ಸಭೆ

ರೈಲ್ವೇ ಬ್ಯಾರಿಕೆಡ್ ಕಾಮಗಾರಿ ಅವೈಜ್ಞಾನಿಕ, ರಸಲ್ಪುರದಲ್ಲಿ ಆನೆ ಕಾರಿಡಾರ್ ಗೆ ವಿರೋಧ

ಕುಶಾಲನಗರ, ನ 08: ಮಾನವ-ವನ್ಯಜೀವಿ (ಆನೆ-ಮಾನವ) ಸಂಘರ್ಷಕ್ಕೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ರಾಜ್ಯ ಸರಕಾರ ರಚಿಸಿದ ಅರಣ್ಯ ಇಲಾಖೆ ಅಧಿಕಾರಿಗಳ ವಿಶೇಷ ಸಮಿತಿ ನಂಜರಾಯಪಟ್ಟಣ ಗ್ರಾಪಂ ವ್ಯಾಪ್ತಿಯ ಹೊಸಪಟ್ಟಣ ಸಮುದಾಯ ಭವನದಲ್ಲಿ ಸಭೆ ನಡೆಸಿತು.
ರೈತರು, ಬೆಳೆಗಾರರು, ಗ್ರಾಮಸ್ಥರಿಗೆ ಕಾಡಾನೆಗಳು ಸೇರಿದಂತೆ ವನ್ಯಜೀವಿಗಳಿಂದ ಉಂಟಾಗುತ್ತಿರುವ ಸಮಸ್ಯೆಗಳ ಬಗ್ಗೆ ಅಧಿಕಾರಿಗಳು ಸಭೆಯಲ್ಲಿ ಮಾಹಿತಿ ಪಡೆದರು.
ಅರಣ್ಯ ಇಲಾಖೆ ಪ್ರಧಾನ‌ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ರಾಜ್ ಕಿಶೋರ್ ಸಿಂಗ್ ನೇತೃತ್ವದ ಸಮಿತಿ ಸಮಸ್ಯೆಗಳು, ಅಹವಾಲುಗಳು, ಬೇಡಿಕೆಗಳು, ಪರಿಹಾರ ಕ್ರಮಗಳನ್ನು ಆಲಿಸಿತು.
ಸಭೆಯ ಆರಂಭದಲ್ಲಿ ಗ್ರಾಮಸ್ಥರು, ಬೆಳೆಗಾರರು, ರೈತಾಪಿ ವರ್ಗದವರು ಸಭೆಯ ವಿರುದ್ದ ಹರಿಹಾಯ್ದರು. ಕಾಟಾಚಾರಕ್ಕೆ ಸಭೆ ಹಮ್ಮಿಕೊಳ್ಳಲಾಗಿದೆ. ಸಭೆ ನಡೆಯುವ ಬಗ್ಗೆ ಸ್ಥಳೀಯ ಅಧಿಕಾರಿಗಳು ಗ್ರಾಮಸ್ಥರಿಗೆ ಸಮರ್ಪಕ ಮಾಹಿತಿ‌ ನೀಡಿಲ್ಲ. ಆದ್ದರಿಂದ ಹೆಚ್ಚಿನ ಸಂಖ್ಯೆಯಲ್ಲಿ ನೊಂದವರು ಸೇರಲು ಸಾಧ್ಯವಾಗಿಲ್ಲ ಎಂದು ಆಕ್ರೋಷ ವ್ಯಕಪಡಿಸಿದರು.
ಇದೇ ಸಂದರ್ಭ ಸಭೆಯಲ್ಲಿ ಪಾಲ್ಗೊಂಡಿದ್ದ ಶಾಸಕ ಅಪ್ಪಚ್ಚುರಂಜನ್ ಅವರು ಮಾತನಾಡಿ, ಅರಣ್ಯ ಇಲಾಖೆ ತುರ್ತಾಗಿ ಸಭೆ ಕರೆದಿರುವುದು ತಪ್ಪು‌ ನಿರ್ಧಾರ ಎಂದರು.
ಸಮಯದ ಅಭಾವದಿಂದ ತುರ್ತಾಗಿ ಸಭೆ ಕರೆಯಲಾಗಿದೆ ಎಂದು ತಿಳಿದುಬಂದಿದೆ. ಸಭೆ ಬಗ್ಗೆ ತನಗೂ ತಡವಾಗಿ‌ ಮಾಹಿತಿ‌ ಲಭಿಸಿದೆ ಎಂದು ನೆರೆದಿದ್ದವರನ್ನು ಸಮಾಧಾನಿಸಿದರು.
ಸಭೆಯಲ್ಲಿ ಕೂರ್ಗ್ ವೈಲ್ಡ್ ಲೈಫ್ ಸೊಸೈಟಿಯ ಕರ್ನಲ್ ಮುತ್ತಣ್ಣ ಅವರು ಮಾತನಾಡಿ, ಕೆಲವು ಸಲಹೆಗಳು‌ ನೀಡಿದ ಸಂದರ್ಭ ಬೆಳೆಗಾರರು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ಎನ್ ಜಿ ಒ ಗಳನ್ನು ಹೊರಗಿಟ್ಟು ಸಭೆ ನಡೆಸುವಂತೆ ತಾಕೀತು ಮಾಡಿದರು.
