ಗೌಡ ಸಮುದಾಯದವರನ್ನು ಸಾಮಾಜಿಕ ಜಾಲತಾಣಗಳಲ್ಲಿ ಅವಾಚ್ಯ ಶಬ್ಧಗಳಿಂದ ನಿಂದಿಸುತ್ತಿರುವುದು ಖಂಡನೀಯ.

ಸಾಂಪ್ರದಾಯಿಕ ಉಡುಗೆಯ ನೆಪದಲ್ಲಿ ಪೂರ್ವ ನಿಯೋಜಿತ ಗಲಭೆ ಎಬ್ಬಿಸಿದ ದುಷ್ಕರ್ಮಿಗಳ ವಿರುದ್ದ‌ ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆ ಸೂಕ್ತ ಕ್ರಮ ಜರುಗಿಸಬೇಕಿದೆ. ವಿನಾಕಾರಣ ಗೌಡ ಜನಾಂಗದ ವಿರುದ್ದ ನಾಲಿಗೆ ಹರಿಬಿಡುವ ಮೂಲಕ ಜಾತಿ ಸಂಘರ್ಷಕ್ಕೆ ಎಡೆಮಾಡುತ್ತಿರುವವರ ವಿರುದ್ದ ಸೂಕ್ತ ಕ್ರಮಜರುಗಿಸಿ
ಮುಂದೆ ಉಂಟಾಗಲಿರುವ ಅನಾಹುತ ತಪ್ಪಿಸಬೇಕಿದೆ ಎಂದು ಅಧ್ಯಕ್ಷ ಚಿಲ್ಲನ ಗಣಿಪ್ರಸಾದ್ ಕೋರಿದರು.

ಸಮಾಜ ಮುಖಂಡ ಅನಂದ್ ಕರಂದ್ಲಾಜೆ ಮಾತನಾಡಿ,
ಕೊಡಗಿನ ಎಲ್ಲಾ ದೇವಸ್ಥಾನಗಳಲ್ಲಿ ಬೇರೆ ಬೇರೆ ದೈವ ಕ್ರಮಗಳಿದ್ದು,ದೇವಸ್ಥಾನದ ಆಚಾರ ವಿಚಾರಗಳಲ್ಲಿ ಆ ಗ್ರಾಮದ ಜನರ ತೀರ್ಮಾನವೇ ಅಂತಿಮ.ಕೇವಲ ಗೌಡ ಸಮಾಜದ ಮೇಲಿನ ದ್ವೇಷದಿಂದ ದೇವಾಲಯ ಉತ್ಸವದಲ್ಲಿ ಗಲಭೆ ಎಬ್ಬಿಸಲಾಗಿದೆ ಇದು ಸರಿಯಾದ ಕ್ರಮವಲ್ಲ ಎಂದು ಅಸಮಧಾನ ವ್ಯಕ್ತಪಡಿಸಿದರು.
ಈ ಹಿಂದೆ ಹುತಾತ್ಮ ಗುಡ್ಡೆಮನೆ ಅಪ್ಪಯ್ಯ ಗೌಡರ ಬಗ್ಗೆ ಕೆಲವು ದುಷ್ಕರ್ಮಿಗಳು ಹೀನಾಯವಾಗಿ ಮಾತನಾಡಿದಾಗ
ಸಮಾಜದ ಸ್ವಾಸ್ಥ್ಯ ಕಾಪಾಡುವ ನಿಟ್ಟಿನಲ್ಲಿ ನಾವು ಮೌನವಾಗಿ ಇದ್ದೆವು. ಇದು ನಮ್ಮ ದೌರ್ಬಲ್ಯ ಎಂದು ಭಾವಿಸುವುದು ಬೇಡ. ನಮ್ಮ ಸಹನೆಯ ಕಟ್ಟೆ ಒಡೆದಿದೆ. ದಬ್ಬಾಳಿಕೆಯನ್ನು ಸಹಿಸುವ ಕಾಲ ಮುಗಿದಿದೆ ಎಂದು ನಾವು ಹೇಳ ಬಯಸುತ್ತೇವೆ.
ಕಟ್ಟೆಮಾಡು ಘಟನೆಯ ಹಿನ್ನೆಲೆ ಇಟ್ಟುಕೊಂಡು ಸಾಮಾಜಿಕ ಜಾಲತಾಣಗಳಲ್ಲಿ ಗೌಡರ ಬಗ್ಗೆ ಮತ್ತು ಕನ್ನಡದ ಬಗ್ಗೆ ಹಗುರವಾಗಿ ಹಾಗೂ ಕೆಟ್ಟದಾಗಿ ನಿಂದಿಸಿರುವ ಎಲ್ಲಾ ವ್ಯಕ್ತಿಗಳ ವಿರುದ್ಧ ದೂರ ದಾಖಲು ಮಾಡುತ್ತೇವೆ ಎಂದರು.ಈ ವ್ಯಕ್ತಿಗಳ ವಿರುದ್ಧ ಕ್ರಮ ಕೈಗೊಳ್ಳದೆ ಹೋದರೆ ನಮ್ಮ ಎಲ್ಲಾ ಸಮಾಜ, ಸಂಘಟನೆಗಳೊಂದಿಗೆ ಕೊಡಗು ಜಿಲ್ಲೆಯಾದ್ಯಂತ ಪ್ರತಿಭಟನೆ ಮತ್ತು ಬಂದ್ ಗೆ ಕರೆ ಕೊಡಲಾಗುವುದು ಎಂದು ಎಚ್ಚರಿಸಿದರು.

