ಟ್ರೆಂಡಿಂಗ್

ಅರಮೇರಿ ಕಳಂಚೇರಿ ಮಠದಲ್ಲಿ 220 ನೇ ಮಾಸಿಕ ಹೊಂಬೆಳಕು ಚಿಂತನಾ ಗೋಷ್ಠಿ

ವಿರಾಜಪೇಟೆ, ಜೂ‌ 02 : ರಸಾಯನಿಕ ಯುಕ್ತ ಜಂಕ್ ಫುಡ್ ಗಳನ್ನು ದೂರವಿಟ್ಟು ಸ್ವಾಭಾವಿಕವಾಗಿ ಸಿಗುವ ತರಕಾರಿ ಕಾಯಿಪಲ್ಯೆಗಳನ್ನು ಬಳಸಿ ಉತ್ತಮ ಆರೋಗ್ಯವಂತರಾಗಲು ಮಹಿಳಾ ಸಾಹಿತಿಗಳೂ ಹಾಗೂ ಬರಹಗಾರರೂ ಆದ ಚೆಟ್ಟಳ್ಳಿಯ ಆಶಾ ತಿಮ್ಮಪ್ಪಯ್ಯ ಕರೆ ಕೊಟ್ಟರು.

ಅರಮೇರಿ ಕಳಂಚೇರಿ ಮಠದ ಲಿಂಗರಾಜೇಂದ್ರ ಸಭಾಂಗಣದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ‘ ಹೊಂಬೆಳಕು ‘ ಮಾಸಿಕ ತತ್ವ ಚಿಂತನಾ ಗೋಷ್ಠಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ” ಉತ್ತಮ ಆಹಾರದ ಮೂಲಮಂತ್ರಗಳು ” ಎಂಬ ವಿಷಯದ ಕುರಿತು ಉಪನ್ಯಾಸ ನೀಡಿದ ಅವರು ವ್ಯಾಪಾರೀಕರಣ ಇಂದು ವ್ಯಾಪಕವಾಗಿ ಹರಡಿರುವ ಹೊತ್ತಿನಲ್ಲಿ ಜಾಹೀರಾತುಗಳಿಗೆ ಮಾರುಹೋಗಿ ಬೇಡದ ತಿನಿಸುಗಳನ್ನು ತಿನ್ನುವುದು ತಪ್ಪಬೇಕು.

ಪ್ರಕೃತಿಯು ಕಾಲಕಾಲಕ್ಕೆ ನಮಗೆ ಪೂರೈಸುವ ಎಲ್ಲಾ ರೀತಿಯ ಹಣ್ಣುಗಳನ್ನು ನಾವು ಸೇವಿಸುವ ಮೂಲಕ ಉತ್ತಮ ಆರೋಗ್ಯವನ್ನು ಹೊಂದಬಹುದಾಗಿದೆ. ಹಾಗೆಯೇ ಕಣಿಲೆ, ಬಾಳೆ ದಿಂಡು, ಹಲಸು ಮೊದಲಾದ ತಿನಿಸುಗಳನ್ನು ಮಕ್ಕಳಿಗೆ ನೀಡುವ ಮೂಲಕ ಆರೋಗ್ಯವಂತರಾಗಿ ಮಾಡಬೇಕಿದೆ.

ಸಕ್ಕರೆಯನ್ನು ಆಹಾರದಲ್ಲಿ ಹೆಚ್ಚು ಬಳಸದೇ ಹಣ್ಣುಗಳನ್ನು ಹೆಚ್ಚಾಗಿ ಸೇವಿಸಿದಲ್ಲಿ ಮನುಷ್ಯನ ದೇಹಕ್ಕೆ ಅಗತ್ಯವಿರುವ ಸಕ್ಕರೆಯ ಅಂಶ ಪೂರೈಕೆಯಾಗುತ್ತದೆ.

ಮಹಿಳೆಯರು ಪರಸ್ಪರ ಸಂಭಾಷಿಸುವಾಗ ಆಹಾರ ಹಾಗೂ ಅಡುಗೆಯ ವಿಚಾರವಾಗಿ ಸಾಕಷ್ಟು ಕಲಿಯಬಹುದಾಗಿದೆ.

ಸಂಪ್ರದಾಯ ಹಾಗೂ ಸಂಸ್ಕ್ರತಿಗಳಿಗೆ ಹೊಂದಿಕೆಯಾಗುವ ಸಾತ್ವಿಕವಾದ ಆಹಾರಗಳನ್ನು ತಯಾರಿಸುವಲ್ಲಿ ಮಹಿಳೆಯರು ಮಗ್ನರಾಗಬೇಕು ಎಂದು ಆಶಾ ತಿಮ್ಮಪ್ಪಯ್ಯ ಕರೆಕೊಟ್ಟರು.

ಹೊಂಬೆಳಕು ಎಂಬ ಕಾರ್ಯಕ್ರಮದಲ್ಲಿ ಎಲ್ಲಾ ವಿಚಾರಗಳ ಬಗ್ಗೆ ನುರಿತ ತಜ್ಞರಿಂದ ನಡೆಯುತ್ತಿರುವ ಉಪನ್ಯಾಸಗಳ ಬಗ್ಗೆ ಆಶಾ ತಿಮ್ಮಪ್ಪಯ್ಯ ಶ್ಲಾಘಿಸಿದರು.

