ಕುಶಾಲನಗರ, ಮಾ 24: ಈಗಾಗಲೆ ಬೇಸಿಗೆ ಬಿಸಿಲು ತಾರಕಕ್ಕೇರುತ್ತಿದ್ದು ನದಿಯಲ್ಲಿ ನೀರಿನ ಹರಿವು ಇಳಿಮುಖಗೊಳ್ಳುತ್ತಿದೆ. ಕುಡಿವ ನೀರಿಗೆ ಅಭಾವ ಉಂಟಾಗದಂತೆ ಅಧಿಕಾರಿ ವರ್ಗ ಈ ಕೂಡಲೆ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವಂತೆ ಹೆಚ್.ಶಿವರಾಮೇಗೌಡರ ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷ ಡಾ.ಬಿ.ಎ.ದಿನೇಶ್ ಶೆಟ್ಟಿ ಆಗ್ರಹಿಸಿದ್ದಾರೆ.
ಈ ಬಗ್ಗೆ ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಹಾರಂಗಿಯಿಂದ ಕುಶಾಲನಗರ ಪಟ್ಟಣಕ್ಕೆ ನೀರು ಸರಬರಾಜು ಮಾಡುವ ಯೋಜನೆ ಕೈಗೂಡಿಲ್ಲ. ಕೂಡಿಗೆ ಬಳಿ ಹಾರಂಗಿ-ಕಾವೇರಿ ಸಂಗಮ ಬಳಿಯಿಂದ ಮನೆಮನೆಗೆ ನೀರೊದಗಿಸುವ ಅಮೃತ್ 2 ಯೋಜನೆ ಪೂರ್ಷಗೊಂಡಿಲ್ಲ. ಈಗಾಗಲೆ ಕಾವೇರಿ ನದಿ ಬರಡಾಗಲು ಆರಂಭಿಸಿರುವ ಕಾರಣ ಕೂಡಲೆ ನದಿಗೆ ಅಡ್ಡಲಾಗಿ ತಾತ್ಕಾಲಿಕ ಬಂಡ್ ನಿರ್ಮಿಸಿ ನೀರನ್ನು ಸಂಗ್ರಹಿಸಲು ಆರಂಭಿಸಬೇಕಿದೆ. ಟ್ಯಾಂಕರ್ ಗಳ ಮೂಲಕ ನೀರೊದಗಿಸುವ ಪರಿಸ್ಥಿತಿ ಎದುರಾಗುವ ಮುನ್ನ ನೀರಿನ ಶೇಖರಣೆಗೆ ಕಟ್ಟುನಿಟ್ಟಿನ ಕ್ರಮವಹಿಸಬೇಕಿದೆ ಎಂದು ದಿನೇಶ್ ಶೆಟ್ಟಿ ಅವರು ಆಗ್ರಹಿಸಿದ್ದಾರೆ.
Back to top button
error: Content is protected !!