ಮನವಿ

ಕಣಿವೆ ತೂಗುಸೇತುವೆ ಮುಕ್ತ ಸಂಚಾರಕ್ಕೆ ಸ್ಥಳೀಯರ ಆಗ್ರಹ

ಕುಶಾಲನಗರ, ಜೂ 19 : ಕಣಿವೆ ಗ್ರಾಮದ ಕಾವೇರಿ ನದಿಗೆ ಅಡ್ಡಲಾಗಿ ನಿರ್ಮಿಸಿರುವ ತೂಗು ಸೇತುವೆಗೆ ಅಳವಡಿಸಿರುವ ಬೀಗವನ್ನು ತೆರವುಗೊಳಿಸಿ ವಿದ್ಯಾರ್ಥಿಗಳು ಹಾಗೂ ಕೃಷಿ ಕಾರ್ಮಿಕರ ಸಂಚಾರಕ್ಕೆ ಅನುವು ಮಾಡಿಕೊಡಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ಕೊಡಗಿನಲ್ಲಿ ಮಳೆ ಸುರಿದು ನದಿಯಲ್ಲಿ ಹೆಚ್ಚಿನ ಪ್ರಮಣದ ಹರಿವು ಇದ್ದ ಕಾರಣ ಶಿಥಿಲಗೊಂಡಿರುವ ತೂಗುಸೇತುವೆಯ ಮೇಲೆ ಸಂಚರಿಸುವ ಸಾರ್ವಜನಿಕರ ಹಿತದೃಷ್ಟಿಯಿಂದ ಕುಶಾಲನಗರ ತಾಲ್ಲೂಕು ತಹಸೀಲ್ದಾರರು ಸ್ಥಳ ಪರಿಶೀಲಿಸಿ ತೂಗುಸೇತುವೆಯ ಪ್ರವೇಶ ದ್ವಾರಕ್ಕೆ ಬೀಗ ಅಳವಡಿಕೆ ಮಾಡಿದ್ದರು.
ಆದರೆ, ಇದೇ ತೂಗುಸೇತುವೆಯ ಮೂಲಕ ನದಿಯಾಚೆಯ ಗ್ರಾಮಗಳಿಂದ ಕೂಡಿಗೆ ಹಾಗೂ ಕುಶಾಲನಗರದ ವಿವಿಧ ಕಾಲೇಜುಗಳಿಗೆ ನೂರಾರು ಸಂಖ್ಯೆಯ ವಿದ್ಯಾರ್ಥಿಗಳು ಹಾಗೂ ಕೂಡ್ಲೂರು ಕೈಗಾರಿಕಾ ಪ್ರದೇಶಕ್ಕೆ ಅಷ್ಟೇ ಸಂಖ್ಯೆಯ ಕಾರ್ಮಿಕರು ಧಾವಿಸುವ ಕಾರಣ ಕೂಡಲೇ ಅಳವಡಿಸಿರುವ ಬೀಗವನ್ನು ತೆರೆದು ಮುಕ್ತ ಸಂಚಾರಕ್ಕೆ ಅವಕಾಶ ಮಾಡಿಕೊಡಬೇಕೆಂದು ಕಣಿವೆ ನಿವಾಸಿ ಆರ್.ಎಸ್.ಪ್ರಭುದೇವ್, ಲೋಕೇಶ್, ನವೀನ್ ಮತ್ತಿತರರು ಒತ್ತಾಯಿಸಿದ್ದಾರೆ.
ಈ ವರ್ಷದ ಜನವರಿ 7 ರಂದು ತೂಗುಸೇತುವೆ ವೀಕ್ಷಣೆಗೆ ಆಗಮಿಸಿದ್ದ ಕೊಡಗು ಜಿಲ್ಲಾಧಿಕಾರಿ ವೆಂಕಟರಾಜಾ ಹಾಗೂ ಕ್ಷೇತ್ರದ ಶಾಸಕ ಡಾ.ಮಂತರ್ ಗೌಡ ಶಿಥಿಲಗೊಂಡಿರುವ ತೂಗುಸೇತುವೆಯನ್ನು ಮಳೆಗಾಲದ ಒಳಗೆ ಸರಿಪಡಿಸುವುದಾಗಿ ಹೇಳಿದ್ದರಾದರೂ, ಮಳೆಗಾಲ ಶುರುವಾದರೂ ಕೂಡ ಇತ್ತ ಗಮನ ವಹಿಸಿಲ್ಲ.
ಇನ್ನಾದರೂ ಜಿಲ್ಲಾಧಿಕಾರಿಗಳು ಕೂಡಲೇ ಇತ್ತ ಗಮನ ಹರಿಸಿ ತೂಗುಸೇತುವೆ ಸರಿಪಡಿಸಬೇಕೆಂದು ಸಾರ್ವಜನಿಕರು ಈ ಸಂದರ್ಭ ಒತ್ತಾಯಿಸಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button
error: Content is protected !!