ಸಭೆ
ಪುರಸಭೆ ಬಜೆಟ್ ಮಂಡನೆ: ಗದ್ದಲದ ನಡುವೆ ಅನುಮೋದನೆ
ಕುಶಾಲನಗರ, ಮಾ 24; ಕುಶಾಲನಗರ ಪುರಸಭೆಯ 2023-24ನೇ ಸಾಲಿನ ಬಜೆಟ್ ಮಂಡನಾ ಸಭೆ ನಡೆಯಿತು.
ಪುರಸಭೆ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಅಧ್ಯಕ್ಷ ಬಿ.ಜೈವರ್ಧನ್ ತಮ್ಮ ಅಧ್ಯಕ್ಷಾವಧಿಯಲ್ಲಿ ಮೂರನೇ ಬಾರಿಗೆ ರೂ 25 ಲಕ್ಷಗಳ ಉಳಿತಾಯ ಬಜೆಟ್ ಮಂಡಿಸಿದರು.
2023-24ನೇ ಸಾಲಿನ ನಿರೀಕ್ಷಿತ ಆದಾಯ ರೂ 22,31,06,928, ನಿರೀಕ್ಷಿತ ಖರ್ಚು 22, 05, 50,000 ಕಳೆದು 25,56,928 ರೂಗಳ ಉಳಿತಾಯ ಬಜೆಟ್ ಮಂಡಿಸಿ, ಆಡಳಿತ ಮಂಡಳಿ ಅನುಮೋದನೆ ಕೋರಿದರು.
ಇದೇ ಸಂದರ್ಭ ಮಧ್ಯಪ್ರವೇಶಿಸಿದ ಸದಸ್ಯ ಪ್ರಮೋದ್ ಮುತ್ತಪ್ಪ ಮಾತನಾಡಿ, ಶುಕ್ರವಾರ ಬೆಳಗ್ಗೆ ನಡೆದ ಪುರಸಭೆ ವಾಣಿಜ್ಯ ಸಂಕೀರ್ಣ ಉದ್ಘಾಟನೆ ಕಾರ್ಯಕ್ರಮದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು. ವಾಣಿಜ್ಯ ಸಂಕೀರ್ಣ ಕಾಮಗಾರಿ ಪೂರ್ಣಗೊಳ್ಳದಿದ್ದರೂ ತರಾತುರಿಯಲ್ಲಿ ಉದ್ಘಾಟನೆ ಮಾಡಿರುವ ಕ್ರಮ ಖಂಡಿಸಿದರು.
ಈ ನಡುವೆ ಕುಶಾಲನಗರ ಪುರಸಭೆಗೆ ಶಾಸಕರು ಯಾವುದೇ ವಿಶೇಷ ಅನುದಾನ ಒದಗಿಸಿಲ್ಲ ಎಂದು ಆರೋಪಿಸಿದ ಪ್ರಮೋದ್ ಮುತ್ತಪ್ಪ, ಶಾಸಕರ ಕೊಡುಗೆ ಶೂನ್ಯ ಎಂದರು. ಈ ಸಂಬಂಧ ಸಭೆಯಲ್ಲಿ ಆಡಳಿತ ಮತ್ತು ವಿರೋಧ ಪಕ್ಷಗಳ ಸದಸ್ಯರ ನಡುವೆ ಪರಸ್ಪರ ವಾಗ್ವಾದ ನಡೆಯಿತು. ಗೊಂದಲಗಳ ನಡುವೆ ಬಜೆಟ್ ಗೆ ಅನುಮೋದನೆ ನೀಡಲಾಯಿತಾದರೂ ಕಾಂಗ್ರೆಸ್ ಸದಸ್ಯರು ಬಜೆಟ್ ಬಗ್ಗೆ ನೀರಸ ಪ್ರತಿಕ್ರಿಯೆ ವ್ಯಕ್ತಪಡಿಸಿದರು.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಪುರಸಭೆ ಅಧ್ಯಕ್ಷ ಬಿ.ಜೈವರ್ಧನ್, ಹಿಂದಿನ ಬಜೆಟ್ ನಲ್ಲಿ ಹಾಕಿಕೊಂಡ ಅಭಿವೃದ್ಧಿ ಕಾರ್ಯಗಳು, ಯೋಜನೆಗಳು ಶಾಸಕರು, ಅಧಿಕಾರಿ, ಸಿಬ್ಬಂದಿ ವರ್ಗ, ಸಾರ್ವಜನಿಕರ ಸಹಕಾರದಿಂದ ಪರಿಣಾಮಕಾರಿಯಾಗಿ ಅನುಷ್ಠಾನಗೊಂಡಿವೆ. ಪುರಸಭೆ ರಚನೆಯಾದ ಬಳಿಕ ಹೆಚ್ಚುವರಿ ವ್ಯಾಪ್ತಿಗೆ ಅಗತ್ಯ ಮೂಲಭೂತ ಸೌಕರ್ಯಗಳು ವೈಜ್ಞಾನಿಕವಾಗಿ ಆಗಬೇಕಿದೆ. ಆದಾಯ, ಅನುದಾನ, ತೆರಿಗೆಗಳನ್ನು ಬಳಸಿಕೊಂಡು ಮೂಲಭೂತ ಸೌಲಭ್ಯ, ಅಭಿವೃದ್ಧಿ ಕಾಮಗಾರಿಗಳೊಂದಿಗೆ
ಪುರಸಭೆಯನ್ನು ಆರ್ಥಿಕವಾಗಿ ಸದೃಢಗೊಳಿಸುವುದು ಸೇರಿದಂತೆ ಸ್ತಿರಾಸ್ತಿ ನಿರ್ಮಾಣಕ್ಕೆ ಒತ್ತು ನೀಡಲಾಗಿದೆ ಎಂದರು.
ಆದಾಯ ದೃಷ್ಠಿಯಿಂದ ವಾಣಿಜ್ಯ ಸಂಕೀರ್ಣದ ಕೇವಲ ಮಳಿಗೆಗಳನ್ನು ಮಾತ್ರ ಉದ್ಘಾಟಿಸಲಾಗಿದ್ದು ಕಛೇರಿ ಉದ್ಘಾಟನೆ ಕಾರ್ಯ ನಡೆಸಲಾಗುತ್ತದೆ ಎಂದರು. ಪುರಸಭೆ ಉಪಾಧ್ಯಕ್ಷೆ ಸುರಯ್ಯಭಾನು,ಮುಖ್ಯಾಧಿಕಾರಿ ಶಿವಪ್ಪನಾಯಕ್, ಸದಸ್ಯರುಗಳು ಸೇರಿದಂತೆ ಅಭಿಯಂತರ ರಂಗರಾಮ್, ಆರೋಗ್ಯ ನಿರೀಕ್ಷಕ ಉದಯ್, ಸಿಬ್ವಂದಿಗಳಾದ ಶಕೀಲ್, ನಂಜುಂಡ ಮತ್ತಿತರರು ಇದ್ದರು.