ಮನುಷ್ಯ ಆಲಸ್ಯ ಹಾಗೂ ಸೋಮಾರಿತನ ಬಿಟ್ಟು ಬಸವಣ್ಣನವರ ಲೋಕ ಸಂದೇಶದಂತೆ ಕಾಯಕವೇ ಕೈಲಾಸ ಎಂಬಂತೆ ದುಡಿದು ತಿನ್ನುವ ಮೂಲಕ ಆರೋಗ್ಯವಂತರಾಗಿರಲು ಕಾಫಿ ಬೆಳೆಗಾರ ತಿಮ್ಮಪ್ಪಯ್ಯ ಕರೆ ಕೊಟ್ಟರು.

ಸಾನಿಧ್ಯ ವಹಿಸಿದ್ದ ಅರಮೇರಿ ಕಳಂಚೇರಿ ಮಠದ ಪೀಠಾಧಿಪತಿ ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮೀಜಿ ಆಶೀರ್ವಚನ ನೀಡಿ, ಶರೀರ ಸದೃಢವಾಗಿರಲು ಆಹಾರದ ಮಹತ್ವ ಬಹಳ ಮುಖ್ಯ. ಮನುಷ್ಯ ಶತಾಯುಗಳಾಗಲು ಆಹಾರದ ಕ್ರಮ ಅಷ್ಟೇ ಸರ್ವ ಶ್ರೇಷ್ಠವಾಗಿರಬೇಕು. ಮನುಷ್ಯ ಧಾವಂತದ ಬದುಕಿನಲ್ಲಿ ಸಂಪತ್ತಿನ ಹಿಂದೆಯೇ ಓಡುತ್ತಿದ್ದಾರೆ. ಹಿಂದಿನ ಕಾಲದ ರೀತಿಯಲ್ಲಿ ಸೌದೆಯಿಂದ ಬೇಯಿಸಿದ, ಚಕ್ಕಲಬಕ್ಕಲ ಹಾಕಿ ನೆಲದಲ್ಲಿ ಕುಳಿತು ಇತಿ ಮಿತಿಯಾಗಿ ಶ್ರದ್ಧೆಯಿಂದ ಸೇವಿಸುವ ಜೀವನ ಶೈಲಿ ಮರುಕಳಿಸಬೇಕಿದೆ ಎಂದು ಕರೆಕೊಟ್ಟರಲ್ಲದೇ, ಪೋಷಕರು ತಮ್ಮ ಮಕ್ಕಳಿಗೆ ಹೊಲ – ಗದ್ದೆ, ತೋಟದ ಕೃಷಿಯ ಅನುಭವ ಕಲಿಸದ ರೀತಿ ಬೆಳೆಸುತ್ತಿರುವುದು ಶೋಚನೀಯ ಎಂದು ಶ್ರೀಗಳು ವಿಷಾದಿಸಿದರು.

ಪಕ್ಷಿತಜ್ಞ ವಿರಾಜಪೇಟೆಯ ಡಾ.ನರಸಿಂಹನ್ ಅಡುಗೆ ಮನೆಯಿಂದ ಸಕ್ಕರೆಯನ್ನು ಮಹಿಳೆಯರು ಮೊದಲು ದೂರವಿಡಬೇಕು. ತಿನಿಸುಗಳಲ್ಲಿ ಬಳಸುವ ಟೇಸ್ಟಿಂಗ್ ಪೌಡರ್, ಅಜಿನೋಮಟ್ಟು ಮೊದಲಾದ ಮಾರಕ ಅಂಶಗಳು ಮಾಡುವ ಅನಾರೋಗ್ಯ ಹಾಗು ಬೇಕರಿ ತಿನಿಸುಗಳಿಂದ ಮಕ್ಕಳನ್ನು ದೂರವಿಡಬೇಕು. ಸಸ್ಯಜನ್ಯ ಎಣ್ಣೆಗಳನ್ನು ಬಳಸುವ ಮೂಲಕ ಉತ್ತಮ ಆರೋಗ್ಯಹೊಂದಲು ನರಸಿಂಹನ್ ಕರೆಕೊಟ್ಟರು.

ಕೊಡಗು ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು ಅಧ್ಯಕ್ಷ ಕೆ.ಎಸ್. ಮೂರ್ತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಸಾಹಿತಿ ಕಿಗ್ಗಾಲು ಗಿರೀಶ್, ನಿವೃತ್ತ ಮೇಜರ್ ಗಿರಿ, ಶರಣ ಸಾಹಿತ್ಯ ಪರಿಷತ್ತು ಜಿಲ್ಲಾ ಕಾರ್ಯದರ್ಶಿ ಬಿ. ನಟರಾಜು, ನಿರ್ದೇಶಕ ಪರಮೇಶ್ ಇದ್ದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!