ಕುಶಾಲನಗರ, ಸೆ 15: ಗುಡ್ಡೆಹೊಸೂರು ಗ್ರಾಪಂ ವ್ಯಾಪ್ತಿಯ ಗುಡ್ಡೆಹೊಸೂರು ಮತ್ತು ಬೊಳ್ಳೂರು ಗ್ರಾಮದಲ್ಲಿ ಸಾರ್ವಜನಿಕ ಸ್ಮಶಾನವಿಲ್ಲದೆ ಗ್ರಾಮಸ್ಥರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಎರಡೂ ಗ್ರಾಮಗಳಲ್ಲಿ ಸ್ಮಶಾನವಿಲ್ಲದ ಕಾರಣ ಶವಸಂಸ್ಕಾರಕ್ಕೆ ಪಕ್ಕದ ಗ್ರಾಮ ಬಸವನಹಳ್ಳಿ ರುದ್ರಭೂಮಿ ಅವಲಂಬಿಸುವ ಪರಿಸ್ಥಿತಿ ಎದುರಾಗಿದೆ ಎಂದು ಎರಡೂ ಗ್ರಾಮಗಳ ಜನಪ್ರತಿನಿಧಿಗಳು ಅಸಹಾಯಕತೆ ತೋಡಿಕೊಂಡಿದ್ದಾರೆ. ಎರಡೂ ಗ್ರಾಮಗಳು ಸೇರಿ 2000 ಜನಸಂಖ್ಯೆಯಿದ್ದು, ಇವರಿಗೆಂದು ಸಾರ್ವಜನಿಕ ಸ್ಮಶಾನಕ್ಕೆ ಸ್ಥಳೀಯ ಆಡಳಿತ ಜಾಗವೊಂದನ್ನು ಗುರುತಿಸಿ ಹದ್ದುಬಸ್ತು ನಿಗದಿಪಡಿಸಲಾಗಿತ್ತಾದರೂ ಪ್ರಕರಣ ನ್ಯಾಯಾಲಯ ಮೆಟ್ಟಿಲೇರಿದೆ. ಇದರಿಂದಾಗಿ ಗ್ರಾಮದ ನಿವಾಸಿಗಳಿಗೆ ತೀವ್ರ ಅನಾನುಕೂಲ ಎದುರಾಗಿದೆ. ಈ ಹಿನ್ನೆಲೆಯಲ್ಲಿ ಜಿಲ್ಲಾಡಳಿತ, ಶಾಸಕರು ಇತ್ತ ಗಮನಹರಿಸಿ ನಮ್ಮ ಸಮಸ್ಯೆ ಬಗೆಹರಿಸಲು ಕ್ರಮವಹಿಸುವಂತೆ ಗುಡ್ಡೆಹೊಸೂರು, ಬೊಳ್ಳೂರು ವಾರ್ಡ್ ಸದಸ್ಯರಾದ ಪ್ರದೀಪ್, ಉಷಾ, ನಿತ್ಯಾನಂದ, ನಾರಾಯಣ, ನಂದಿನಿ, ಸುಶೀಲಾ ಆಗ್ರಹಿಸಿದ್ದಾರೆ. ಆದಷ್ಟು ಬೇಗ ರುದ್ರಭೂಮಿಗೆ ಜಾಗ ಒದಗಿಸಿ ಗ್ರಾಮಸ್ಥರ ಸಮಸ್ಯೆಗೆ ಶಾಶ್ವತ ಪರಿಹಾರ ಒದಗಿಸಬೇಕಿದೆ ಎಂದು ಗುಡ್ಡೆಹೊಸೂರು ಗ್ರಾಪಂ ಅಧ್ಯಕ್ಷರು, ಉಪಾಧ್ಯಕ್ಷರು ಸೇರಿದಂತೆ ಆಡಳಿತ ಮಂಡಳಿ ಪ್ರಕಟಣೆ ಮೂಲಕ ಕೋರಿದ್ದಾರೆ.
Back to top button
error: Content is protected !!