ಕುಶಾಲನಗರ, ಡಿ 17: ಕನ್ನಡ ಸಿರಿ ಸ್ನೇಹ ಬಳಗ ಹಾಗೂ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಸಂಯುಕ್ತಾಶ್ರಯದಲ್ಲಿ ಕರ್ನಾಟಕ ಸುವರ್ಣ ಸಂಭ್ರಮದ ಅಂಗವಾಗಿ ಹುತ್ತರಿ ಕವಿಗೋಷ್ಠಿ, ವಿಚಾರಗೋಷ್ಠಿ ಹಾಗೂ ಕೃತಿ ಬಿಡುಗಡೆ ಕಾರ್ಯಕ್ರಮ ಕೂಡ್ಲೂರು ಹಳ್ಳಿಮನೆಯಲ್ಲಿ ನಡೆಯಿತು.
ಮಡಿಕೇರಿ ಕ್ಷೇತ್ರ ಶಾಸಕ ಡಾ.ಮಂಥರ್ ಗೌಡ ಕಾರ್ಯಕ್ರಮ ಉದ್ಘಾಟಿಸಿದರು. ನಂತರ ಮಾತನಾಡಿದ ಅವರು, ಕನ್ನಡ ಭಾಷೆ ಬೆಳವಣಿಗೆ, ಸಾಹಿತ್ಯದ ಉಳಿವಿನಲ್ಲಿ ಕವಿಗಳ ಪಾತ್ರ ಮಹತ್ವದ್ದಾಗಿದೆ. ಸುವರ್ಣ ಕರ್ನಾಟಕ ಸಂಭ್ರಮಾಚರಣೆ ಹಿನ್ನಲೆಯಲ್ಲಿ ಹಮ್ಮಿಕೊಂಡಿರುವ ಈ ಕಾರ್ಯಕ್ರಮ ಅತ್ಯಂತ ಮಹತ್ವಪೂರ್ಣವಾಗಿದೆ. ನದಿ, ಪರಿಸರ ಸಂರಕ್ಷಣೆಗೆ ಪೂರಕವಾದ ಸಾಹಿತ್ಯಗಳು ಇನ್ನಷ್ಟು ಹೊರಹೊಮ್ಮಬೇಕಿದೆ.
ರಾಜ್ಯದ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸಿದವರನ್ನು ಮರೆಯಬಾರದು. ಈ ಹಿನ್ನಲೆಯಲ್ಲಿ ಕುಶಾಲನಗರದಿಂದ ಮುಖ್ಯಮಂತ್ರಿಯಾಗಿ ಆಯ್ಕೆಯಾಗಿದ್ದ ಗುಂಡುರಾವ್ ಅವರ ಹೆಸರಿನಲ್ಲಿ ಕೊಡಗಿಗೆ ಮಂಜೂರಾಗಿರುವ ಏರ್ ಸ್ಟ್ರಿಪ್ ಉದ್ಘಾಟಿಸಬೇಕೆನ್ನುವ ಚಿಂತನೆ ಹೊಂದಲಾಗಿದೆ. ಸಾಹಿತಿಗಳ ಕೃತಿಗಳನ್ನು ಇ-ಬುಕ್ ಮಾದರಿಯಲ್ಲಿ ಹೊರತರುವುದರಿಂದ ಮೊಬೈಲ್, ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ಲಭ್ಯವಾಗಲು ಸಹಕಾರಿಯಾಗಲಿದೆ. ಮುಂದಿನ ದಿನಗಳಲ್ಲಿ ಇಂತಹ ಪ್ರಯತ್ನಗಳು ನಡೆಯಲಿ. ಇದಕ್ಕೆ ಅಗತ್ಯ ಸಹಕಾರ ಒದಗಿಸುವುದಾಗಿ ತಿಳಿಸಿದರು.
