ಅರಣ್ಯ ವನ್ಯಜೀವಿ

ವಲಯ ಅರಣ್ಯಾಧಿಕಾರಿ ಸಮ್ಮುಖದಲ್ಲಿ ನಂಜರಾಯಪಟ್ಟಣ ರೈತರು ಹಾಗೂ ಗ್ರಾಮಸ್ಥರ ಹೋರಾಟ ಸಮಿತಿ ಸಭೆ

ಕುಶಾಲನಗರ, ಆ 22: ಆನೆ ಮತ್ತು ಮಾನವ ಸಂಘರ್ಷ, ಕಾಡು ಪ್ರಾಣಿಗಳ ಉಪಟಳ ನಿಗ್ರಹ ಸಂಬಂಧ ನಂಜರಾಯಪಟ್ಟಣ ಗ್ರಾಮ ಪಂಚಾಯಿತಿ ವ್ಯಾಪ್ತಿಯ ರೈತರು ಹಾಗೂ ಗ್ರಾಮಸ್ಥರ ಹೋರಾಟ ಸಮಿತಿಯ ಸಭೆ ವಲಯ ಅರಣ್ಯಾಧಿಕಾರಿಗಳ ಸಮ್ಮುಖದಲ್ಲಿ ಗ್ರಾಪಂ ಸಭಾಂಗಣದಲ್ಲಿ ನಡೆಯಿತು.

ಗ್ರಾಪಂ ವ್ಯಾಪ್ತಿಯಲ್ಲಿ ವನ್ಯ ಜೀವಿಗಳಿಂದ ಉಂಟಾಗುತ್ತಿರುವ ಅನಾಹುತಗಳು ಮತ್ತು ಬೆಳೆಹಾನಿ ತಡೆಗಟ್ಟಲು ಸೂಕ್ತ ಪರಿಹಾರ ಕ್ರಮಗಳಿಗೆ ಆಗ್ರಹಿಸಿ ಪ್ರಥಮ ಹಂತದಲ್ಲಿ ನಡೆದ ಸಭೆಯಲ್ಲಿ ಉಪ ವಲಯ ಅರಣ್ಯಾಧಿಕಾರಿಗೆ ಮನವಿ ಸಲ್ಲಿಸಲಾಗಿತ್ತು‌. ಜಿಲ್ಲಾ ಮಟ್ಟದ ಅಧಿಕಾರಿಗಳ ಕಛೇರಿಗೆ ನಿಯೋಗ ತೆರಳುವ ನಿರ್ಧಾರ ಹಿನ್ನೆಲೆಯಲ್ಲಿ ವಲಯ ಅರಣ್ಯಾಧಿಕಾರಿ ರಕ್ಷಿತ್ ಗ್ರಾಮಕ್ಕೆ‌ ಭೇಟಿ ನೀಡಿದರು.

ಗ್ರಾಮ ಪಂಚಾಯಿತಿ ಅಧ್ಯಕ್ಷ ಸಿ.ಎಲ್.ವಿಶ್ವ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ರೈತರು ಹಾಗೂ ಬೆಳೆಗಾರರು ಅರಣ್ಯಾಧಿಕಾರಿಗಳಿಗೆ ಸಮಸ್ಯೆಗಳ ಬಗ್ಗೆ ಗಮನ ಸೆಳೆದರು.

