ಧಾರ್ಮಿಕ

ಶ್ರಧ್ಧಾಭಕ್ತಿಯಿಂದ ನೆರವೇರಿದ ಶಿರಂಗಾಲದ ಶ್ರೀ ಉಮಾಮಹೇಶ್ವರ ದೇವಸ್ಥಾನದ ರಥೋತ್ಸವ

ಕುಶಾಲನಗರ, ಮಾ 25: ಶಿರಂಗಾಲದ ಕಾವೇರಿ‌ನದಿ ದಂಡೆಯಲ್ಲಿರುವ ಶ್ರೀ ಉಮಾಮಹೇಶ್ವರ ದೇವಸ್ಥಾನದ ರಥೋತ್ಸವ ಸೋಮವಾರ ಶ್ರಧ್ಧಾಭಕ್ತಿಯಿಂದ ನಡೆಯಿತು.

ಗ್ರಾಮ ದೇವತಾ ಸಮಿತಿಯ ವತಿಯಿಂದ‌ ನಡೆದ ರಥೋತ್ಸವದ ಅಂಗವಾಗಿ ದೇವಾಲಯದಲ್ಲಿ ವಿಶೇಷ ಪೂಜೆ, ಹೋಮ ಹವನ, ಪೂಜಾ ಕೈಂಕರ್ಯಗಳು, ಅಭಿಷೇಕಗಳು ನಡೆದ ನಂತರ ಮಹಾಮಂಗಳಾರತಿ, ಪ್ರಸಾದ ವಿನಿಯೋಗ ನಡೆಯಿತು.ಮಧ್ಯಾಹ್ನ 1 ಗಂಟೆಗೆ ಶ್ರೀ ಸ್ವಾಮಿಯ ವಿಗ್ರಹವನ್ನು ಅಲಂಕೃತ ರಥದಲ್ಲಿ ಪ್ರತಿಷ್ಠಾಪಿಸಿ, ಪೂಜೆ ಸಲ್ಲಿಸಿದ‌ ಬಳಿಕ ಕೊಡ್ಲಿಪೇಟೆ ಕಿರಿಕೊಡ್ಲಿ ಮಠದ ಶ್ರೀ ಸದಾಶಿವ ಸ್ವಾಮೀಜಿ ರಥಕ್ಕೆ ಮಹಾಮಂಗಳಾರತಿ ಮಾಡುವ ಮೂಲಕ ಚಾಲನೆ ನೀಡಿದರು.

ಮಂಗಳ ವಾದ್ಯ, ಮಂಡ್ಯದ ಡೊಳ್ಳುಕುಣಿತ, ಮಾರಮ್ಮ ಕುಣಿತ, ವೀರಗಾಸೆ , ಗೊಂಬೆಕುಣಿತ ಸಮ್ಮುಖದಲ್ಲಿ ಗ್ರಾಮಸ್ಥರು ಮಹಿಳೆ,‌ ಮಕ್ಕಳಾದಿಯಾಗಿ ರಥವನ್ನು ಗ್ರಾಮದೊಳಗೆ ಎಳೆದು ಸಾಗಿದರು.

ರಥ ಸಾಗುವ ದಾರಿಯಲ್ಲಿ ಗ್ರಾಮಸ್ಥರು‌ ರಥಕ್ಕೆ ಪೂಜೆ ಸಲ್ಲಿಸಿದರು, ‌ಮತ್ತೆ ಕೆಲವರು ಮಜ್ಜಿಗೆ ಪಾನಕ ವಿತರಣೆ‌ ಮಾಡಿದರು.

ದಾನಿಗಳಾದ ಚಂದ್ರಿಕಾ ಕೃಷ್ಣ ಶೆಟ್ಟಿ ದೇವಾಲಯದಲ್ಲಿ ಪೂಜಾ ಕೈಂಕರ್ಯಗಳು, ಹೋಮ ಹವನ , ಪ್ರಸಾದ, ಅನ್ನಸಂತರ್ಪಣೆ ಕಾರ್ಯ ನೆರವೇರಿಸಿದರು.

