ಕುಶಾಲನಗರ, ಜೂ 21: ನಾಪತ್ತೆಯಾಗಿದ್ದ ಚೆಟ್ಟಳ್ಳಿ ಕಂಡಕೆರೆ ನಿವಾಸಿ ಸೇನೆಯ ನಿವೃತ್ತ ಉದ್ಯೋಗಿ ಗಿರೀಶ್ ಮೃತದೇಹ ಕಾವೇರಿ ನಿಸರ್ಗಧಾಮ ಪಕ್ಕದ ಗ್ರೀನ್ ಲ್ಯಾಂಡ್ ಹೋಟೆಲ್ ಹಿಂಭಾಗದ ಕಾವೇರಿ ನದಿಯಲ್ಲಿ ಮೂರು ದಿನಗಳ ನಂತರ ಪತ್ತೆಯಾಗಿದೆ.
ಬುಧವಾರ ರಾತ್ರಿಯಿಂದ ಕಾಣೆಯಾಗಿದ್ದ
ಚೆಟ್ಟಳ್ಳಿ ಕಂಡಕೆರೆ ನಿವಾಸಿ ಗಿರೀಶ್ (46) ಇವರ ಸ್ಕೂಟಿ ಕೀ ಮತ್ತು ಹೆಲ್ಮೆಟ್ ಸಹಿತ ಗುಡ್ಡೆಹೊಸೂರು ತೆಪ್ಪದಕಂಡಿ ಬಳಿ ಪತ್ತೆಯಾಗಿತ್ತು. ಮೊಬೈಲ್ ಕೂಡ ಸ್ವಿಚ್ ಆಫ್ ಆಗಿರುವ ಹಿನ್ನಲೆಯಲ್ಲಿ ಕುಟುಂಬಸ್ಥರು ಕುಶಾಲನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಆತ್ಮಹತ್ಯೆ ಶಂಕೆ ವ್ಯಕ್ತಗೊಂಡು ಗುರುವಾರ, ಶುಕ್ರವಾರ ಇಡೀ ದಿನ ಕಾವೇರಿ ನದಿಯಲ್ಲಿ ಶೋಧ ಕಾರ್ಯ ನಡೆಸಲಾಯಿತು.
ಅಗ್ನಿಶಾಮಕ ದಳ, ರಿವರ್ ರಾಫ್ಟ್ ಸಿಬ್ಬಂದಿಗಳು ಕಣಿವೆ, ಹೆಬ್ಬಾಲೆ ತನಕ ಶೋಧ ಕಾರ್ಯ ನಡೆಸಿದ್ದರು. ಎರಡನೇ ದಿನ ಶುಕ್ರವಾರ ಕೂಡ ಕಾವೇರಿ ಸೇತುವೆ ಬಳಿ ಶೋಧ ಕಾರ್ಯ ನಡೆಸಲಾಯಿತು. ಈ ನಡುವೆ ಕಣಿವೆ ಬಳಿ ಮೃತದೇಹವೊಂದು ತೇಲಿಹೋದ ಬಗ್ಗೆ ಸ್ಥಳೀಯರ ಮಾಹಿತಿ ಆಧರಿಸಿ ಪರಿಶೀಲಿಸಿದಾಗ ನೆರೆ ಜಿಲ್ಲೆಯ ಚಿಕ್ಕಕಮರವಳ್ಳಿ ಗ್ರಾಮ ವ್ಯಾಪ್ತಿಯಲ್ಲಿ ಅಪರಿಚಿತ ಗಂಡಸಿನ ಮೃತದೇಹ ಕೊಳತೆ ಸ್ಥಿತಿಯಲ್ಲಿ ಪತ್ತೆಯಾಗಿದೆ. ಪರಿಶೀಲಿಸಿದಾಗ ಅದು ಕಾಣೆಯಾದ ಗಿರೀಶ್ ಮೃತದೇಹ ಅಲ್ಲ ಎಂಬುದು ಕಂಡುಬಂದಿದೆ. ಈ ನಡುವೆ
ಶನಿವಾರ ಬೆಳಗ್ಗೆ ನದಿಯಲ್ಲಿ ಗಿರೀಶ್ ಮೃತದೇಹ ತೇಲಿಬಂದಿದ್ದು ನಿಸರ್ಗಧಾಮದ ಬಳಿ ಪತ್ತೆಯಾಗಿದೆ. ಮೃತರು ಪತ್ನಿ, ಇಬ್ಬರು ಮಕ್ಕಳನ್ನು ಅಗಲಿದ್ದಾರೆ. ಆರ್ಥಿಕನಷ್ಟದಿಂದ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆಯಿದೆ.
Back to top button
error: Content is protected !!