ಕಾರ್ಯಕ್ರಮ

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯಿಂದ ಡೆಸ್ಕ್-ಬೆಂಚ್ ವಿತರಣೆ

ಕುಶಾಲನಗರ, ಜ 24: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಸೋಮವಾರಪೇಟೆ ತಾಲೂಕು ಘಟಕದ ಆಶ್ರಯದಲ್ಲಿ ಸಮುದಾಯ ಅಭಿವೃದ್ಧಿ ಕಾರ್ಯಕ್ರಮದಡಿ ಸರಕಾರಿ ಮತ್ತು ಅನುದಾನಿತ ಶಾಲೆಗಳಿಗೆ 210 ಜೊತೆ ಡೆಸ್ಕ್ ಬೆಂಚುಗಳ ಹಸ್ತಾಂತರ ಕಾರ್ಯಕ್ರಮ‌ ಕುಶಾಲನಗರದ ಜ್ಞಾನಭಾರತಿ ಶಾಲಾ ಸಭಾಂಗಣದಲ್ಲಿ ನಡೆಯಿತು.

ಕುಶಾಲನಗರ ತಾಲೂಕು ಗ್ಯಾರೆಂಟಿ ಯೋಜನೆಗಳ‌ ಅನುಷ್ಠಾನ ಸಮಿತಿ ಅಧ್ಯಕ್ಷ ವಿ.ಪಿ.ಶಶಿಧರ್ ಕಾರ್ಯಕ್ರಮವನ್ನು ಉದ್ಘಾಟಿಸಿದರು. ನಂತರ ಮಾತನಾಡಿದ ಅವರು, ಇಂದಿನ‌ ಆಧುನಿಕ ಕಾಲಘಟ್ಟದಲ್ಲಿ ಪರರಿಗೆ ನೆರವಾಗುವ ಗುಣಗಳು‌ ಮರೆಯಾಗುತ್ತಿರುವುದು ವಿಷಾದನೀಯ ಸಂಗತಿ.
ಶಿಕ್ಷಣದಿಂದ ದೊರಕುವ ಜ್ಞಾನ, ಜ್ಞಾನದಿಂದ ದೊರಕುವ ಗೌರವ ಮತ್ತ್ಯಾವುದರಲ್ಲಿಯೂ ಲಭಿಸಲು ಸಾಧ್ಯವಿಲ್ಲ. ಶಿಕ್ಷಣಕ್ಕೆ ಪೂರಕವಾದ ತನ್ನದೇ ಆದ ಕೊಡುಗೆಗಳನ್ನು ನೀಡುವ ಮೂಲಕ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಸಮಾಜಕ್ಕೆ ಉತ್ತಮ ‌ಕೊಡುಗೆ ನೀಡುತ್ತಿದೆ ಎಂದು ಶ್ಲಾಘಿಸಿದರು.
ಯೋಜನೆಯ ಸೋಮವಾರಪೇಟೆ ತಾಲೂಕು ಯೋಜನಾಧಿಕಾರಿ ಎಚ್. ರೋಹಿತ್ ಪ್ರಾಸ್ತಾವಿಕವಾಗಿ ಮಾತನಾಡಿ ಕಾರ್ಯಕ್ರಮದ ಬಗ್ಗೆ ಮಾಹಿತಿ ಒದಗಿಸಿದರು.
ಸರಕಾರಿ ಶಾಲೆಗಳನ್ನು ಉಳಿಸಿ ಬೆಳೆಸಲು, ಮೌಲ್ಯಗಳನ್ನು ವೃದ್ದಿಸಲು ಹಲವು ರೀತಿಯ ಯೋಜನೆ ಹಮ್ಮಿಕೊಳ್ಳಲಾಗಿದೆ.
ಜ್ಞಾನ ದೀಪ ಯೋಜನೆಯಡಿ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ. ರಾಜ್ಯಾದ್ಯಂತ ಶಿಕ್ಷಕರ ಕೊರತೆಯಿರುವ ಶಾಲೆಗಳಲ್ಲಿ ಕ್ಷೇತ್ರದ ವತಿಯಿಂದ ಗೌರವಧನ ಒದಗಿಸಿ ಶಿಕ್ಷಕರನ್ನು ನೇಮಕ ಮಾಡುವ ಕೆಲಸ ನಡೆದಿದೆ. ಈವರೆಗೆ ಒಂದು ಸಾವಿರ ಶಿಕ್ಷಕರನ್ನು ನೇಮಕಗೊಳಿಸಲಾಗಿದೆ. ಅದೇ ರೀತಿ ಒಂದು ಜೊತೆಗೆ 8000 ಸಾವಿರ ಮೌಲ್ಯ ಬೆಳೆಬಾಳುವ ಡೆಸ್ಕ್ ಬೆಂಚುಗಳನ್ನು ತಯಾರಿಸಿ ಅಗತ್ಯವಿರುವ ಶಾಲೆಗಳಿಗೆ ವಿತರಿಸುವ ಕಾರ್ಯ ನಡೆಯುತ್ತಿದೆ. ಕೊಡಗು‌ ಜಿಲ್ಲೆಯಲ್ಲಿ ಈವೆರೆಗೆ 800 ಕ್ಕೂ ಅಧಿಕ ಜೊತೆ ಡೆಸ್ಕ್ ಬೆಂಚುಗಳನ್ನು ವಿತರಿಸಲಾಗಿದೆ ಎಂದು ತಿಳಿಸಿದರು.
ಮಾರುತಿ ವಿದ್ಯಾಸಂಸ್ಥೆಯ ಅಧ್ಯಕ್ಷ ಜಿ.ಎಲ್.ನಾಗರಾಜ್ ಕಾರ್ಯಕ್ರಮದ‌ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಪುರಸಭೆ ಅಧ್ಯಕ್ಷೆ ಜಯಲಕ್ಷ್ಮಿ ಚಂದ್ರು, ಸದಸ್ಯೆ ಜಯಲಕ್ಷ್ಮಿ‌ನಂಜುಂಡಸ್ವಾಮಿ, ಜಿಲ್ಲಾ ಜನಜಾಗೃತಿ ವೇದಿಕೆ ಸದಸ್ಯ ಪುಂಡರೀಕಾಕ್ಷ ಮಾತನಾಡಿದರು.
ಈ ಸಂದರ್ಭ ವಿದ್ಯಾಸಂಸ್ಥೆ ಪ್ರಮುಖರಾದ ಸತ್ಯನಾರಾಯಣ, ಎಸ್.ಎನ್.ರಾಜೇಂದ್ರ, ಅಶೋಕ್ ಇದ್ದರು.
ಇದೇ ಸಂದರ್ಭ 8 ವಿವಿಧ ಶಾಲೆಗಳಿಗೆ ಡೆಸ್ಕ್ ಬೆಂಚ್ ಗಳ ಹಸ್ತಾಂತರ ಪತ್ರ ವಿತರಿಸಲಾಯಿತು.
ಈ ಸಂದರ್ಭ ಯೋಜನೆಯ ಪದಾಧಿಕಾರಿಗಳು, ಮೇಲ್ವಿಚಾರಕರು, ವಿವಿಧ ಶಾಲೆಗಳ ಮುಖ್ಯ ಶಿಕ್ಷಕರು, ಎಸ್.ಡಿ.ಎಂ.ಸಿ ಪದಾಧಿಕಾರಿಗಳು ಇದ್ದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!