ಕಾಮಗಾರಿ

ವಿರುಪಾಕ್ಷಪುರದಲ್ಲಿ ಅಂಬೇಡ್ಕರ್ ಭವನ ಲೋಕಾರ್ಪಣೆ

ಕುಶಾಲನಗರ, ಅ 02: ನಂಜರಾಯಪಟ್ಟಣ ಗ್ರಾಪಂ ವ್ಯಾಪ್ತಿಯ ವಿರುಪಾಕ್ಷಪುರದ ಶಿರಾಜಳ್ಳ ಗ್ರಾಮದಲ್ಲಿ ಗ್ರಾಪಂ ಅನುದಾನದಲ್ಲಿ ರೂ 10 ಲಕ್ಷ ವೆಚ್ಚದಲ್ಲಿ ನೂತನವಾಗಿ ನಿರ್ಮಿಸಿರುವ ಅಂಬೇಡ್ಕರ್ ಭವನವನ್ನು ಗ್ರಾಪಂ ಅಧ್ಯಕ್ಷ ಸಿ.ಎಲ್.ವಿಶ್ವ ಉದ್ಘಾಟಿಸಿದರು.

ಸಾರ್ವಜನಿಕ ಬಳಕೆಗೆ ಮುಕ್ತಗೊಳಿಸಿದ ಬಳಿಕ ಸ್ವಚ್ಚತಾ ಹಿ ಸೇವಾ ಪಾಕ್ಷಿಕದ ಸಮಾರೋಪ ಅಂಗವಾಗಿ ಭವನದಲ್ಲಿ ಪ್ರಮಾಣ ವಚನ ಬೋಧಿಸಲಾಯಿತು.
ಈ ಸಂದರ್ಭ ಮಾತನಾಡಿದ ಗ್ರಾಪಂ ಅಧ್ಯಕ್ಷ ಸಿ.ಎಲ್.ವಿಶ್ವ, ಗ್ರಾಮದಲ್ಲಿ ಇಂತಹ ಒಂದು ಭವನದ ಅಗತ್ಯತೆ ಮನಗಂಡು ನಮ್ಮ ಆಡಳಿತ ಮಂಡಳಿ ನಿರ್ಣಯದಂತೆ ನೂತನ ಭವನ ನಿರ್ಮಿಸಲಾಗಿದೆ. ನಮ್ಮ ಅವಧಿಯಲ್ಲಿ ಗ್ರಾಮದ ಸರ್ವತೋಮುಖ ಅಭಿವೃದ್ಧಿಗೆ ಒತ್ತು ನೀಡಲಾಗಿದೆ. ಕೇವಲ ರೂ 25 ಲಕ್ಷ ಇದ್ದ ಪಂಚಾಯಿತಿ ಆದಾಯ ಇಂದು 1.25 ಕೋಟಿಗೆ ವೃದ್ದಿಸಿದೆ. ಗ್ರಾಪಂ ಗೆ ಆದಾಯ ಕ್ರೋಡೀಕರಣದೊಂದಿಗೆ ಗ್ರಾಮದ ಮೂಲೆಮೂಲೆಗಳಲ್ಲಿ ಅಗತ್ಯ ಅಭಿವೃದ್ಧಿ ಕಾಮಗಾರಿ ಕೈಗೊಂಡಿದ್ದು ಹಲವು ಕಾಮಗಾರಿ ಪ್ರಗತಿಯಲ್ಲಿದೆ. ಕೇವಲ ರಸ್ತೆ, ಚರಂಡಿ ಮಾತ್ರವಲ್ಲದೆ ಮಸೀದಿ, ಮಂದಿರಗಳಿಗೆ ಕೂಡ ಗ್ರಾಪಂ ಅನುದಾನ ಒದಗಿಸಿರುವುದು ವಿಶೇಷ. ಇದುವರೆಗೆ ಪ್ರಸಕ್ತ ನಮ್ಮ ಅವಧಿಯಲ್ಲಿ ಸುಮಾರು 5 ಕೋಟಿಗೂ ಅಧಿಕ ಅನುದಾನವನ್ನು ಗ್ರಾಮಕ್ಕೆ ವಿನಿಯೋಗಿಸಲಾಗಿದೆ. ಹಲವು ಪ್ರತಿಷ್ಠಿತ ಪ್ರಶಸ್ತಿಗಳನ್ನು ಕೂಡ ಗ್ರಾಪಂ ಪಡೆದಿರುವುದು ಕೀರ್ತಿಯ ಸಂಗತಿ ಎಂದರು‌.