ಕೊಡಗಿನ ಹಬ್ಬಗಳಲ್ಲಿ ಕೃಷಿಯೊಂದಿಗಿನ ಕಲೆಗಳು ಎಂಬ ವಿಷಯದ ಕುರಿತು ವಿಜಯ ಕರ್ನಾಟಕ ದಿನಪತ್ರಿಕೆ ಸ್ಥಾನೀಯ ಸಂಪಾದಕ ಐತಿಚಂಡ ರಮೇಶ್ ಉತ್ತಪ್ಪ ವಿಚಾರ ಮಂಡಿಸಿದರು. ಕೊಡಗಿನ ಸಂಸ್ಕೃತಿ, ಆಚಾರ ವಿಚಾರ, ಕಲೆಗಳ ಹಿಂದೆ ಇರುವ ವಿಜ್ಞಾನವನ್ನು ನಾವು ಅರಿತುಕೊಳ್ಳುವ ಅಗತ್ಯವಿದೆ. ಕೊಡಗಿನ ಕೃಷಿಯಲ್ಲಿ ಜಾನಪದದ ಒಳನೋಟವಿದೆ. ಕೊಡಗಿನ ಪದ್ದತಿ, ನಡೆ, ಕಲೆಗಳಲ್ಲಿ ಪ್ರಕೃತಿಯ ಪಾಠ ಅಡಗಿದೆ. ಕಲೆಯೆಂದರೆ ಕೇವಲ ಪ್ರದರ್ಶನಕ್ಕೆ ಸೀಮಿತವಾದುದಲ್ಲ. ಕೃಷಿ ಪದ್ದತಿ, ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಹಿರಿಯರು ವೈಜ್ಞಾನಿಕತೆ, ಪ್ರಕೃತಿಯ ಪಾಠ ಕಟ್ಟಿಕೊಟ್ಟಿದ್ದಾರೆ. ಅದನ್ನು ಇಂದು ಮರೆತಿರುವ ಕಾರಣ ದುರಂತಗಳು ಸಂಭವಿಸುತ್ತಿವೆ. ಇಂದಿನ ಪೀಳಿಗೆಗೆ ಜಾನಪದ ಕಲೆ ಎಂದರೆ ಅದು ಬಡವರಿಗೆ, ಕಲಾವಿದರಿಗೆ ಮಾತ್ರ ಸೀಮಿತ ಎಂಬ ಭಾವನೆಯಿದೆ. ಈ ಮನಸ್ಥಿತಿ ಬದಲಾಗಬೇಕು. ಕೊಡಗಿನ ಜಾನಪದ, ಸಮಗ್ರ ಕಲೆಗಳ ಬಗ್ಗೆ ಅಧ್ಯಯನದ ಅಗತ್ಯವಿದೆ. ಅದರ ಸತ್ಯ, ಸತ್ವವನ್ನು ತಿಳಿಸುವ ಅನಿವಾರ್ಯತೆ ಇದೆ. ಈ ನಿಟ್ಟಿನಲ್ಲಿ ಸಾಹಿತ್ಯ ಅಕಾಡೆಮಿಗಳು, ಪುಸಕ್ತ ಪ್ರಾಧಿಕಾರಗಳಿಗೆ ಅರ್ಹ ಸಾಹಿತ್ಯಗಳ ನೇಮಕವಾಗಬೇಕಿದೆ. ಆಗ ಮಾತ್ರ ಅಲ್ಲಿ ರಾಜಕೀಯ ರಹಿತವಾಗಿ ಒಂದಷ್ಟು ಅಧ್ಯಯನಗಳು ನಡೆಸಲು ಸಾಧ್ಯವಿದೆ. ಕೊಡಗು ಜಿಲ್ಲೆಯ ಗುಂಡುರಾವ್ ಅವರ ಬಗ್ಗೆ ಜೀವನಚರಿತ್ರೆ, ಕೃತಿ ಹೊರತರುವ ನಮ್ಮ ಜವಾಬ್ದಾರಿ ಮರೆಯಬಾರದು ಎಂದರು.