ಇದೇ ಸಂದರ್ಭ ಮಾತನಾಡಿದ ಗ್ರಾಮ ದೇವತಾ ಸಮಿತಿಯ ಅಧ್ಯಕ್ಷ ಎಸ್.ಎಸ್.ಚಂದ್ರಶೇಖರ್, ಚೋಳರ ಕಾಲದಲ್ಲಿ ನಿರ್ಮಾಣಗೊಂಡ ಈ ದೇವಾಲಯಕ್ಕೆ 550 ವರ್ಷ ಗಳ‌ ಇತಿಹಾಸವಿದೆ. ಏಕಶಿಲೆಯಲ್ಲಿ‌ ದೇವಸ್ಥಾನದ ಮೂರ್ತಿಗಳ ನಿರ್ಮಾಣಗೊಂಡಿದೆ. ಪ್ರತಿ ಶಿವರಾತ್ರಿ ಕಳೆದ‌ 15 ದಿನಗಳ ಮೊದಲ ಹುಣ್ಣಿಮೆ ಸೋಮವಾರ ಇಲ್ಲಿ ರಥೋತ್ಸವ ಜರುಗುವುದು ಇತಿಹಾಸ.

ದಾನಿಗಳ ಸಹಕಾರದಿಂದ ಹಾಗೂ ಸದಾಶಿವ ಸ್ವಾಮೀಜಿ ನೇತೃತ್ವದಲ್ಲಿ ರಥೋತ್ಸವ ಶ್ರದ್ದಾಭಕ್ತಿಯಿಂದ ನೆರವೇರಿದೆ. ಕನ್ನಡ‌ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಕಲಾ ತಂಡಗಳು ಪಾಲ್ಗೊಂಡಿವೆ ಎಂದು ತಿಳಿಸಿದರು.

ಭಕ್ತರ ಇಷ್ಟಾರ್ಥಗಳನ್ನು ನೆರವೇರಿಸುವ ಶಕ್ತಿ ಹೊಂದಿರುವ ಈ ದೇವಸ್ಥಾನ ಮತ್ತಷ್ಟು ಪ್ರಸಿದ್ದಿ ಹೊಂದುವ ಅಗತ್ಯವಿದೆ. ಗ್ರಾಮದ

ಮೂಲ ದೇವಸ್ಥಾನ ಮಂಟಿಗಮ್ಮ ಕ್ಷೇತ್ರದಂತೆ ಈ ದೇವಾಲಯಕ್ಕೆ ಕೂಡ ಭಕ್ತರ ಸಂಖ್ಯೆ ವೃದ್ದಿಸಬೇಕಿದೆ ಎಂದು ಆಗ್ರಹಿಸಿದರು.

ದೇವತಾ ಸಮಿತಿ ಕಾರ್ಯದರ್ಶಿ ಎಂ. ಎಸ್ ಗಣೇಶ್ ಮಾತನಾಡಿ, ದಕ್ಷಿಣ ಕಾಶಿ ಎಂದು ಪ್ರಸಿದ್ದಿ ಪಡೆದಿರುವ ಈ ದೇವಾಲಯ ಪವಿತ್ರ ಕಾವೇರಿ‌ ಬದಿ ತಟದಲ್ಲಿ ಸ್ಥಾಪನೆಯಾಗಿದೆ. ಗ್ರಾಮಸ್ಥರು, ದಾನಿಗಳ ನೆರವಿನಿಂದ ಪ್ರತಿ ವರ್ಷದಂತೆ ಈ ವರ್ಷ ಕೂಡ‌ ರಥೋತ್ಸವ ವಿಜೃಂಭಣೆಯಿಂದ ಜರುಗಿದೆ ಎಂದು ವಿವರಿಸಿದರು.

ಈ ಸಂದರ್ಭ ಸಮಿತಿ ಉಪಾಧ್ಯಕ್ಷ ಉಮೇಶ್, ಪ್ರಮುಖರಾದ ನಂಜುಂಡಪ್ಪ, ಎನ್.ಎಸ್. ರಮೇಶ್, ಧನಪಾಲ, ಕೃಷ್ಣ ಶೆಟ್ಟಿ, ಜಯಪ್ರಕಾಶ್, ವೆಂಕಟೇಶ್, ರಮೇಶ್, ಸಿ.ಎನ್. ಲೋಕೇಶ್ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ಭಕ್ತರು ಪಾಲ್ಗೊಂಡಿದ್ದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!