ನಂಜರಾಯಪಟ್ಟಣ ಗ್ರಾಪಂ ಅಧ್ಯಕ್ಷ ಸಿ‌.ಎಲ್.ವಿಶ್ವ ಮಾತನಾಡಿ, ವನ್ಯಜೀವಿಗಳ ಉಪಟಳದ ಬಗ್ಗೆ ವಿವರಿಸಿದರು. ಕಾಡು ಪ್ರಾಣಿಗಳ ಹಾವಳಿ ತಡೆಗಟ್ಟುವ ನಿಟ್ಟಿನಲ್ಲಿ ಹೋರಾಟ ರೂಪಿಸಲು 11 ಮಂದಿ ಒಳಗೊಂಡ ಹೋರಾಟ ಸಮಿತಿ ಈಗಾಗಲೆ ರಚಿಸಲಾಗಿದೆ. ಅರಣ್ಯ ಇಲಾಖೆ ಹಿರಿಯ ಅಧಿಕಾರಿಗಳು, ಶಾಸಕರು, ಸಂಸದರು, ರೈತ ಮುಖಂಡರ ಗಮನ ಸೆಳೆದು ಸಮಸ್ಯೆ ಪರಿಹಾರಕ್ಕೆ ಕ್ರಮಕೈಗೊಳ್ಳುವ ಬಗ್ಗೆ ಸಭೆ ನಿರ್ಣಯ ಕೈಗೊಂಡಿದೆ.
ಕೇವಲ ಕಾಡಾನೆ ಹಾವಳಿ ಬಗ್ಗೆ ಮಾತ್ರ ಚರ್ಚೆಯಾಗುತ್ತಿದೆ. ಆದರೆ ಕಾಡಾನೆ ಹೊರತುಪಡಿಸಿ ಕಾಡು ಹಂದಿ, ಮುಳ್ಳುಹಂದಿ, ನವಿಲು, ಮಂಗ, ಕೆಂಜರಿಗಳ ಹಾವಳಿಯಿಂದ ಅಪಾರ ಪ್ರಮಾಣದಲ್ಲಿ ಬೆಳೆ ನಾಶ ಉಂಟಾಗುತ್ತಿದೆ. ಇವುಗಳ ನಡುವೆ ಹುಲಿ ಕಾಟ ಕೂಡ ಹೆಚ್ಚಾಗಿದೆ. ಸೋಲಾರ್ ಫೆನ್ಸಿಂಗ್, ರೈಲ್ವೇ ಬ್ಯಾರಿಕೆಡ್ ಅಳವಡಿಕೆ ಅವೈಜ್ಞಾನಿಕವಾಗಿದ್ದು ಪರಿಣಾಮಕಾರಿಯಾಗಿಲ್ಲ ಎಂದು‌ ಸಭೆಯಲ್ಲಿ ಆಕ್ರೋಷ ವ್ಯಕ್ತಪಡಿಸಿದರು.
ಹಿಂದಿನಂತೆ ಕಾಡಾನೆ ಓಡಿಸಲು ಇಲಾಖೆಯಿಂದ ಪಟಾಕಿ ಕೂಡ ವಿತರಿಸುತ್ತಿಲ್ಲ. ಅರಣ್ಯಕ್ಕೆ ಗ್ರಾಮಸ್ಥರು ಪ್ರವೇಶಿಸುವುದಿಲ್ಲ ಅಂತೆಯೇ ವನ್ಯಜೀವಿಗಳು ಗ್ರಾಮದೊಳಗೆ ಪ್ರವೇಶಿಸದಂತೆ ಇಲಾಖೆ ಸೂಕ್ತ ಕ್ರಮವಹಿಸಬೇಕಿದೆ ಎಂದು ಆಗ್ರಹಿಸಿದರು.

ಹಾನಿಗೊಳಗಾದ ಬೆಳೆಗಳಿಗೆ ನೀಡುವ ಪರಿಹಾರ ಮೊತ್ತ ಹೆಚ್ಚಿಸಬೇಕಿದೆ,‌ ಸಕಾಲದಲ್ಲಿ ವಿತರಿಸಬೇಕಿದೆ. ಸಮಿತಿಯೊಂದಿಗೆ ವನ್ಯಜೀವಿ ಹಾವಳಿ ಪ್ರದೇಶಗಳ ಸ್ಥಳ ಪರಿಶೀಲನೆಗೆ ಮುಂದಾಗಬೇಕಿದೆ ಎಂದು ಕೋರಿದರು.