ಕನ್ನಡ ಸಿರಿ ಸ್ನೇಹ ಬಳಗದ ಲೋಕೇಶ್ ಸಾಗರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಇತಿಹಾಸವನ್ನು ಮುಂದಿನ ಪೀಳಿಗೆಗೆ ಪಸರಿಸುವ ಕಾರ್ಯ ಆಗಬೇಕಿದೆ. ಸುವರ್ಣ ಕರ್ನಾಟಕ ಸಂಭ್ರಮಕ್ಕೆ ಕಾರಣೀಭೂತರಾದವರನ್ನು ಸ್ಮರಿಸಿಕೊಳ್ಳುವ ಅಗತ್ಯವಿದೆ. ಈ ಸಂಬಂಧ ಅಭಿವೃದ್ಧಿ ಹಾದಿಯ ಇತಿಹಾಸದ ಗ್ರಂಥ ರಚಿಸಿ ಲೋಕಾರ್ಪಣೆಗೊಳಿಸಲಾಗುವುದು. ಸಾಹಿತಿಗಳು,ಹಾಡುಗಾರರು, ಕೃತಿಕಾರರನ್ನು ಗುರುತಿಸಿ ಪ್ರೋತ್ಸಾಹಿಸುವ ಅಗತ್ಯವಿದೆ ಎಂದರು.
ಕಿಗ್ಗಾಲು ಗಿರೀಶ್ ರಚಿತ ನಗುವೆಂಗ ಟಾನಿಕ್ ಕೃತಿ ಬಿಡುಗಡೆ ಮಾಡಿದ ವಿ.ಪಿ.ಶಶಿಧರ್ ಮಾತನಾಡಿ, ಎಲ್ಲರನ್ನೂ ಒಗ್ಗೂಡಿಸಿ, ಮನುಷ್ಯ ಪ್ರೀತಿಯನ್ನು ಸಮಾಜಕ್ಕೆ ಉಣಬಡಿಸುವ ಅಗತ್ಯತೆ ಜಗತ್ತಿಗೆ ಅನಿವಾರ್ಯವಾಗಿದೆ. ನಮ್ಮತನ ಕಾಪಾಡಿ ಇತರನ್ನು ಗೌರವಿಸುವ ಕೆಲಸ ಇಂತಹ ಕಾರ್ಯಕ್ರಮಗಳ ಮೂಲಕ ನೆರವೇರಬೇಕಿದೆ ಎಂದರು.
ಕಾಂಗ್ರೆಸ್ ಮುಖಂಡ, ಉದ್ಯಮಿ ಕೆ.ಕೆ.ಮಂಜುನಾಥ್ ಕುಮಾರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಈ ಸಂದರ್ಭ ಬಳಗದ ಪ್ರಮುಖರಾದ ಫಿಲಿಪ್ ವಾಸ್, ಸಿ.ಟಿ.ಸೋಮಶೇಖರ್, ಸಾಹಿತಿಗಳಾದ ಕಿಗ್ಗಾಲು ಗಿರೀಶ್, ಮಾಲಾದೇವಿ, ಜಗದೀಶ್ ಜೋಡುಬೀಟಿ, ಸಂಗೀತ ರವಿರಾಜ್, ರಾಣಿ ರವೀಂದ್ರ, ಟೋಮಿ ಥಾಮಸ್, ಕುಡೆಕಲ್ ಸಂತೋಷ್, ಎಂ.ಡಿ.ರಂಗಸ್ವಾಮಿ ಮತ್ತಿತರರು ಇದ್ದರು.
ಮಡಿಕೇರಿ ಮಹಿಳಾ ಕಾಲೇಜು ಪ್ರಾಧ್ಯಾಪಕಿ ಕೋರನ ಸರಸ್ವತಿ ಅಧ್ಯಕ್ಷತೆಯಲ್ಲಿ ಕವಿಗೋಷ್ಠಿ ನಡೆಯಿತು. ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಕವಿಗಳು ತಮ್ಮ ಕವನ ವಾಚಿಸಿದರು.
Back to top button
error: Content is protected !!