ಹಿರಿಯ ಸದಸ್ಯ ಆರ್.ಕೆ.ಚಂದ್ರ ಮಾತನಾಡಿ, ನಮ್ಮ ಆಡಳಿತ ಮಂಡಳಿ ಬೇಧಬಾವ ತೋರದೆ ಒಮ್ಮತದ ನಿರ್ಣಯಗಳಿಂದ ಗ್ರಾಮದ ಎಲ್ಲಾ ಸಮುದಾಯ ವರ್ಗದವರಿಗೂ ಸರಕಾರದ ಸೌಲಭ್ಯಗಳನ್ನು ಒದಗಿಸಿದೆ. ಸಾರ್ವಜನಿಕ ಗಣೇಶೋತ್ಸವಕ್ಕೆ‌ ಸೂಕ್ತ ಸ್ಥಳದ ಕೊರತೆ ಕಾಡುತ್ತಿತ್ತು. ಸಾರ್ವಜನಿಕ ಕಾರ್ಯಕ್ರಮಗಳಿಗೆ ಈ ಭವನ ಅನುಕೂಲವಾಗಲಿದೆ ಎಂದರು.

ಸದಸ್ಯ ರಕ್ಷಿತ್ ಮಾವಜಿ ಮಾತನಾಡಿ, ತೀರಾ ಹದಗೆಟ್ಟಿದ್ದ ಈ ಪ್ರದೇಶವನ್ನು ಗುರುತಿಸಿ ಅನುದಾನ ಮೀಸಲಿರಿಸಿ ಇಂದು ಸುಂದರ ಭವನ ನಿರ್ಮಿಸಿರುವುದು ಸೇರಿದಂತೆ ನಮ್ಮ ಗ್ರಾಪಂ ವತಿಯಿಂದ ಕೈಗೊಂಡ ಅಭಿವೃದ್ಧಿ ಕಾರ್ಯಗಳ ಬಗ್ಗೆ ನಮಗೆ ಹೆಮ್ಮೆಯಿದೆ. ಇತರೆ ಗ್ರಾಪಂ ಗಳಿಗೆ ಭಿನ್ನ ಎಂಬಂತೆ ನಮ್ಮ ಗ್ರಾಪಂ ಇಂದು ಆರ್ಥಿಕವಾಗಿ ಶಕ್ತವಾಗಿದೆ. ಮುಂಬರುವ ಜನಪ್ರತಿನಿಧಿಗಳು ಯಾವುದೇ ತೊಡಕಿಲ್ಲದೆ ಮುಂದಿನ ದಿನಗಳಲ್ಲಿ ಮತ್ತಷ್ಟು ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲು ಅಗತ್ಯ ಅದಾಯ ಮೂಲಕ ಪಂಚಾಯಿತಿಗಿದೆ ಎಂದರು.

ಸದಸ್ಯೆ ಗಿರಿಜಮ್ಮ ಮಾತನಾಡಿದರು.
ಗ್ರಾಪಂ ಪಿಡಿಒ ರಾಜಶೇಖರ್ ಪ್ರಾಸ್ತಾವಿಕವಾಗಿ ಮಾತನಾಡಿದರು.
ಈ ಸಂದರ್ಭ ರಸ್ತೆ ಅಭಿವೃದ್ಧಿ ಕಾಮಗಾರಿ ಪರಿಶೀಲಿಸಲಾಯಿತು.
ಕಾರ್ಯಕ್ರಮದಲ್ಲಿ ಗ್ರಾಪಂ ಉಪಾಧ್ಯಕ್ಷೆ ಕುಸುಮ, ಕಾರ್ಯದರ್ಶಿ ಶೇಷಗಿರಿ, ಸಂಜೀವಿನಿ ಒಕ್ಕೂಟದ ಸರಿತಾ ಸೇರಿದಂತೆ ಗ್ರಾಮಸ್ಥರು ಇದ್ದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!