ಗ್ರಾಮಸ್ಥರ ಪ್ರಶ್ನೆಗಳು, ಬೇಡಿಕೆಗಳನ್ನು ಆಲಿಸಿದ ಅರಣ್ಯಾಧಿಕಾರಿ ಮಾತನಾಡಿ, ಆನೆ ಅತ್ಯಂತ ಬುದ್ದಿವಂತ ಜೀವಿ. ಆನೆಗಳ ಸಂತತಿ ಹೆಚ್ಚಾದಂತೆ ಉಪಟಳ ಕೂಡ ಹೆಚ್ಚಾಗುತ್ತಿದೆ. ಕೆಲವು ಆನೆಗಳು‌ ಮಾತ್ರ ನಾಡಿಗೆ ಲಗ್ಗೆಯಿಡುವ ಪರಿಪಾಠ ಬೆಳೆಸಿಕೊಂಡಿದೆ. ಇವೆಲ್ಲವೂ ವೈಜ್ಞಾನಿಕವಾಗಿ ಸಾಬೀತಾಗಿದೆ. ಈ ಭಾಗಕ್ಕೆ ಹೊಸದಾಗಿ ನೇಮಕಗೊಂಡಿರುವ ಹಿನ್ನೆಲೆಯಲ್ಲಿ ನಿಮ್ಮ ಸಮಸ್ಯೆಗಳನ್ನು ಪರಿಹರಿಸಲು ಕಾಲ್ನಡಿಗೆ ಮೂಲಕ ಸಂಚರಿಸಿ‌ ಸಮಸ್ಯೆ ಅರಿತುಕೊಳ್ಳುವ ಪ್ರಯತ್ನ ಮಾಡಬೇಕಿದೆ. ಸಮಸ್ಯೆ ಇತ್ಯರ್ಥಕ್ಕೆ‌ ಕೂಡ ಕಾಲವಕಾಶದ ಅಗತ್ಯವಿದೆ. ಶಾಶ್ವತ ಪರಿಹಾರ ಕಷ್ಟಸಾಧ್ಯ ಎಂದ‌ ಅವರು, ಕಾನೂನಿನ ಚೌಕಟ್ಟಿನಲ್ಲಿ ವೈಜ್ಞಾನಿಕ ರೀತಿಯಲ್ಲಿ ಸಮಸ್ಯೆಗಳ ಪರಿಹಾರಕ್ಕೆ ಇಲಾಖೆ ಕ್ರಮವಹಿಸಲಿದೆ ಎಂದು ವಲಯ ಅರಣ್ಯಾಧಿಕಾರಿ ರಕ್ಷಿತ್ ತಿಳಿಸಿದರು. ಮುಂದಿನ ಒಂದು ತಿಂಗಳ ಒಳಗಾಗಿ ನಮ್ಮ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಕ್ರಮಗಳನ್ನು ಕೈಗೊಳ್ಳಬೇಕು. ತಪ್ಪಿದಲ್ಲಿ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿ ಸಮಿತಿ ವತಿಯಿಂದ ಮನವಿ ಸಲ್ಲಿಸಲಾಯಿತು.

ಈ ಸಂದರ್ಭ ಗ್ರಾಪಂ ಸದಸ್ಯರಾದ  ಕೆ.ವಿ.ಪ್ರೇಮಾನಂದ, ಮಾಜಿ ಸದಸ್ಯ ಸುಮೇಶ್, ಉಪ ವಲಯ ಅರಣ್ಯಾಧಿಕಾರಿಗಳಾದ ಸಚಿನ್ ನಿಂಬಾಳ್ಕರ್, ಡಿ.ಜಿ.ಜಗದೀಶ್, ಹೋರಾಟ ಸಮಿತಿ ಸದಸ್ಯರಾದ ಉಮೇಶ್, ವಿ.ಕೆ.ಸಚಿನ್,
ಕೆಮ್ಮಾರನಾ ಲೋಕನಾಥ್, ಐಯಂಡ್ರ ಬಾಲಕೃಷ್ಣ, ನವೀನ್, ಬ್ರಿಜೇಶ್, ಡಾಲು, ಪ್ರಸನ್ನ ಕುಮಾರ್, ಮಾವಾಜಿ ರವಿ, ಸಿದ್ದ, ಪ್ರೇಮಾನಂದ
ಬೆಳ್ಳಿಯಪ್ಪ, ಚೇತನ್ ಸೇರಿದಂತೆ ರೈತರು, ಬೆಳೆಗಾರರು ಇದ್ದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!