ಕುಶಾಲನಗರ, ಜು 26: ನಂಜರಾಯಪಟ್ಟಣ ಸರಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದ ಜಾಗ ಅರಣ್ಯ ಇಲಾಖೆಗೆ ಸೇರಿದ್ದಾಗಿದ್ದು ಜಾಗ ಒತ್ತುವರಿ ಮಾಡಲಾಗಿದೆ ಎಂದು ಆರೋಗ್ಯ ಇಲಾಖೆಗೆ ನೋಟೀಸ್ ನೀಡಿರುವ ಹಿನ್ನೆಲೆಯಲ್ಲಿ ಆರೋಗ್ಯ ರಕ್ಷಾ ಸಮಿತಿಯ ಸಭೆ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಹಮ್ಮಿಕೊಳ್ಳಲಾಗಿತ್ತು.
ಗ್ರಾಪಂ ಅಧ್ಯಕ್ಷರೂ ಆದ ಆರೋಗ್ಯ ರಕ್ಷಾ ಸಮಿತಿ ಅಧ್ಯಕ್ಷ ಸಿ.ಎಲ್.ವಿಶ್ವ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಉಂಟಾಗಿರುವ ಸಮಸ್ಯೆ,
ಆಸ್ಪತ್ರೆಯನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಚರ್ಚೆ ನಡೆಯಿತು.
ಅರಣ್ಯ ಇಲಾಖೆಯಿಂದ ನಿರಂತರವಾಗಿ ಆರೋಗ್ಯ ಇಲಾಖೆಗೆ ನೋಟಿಸ್ ನೀಡಲಾಗುತ್ತಿದೆ. ಗ್ರಾಮದ 10/1 ರ ಸರ್ವೆ ನಂಬರ್ ನ ಪೈಸಾರಿ ಜಾಗದಲ್ಲಿ
1984 ರಲ್ಲಿ ಸ್ಥಾಪನೆಯಾದ ಆಸ್ಪತ್ರೆ ಉಳಿಸಿಕೊಳ್ಳಲು ಹೋರಾಟದ ಅಗತ್ಯವಿದೆ.
ಜಾಗ ದಾಖಲಾತಿ ನೋಂದಣಿಯಲ್ಲಿ ಲೋಪದೋಷ ಉಂಟಾದ ಪರಿಣಾಮ ಅರಣ್ಯ ಇಲಾಖೆಯು ಇದು ತಮಗೆ ಸೇರಿದ ಜಾಗ ಎಂದು ವಾದಿಸುತ್ತಿದೆ. ಈ ಬಗ್ಗೆ
ಸಂಸದರು, ಶಾಸಕರ ಗಮನಕ್ಕೆ ತಂದು ಅವರ ಮೂಲಕ ಸರಕಾರದ ಮಟ್ಟದಲ್ಲಿ ಸಮಸ್ಯೆ ಇತ್ಯರ್ಥಕ್ಕೆ ಗ್ರಾಮಸ್ಥರು ಒಗ್ಗೂಡಿ ಕಾರ್ಯನಿರ್ವಹಿಸಬೇಕಿದೆ ಎಂದು ಸಿ.ಎಲ್.ವಿಶ್ವ ತಿಳಿಸಿದರು.
ಈ ಸಂಬಂದ ಗ್ರಾಮಸ್ಥರು ಚರ್ಚಿಸಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು. ಜಿಲ್ಲಾ ಆರೋಗ್ಯ ಇಲಾಖೆ ಅಧಿಕಾರಿಗಳ ಮೇಲೆ ಒತ್ತಡ ಹೇರುವುದು, ಸೂಕ್ತ ದಾಖಲಾತಿಗಳ ಸಂಗ್ರಹ,
ಕ್ಷೇತ್ರದ ಜನಪ್ರತಿನಿಧಿಗಳ ಸಮ್ಮುಖದಲ್ಲಿ ಜನಸಂಪರ್ಕ ಸಭೆ ಹಮ್ಮಿಕೊಳ್ಳುವುದು ಸೇರಿದಂತೆ ಆಸ್ಪತ್ರೆ ಉಳಿಸಿಕೊಳ್ಳಲು ಹೋರಾಟ ರೂಪಿಸುವ ಬಗ್ಗೆ ಚರ್ಚೆ ನಡೆಯಿತು.
ಈ ಸಂದರ್ಭ ಗ್ರಾಪಂ ಉಪಾಧ್ಯಕ್ಷೆ ಕುಸುಮ, ಸದಸ್ಯ, ಆರ್.ಕೆ.ಚಂದ್ರ, ರಕ್ಷಾ ಸಮಿತಿ ಸದಸ್ಯ ಕೆ.ವಿ.ಪ್ರೇಮಾನಂದ, ಗೌಡ ಸಮಾಜದ ಸೂರ್ಯ ಕುಮಾರ್, ಕೊಡವ ಸಮಾಜದ ಪೊನ್ನಪ್ಪ, ಎಸ್.ಎನ್.ಡಿ.ಪಿ.ಯ ನವೀನ್, ವೀರಶೈವ ಸಮಾಜದ ರತೀಶ್, ಪರಿಶಿಷ್ಟ ಜಾತಿ, ಪಂಗಡದ ಪ್ರಮುಖರಾದ ಶಾಂತಕುಮಾರ್, ಕಾಳಿಂಗ, ಮುಸ್ಲಿಂ ಕಮಿಟಿಯ ಅಬ್ಬಾಸ್, ಮುಸ್ತಾಫ, ವಿದ್ಯಾಸಂಘದ ಯತೀಶ್, ಗುಳಿಗ ಗಣಪತಿ ದೇವಾಲಯ ಸಮಿತಿಯ ಭುವನ್, ವೈದ್ಯಾಧಿಕಾರಿ ಡಾ.ಪ್ರತಾಪ್ ಸಾಗರ್ ಸೇರಿದಂತೆ ಸಂಘಸಂಸ್ಥೆಗಳ ಪ್ರಮುಖರು, ಪದಾಧಿಕಾರಿಗಳು, ಗ್ರಾಮಸ್ಥರು ಇದ್ದರು.
Back to top button
error: Content is protected !!