ಗೌಡ ಯುವಕ ಸಂಘದ ಅಧ್ಯಕ್ಷ ಕೊಡಗನ ಹರ್ಷ ಮಾತನಾಡಿ, ದೇವಾಲಯದ ಬೈಲಾ ಪ್ರಕಾರ ಸಂಪ್ರದಾಯ ಪಾಲಿಸುವ ಬದಲು ಪಾರುಪಾತ್ಯ ಸಾಧಿಸಲು ಯತ್ನಿಸಿ‌ ಸಮಾಜದಲ್ಲಿ ಗಲಭೆಯ ವಾತಾವರಣ ಸೃಷ್ಠಿಸುತ್ತಿರುವ ಕಿಡಿಗೇಡಿಗಳು ವಿನಾಕಾರಣ ಗೌಡ ಸಮುದಾಯವನ್ನು ತೆಗಳುವುದು ಸರಿಯಲ್ಲ ಎಂದರು.

ತಪಿತಸ್ಥರ ವಿರುದ್ದ ಸೂಕ್ತ ಕ್ರಮಕ್ಕೆ ಒತ್ತಾಯಿಸಿ ಸಮಾಜದ ಪ್ರಮುಖರು ಕುಶಾಲನಗರ ಟೌನ್ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದರು.

ಗೋಷ್ಠಿಯಲ್ಲಿ ಗೌಡ ಸಮಾಜದ ಉಪಾಧ್ಯಕ್ಷ ಕುಲ್ಲಚೆಟ್ಟಿ ಕಾಶಿ ಪೂವಯ್ಯ, ಕಾರ್ಯದರ್ಶಿ ಕುಲ್ಲಚನ ಹೇಮಂತ್, ಗೌಡ ನಿವೃತ್ತ ಸೈನಿಕರ ಸಂಘದ ಅಧ್ಯಕ್ಷ ದೇವಜನ ಚಿನ್ನಪ್ಪ, ಪದ್ಮಾವತಿ‌ ಗೌಡ ಮಹಿಳಾ ಒಕ್ಕೂಟದ ಅಧ್ಯಕ್ಷೆ ಚೀಯಂಡಿ ಶಾಂತಿ, ಗೌಡ ಮಹಿಳಾ ಸ್ವಸಹಾಯ ಸಂಘದ ಅಧ್ಯಕ್ಷೆ ಚೆರಿಯಮನೆ ರಷಿ ಹರೀಶ್ ಇದ್ದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!