ಪ್ರತಿಭಟನೆ

ಹಾರಂಗಿ-ಚಿಕ್ಲಿಹೊಳೆ ಅಣೆಕಟ್ಟೆ ಹೊರಗುತ್ತಿಗೆ ಸಿಬ್ಬಂದಿಗಳಿಗೆ ದೊರಕದ ಸಂಬಳ: ಉಪವಾಸ ಸತ್ಯಾಗ್ರಹ

ಕುಶಾಲನಗರ, ಫೆ 27: ಕಾವೇರಿ‌ ನೀರಾವರಿ ನಿಗಮದ ವ್ಯಾಪ್ತಿಗೆ ಒಳಪಡುವ ಹಾರಂಗಿ‌ ಮತ್ತು ಚಿಕ್ಲಿಹೊಳೆ‌ ಅಣೆಕಟ್ಟೆ ವಿಭಾಗದಲ್ಲಿ ಗುತ್ತಿಗೆ ಆಧಾರದಲ್ಲಿ ಕಾರ್ಯನಿರ್ವಹಿಸುತ್ತಿರುವ 8 ಮಂದಿ ಗೆ ಕಳೆದ‌ ನಾಲ್ಕು ತಿಂಗಳಿಂದ ಸಂಬಳ ನೀಡಿಲ್ಲ ಎಂದು ನೊಂದ ಸಿಬ್ಬಂದಿಗಳು ಪ್ರತಿಭಟನೆ ನಡೆಸಿದರು.

ಹಾರಂಗಿ‌ ವಿಭಾಗದ ಸಹಾಯಕ ಕಾರ್ಯಪಾಲಕ ಅಭಿಯಂತರ ಕಛೇರಿ ಮುಂಭಾಗ ಉಪವಾಸ ಸತ್ಯಾಗ್ರಹ ಕೈಗೊಂಡ ಸಿಬ್ಬಂದಿಗಳು ಗುತ್ತಿಗೆ ಪಡೆದ ಸಂಸ್ಥೆಯ ವಿರುದ್ದ ಆಕ್ರೋಷ ವ್ಯಕ್ತಪಡಿಸಿದರು.
ಈ ಸಂದರ್ಭ ಸುದ್ದಿಗಾರರೊಂದಿಗೆ ಮಾತನಾಡಿದ ಚಿಕ್ಲಿಹೊಳೆ ಡ್ಯಾಂ ವಾಚರ್ ಗಳಾದ ಮೇದಪ್ಪ ಸುಬ್ರಮಣಿ, ಅಣ್ಣಪ್ಪ ಹಾಗೂ ಹಾರಂಗಿ ಅಣೆಕಟ್ಟೆ ಕಛೇರಿ ಟೈಪಿಸ್ಟ್ ವೀಣಾ, ಕಳೆದ 10 ವರ್ಷಗಳಿಂದ ಅಧಿಕ ಕಾಲ ಗುತ್ತಿಗೆ ಆಧಾರದಲ್ಲಿ ಕಾರ್ಯ ನಿರ್ವವಹಿಸುತ್ತಿದ್ದೇವೆ. ಪ್ರತಿ ವರ್ಷ ಗುತ್ತಿಗೆ ಪಡೆದ ಸಂಸ್ಥೆ ಬದಲಾಗುತ್ತವೆ. ಆದರೆ ಈ‌ ಬಾರಿ ಗುತ್ತಿಗೆ ಪಡೆದ‌ ಸಂಸ್ಥೆಯ ಮುಖ್ಯಸ್ಥರು ನಮ್ಮನ್ನು ನಿಕೃಷ್ಟವಾಗಿ ಕಾಣುತ್ತಿದ್ದಾರೆ. ಸಂಬಳ ನೀಡಲು ಸತಾಯಿಸುತ್ತಿದ್ದು, ಪ್ರಶ್ನಿಸಿದರೆ ಕೆಲಸ ಬಿಟ್ಟು ತೆರಳಲು ಬೆದರಿಕೆ ಒಡ್ಡುತ್ತಿದ್ದಾರೆ ಎಂದು ಅಳಲು ತೋಡಿಕೊಂಡರು. ಸರಿಯಾದ ಸಮಯಕ್ಕೆ‌ ಸಂಬಳ ನೀಡದ ಕಾರಣ ನಾವು ಸಂಕಷ್ಟದಲ್ಲಿ ದಿನ ದೂಡುವಂತಾಗಿದೆ. ಕೂಡಲೆ ಅಧಿಕಾರಿ ವೃಂದ ನಮ್ಮ‌ ಸಮಸ್ಯೆ ಬಗೆಹರಿಸಲು ಮುಂದಾಗಬೇಕಿದೆ. ಅಲ್ಲಿ ತನಕ ಉಪವಾಸ ಸತ್ಯಾಗ್ರಹ ಮುಂದುವರೆಸಲಾಗುವುದು ಎಂದರು.

ನಂಜರಾಯಪಟ್ಟಣ ಗ್ರಾಪಂ ಸದಸ್ಯ, ಗಿರಿಜನ ಮುಖಂಡ ಆರ್.ಕೆ.ಚಂದ್ರ ಮಾತನಾಡಿ, ಈ ಭಾಗದಲ್ಲಿ ಕಾವೇರಿ ನೀರಾವರಿ ನಿಗಮವನ್ನು ಹೇಳುವವರು, ಕೇಳುವವರು ಇಲ್ಲದಂತಾಗಿದೆ. ಸರಕಾರಿ ಅಧಿಕಾರಿಗಳಿಗೆ ತಿಂಗಳು ತುಂಬುವುದರೊಳಗೆ ಸಂಬಳ ದೊರೆಯುತ್ತದೆ. ಆದರೆ
ದಿನಗೂಲಿ ನೌಕರರ ಸಮಸ್ಯೆ ಕೇಳುವವರು ಇಲ್ಲದಂತಾಗಿದೆ. ಸಂಬಳವಿಲ್ಲದೆ ಜೀವನ ನಿರ್ವಹಣೆಗೆ ಪರದಾಡುತ್ತಿರುವ ಸಿಬ್ಬಂದಿಗಳಿಗೆ ಕೂಡಲೆ ವೇತನ ಪಾವತಿಯಾಗಲು ಅಧಿಕಾರಿಗಳು ಕ್ರಮವಹಿಸಬೇಕಿದೆ. ತಪ್ಪಿದಲ್ಲಿ ಉಗ್ರ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ತಿಳಿಸಿದರು.
ಈ ಸಂದರ್ಭ ಸಿಬ್ಬಂದಿಗಳಾದ ಪಲ್ಲವಿ, ಶೇಖರ್, ಕಿರಣ್, ಲಲನ್ ಕಾಳಿಯಪ್ಪ ಇದ್ದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!