ಬೆಳೆಗಾರ ನಂದ ಸುಬ್ಬಯ್ಯ ಮಾತನಾಡಿ, ಎನ್ ಜಿ ಒ‌ ಗಳನ್ನು ಸಭೆಯಿಂದ ದೂರವಿಡಿ. ಕಾಡಾನೆ, ವನ್ಯಜೀವಿಗಳ ಸಂಖ್ಯೆ ಹೆಚ್ಚಳವಾಗುತ್ತಿದೆ. ಈ ಬಗ್ಗೆ ಅಗತ್ಯ ಗಮನಹರಿಸಬೇಕು. ಕೇವಲ ಕಾಡಾನೆಗಳು ಮಾತ್ರವಲ್ಲ, ಮಂಗ, ಕಾಡುಕೋಣ, ಚಿರತೆ, ನವಿಲು, ಕಾಡಂದಿಗಳ ಹಾವಳಿಯೂ ಹೆಚ್ಚಾಗಿದೆ ಎಂದು ಆರೋಪಿಸಿದರು.
ವಾಲ್ನೂರು ತ್ಯಾಗತ್ತೂರು ಗ್ರಾಪಂ ಸದಸ್ಯ ಮನು ಮಹೇಶ್, ನದಿ ದಡದಲ್ಲಿ 8 ಕಿಮೀ ವ್ಯಾಪ್ತಿಯಲ್ಲಿ ಕೈಗೊಂಡಿರುವ ರೈಲ್ವೇ ಬ್ಯಾರಿಕೆಡ್ ನಿರ್ಮಾಣ ಕಾಮಗಾರಿಯಲ್ಲಿ ಒಟ್ಟು‌ ಮೂರು ಪಟ್ಟಿ ಅಳವಡಿಸಲು ಕೋರಿದರು.
ರಸಲ್ ಪುರ ನಿವಾಸಿ ರವಿ ಮಾತನಾಡಿ, ಕಾಡಾನೆಗಳಿಂದ ನಾಶವಾದ ಬೆಳೆಗಳಿಗೆ ಸೂಕ್ತ ಪರಿಹಾರವಿಲ್ಲ, ಕಂದಕಗಳ‌ ನಿರ್ಮಾಣದಿಂದ ಮಳೆ ನೀರು ಹರಿವಿಗೆ ಅಡ್ಡಿಯಾಗಿದೆ. ರಸಲ್ ಪುರದಲ್ಲಿ ಆನೆ ಕಾರಿಡಾರ್ ಗೆ ಸರ್ವೆ ಮಾಡಲಾಗಿದೆ. ಈ ಬಗ್ಗೆ ರೈತರಿಗೆ ಮಾಹಿತಿ‌ ಇಲ್ಲ. ಇದನ್ನು ಕೈಬಿಡಬೇಕು. ಸುತ್ತಲೂ ಅರಣ್ಯ ಪ್ರದೇಶ ಮಧ್ಯದಲ್ಲಿ ಕೃಷಿಕರ ಬದುಕು ಹೈರಾಣಾಗಿದೆ ಎಂದು ಅಳಲು ವ್ಯಕ್ತಪಡಿಸಿದರು.
ನಂಜರಾಯಪಟ್ಟಣ ಗ್ರಾಪಂ ಅಧ್ಯಕ್ಷ ಸಿ.ಎಲ್.ವಿಶ್ವ ಮಾತನಾಡಿ, ಈ ಭಾಗದಲ್ಲಿ‌ ಕಾಡಾನೆ ಹಾವಳಿ‌ ಮಿತಿಮೀರಿದೆ. ಬೆಳೆನಾಶ, ಜೀವ ಹಾನಿಗಳು ನಿರಂತರವಾಗಿದೆ. ಅರಣ್ಯ ಇಲಾಖೆಯಿಂದ ಕೈಗೊಂಡ ರೈಲ್ವೇ ಕಂಬಿ ಅಳವಡಿಕೆ ಕಾಮಗಾರಿ ವೈಜ್ಞಾನಿಕವಾಗಿದ್ದು ಈ ಬಗ್ಗೆ ಸೂಕ್ತವಾಗಿ ಗಮನಹರಿಸಲು ಕೋರಿದರು.
ಗ್ರಾಪಂ ಸದಸ್ಯ ಆರ್.ಕೆ.ಚಂದ್ರ ಮಾತನಾಡಿ, ಆನೆ‌ಕಂದಕಗಳು, ಸೋಲಾರ್ ಫೆನ್ಸ್ ಪರಿಣಾಮ ಕಾರಿಯಾಗಿಲ್ಲ. ಈ‌ ನಡುವೆ ಆನೆ ಕಾರಿಡಾರ್ ಹೆಸರಿನಲ್ಲಿ ಸಣ್ಣ ರೈತರನ್ನು ಬೀದಿಪಾಲು ಮಾಡುವ ಹುನ್ನಾರ ನಡೆಯುತ್ತಿದೆ ಎಂದರು ಆರೋಪಿಸಿದರು.
ಸಂಘಟನೆಗಳು, ಸಂಘಸಂಸ್ಥೆಗಳ ಪ್ರಮುಖರು ಮಾತನಾಡಿ ಸಲಹೆ ಸೂಚನೆಗಳನ್ನು ನೀಡಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಶಾಸಕ ಅಪ್ಪಚ್ಚುರಂಜನ್, ಕಾಡಿನಲ್ಲಿ‌ ಅಗತ್ಯ ಪ್ರಮಾಣದಲ್ಲಿ ಆನೆಗಳಿಗೆ ಆಹಾರ ಲಭಿಸುತ್ತಿಲ್ಲ. ಅರಣ್ಯ ಇಲಾಖೆ ಬಿದಿರು ಮತ್ತಿತರ ಆಹಾರಕ್ಕೆ ಪೂರಕವಾದ ಗಿಡಗಳನ್ನು ನೆಡುವುದು, ಅಗತ್ಯ ಪ್ರಮಾಣದ ಕೆರೆಗಳ ನಿರ್ಮಾಣಕ್ಕೆ ಕ್ರಮಕೈಗೊಳ್ಳಬೇಕು. ಕಾಡಾನೆ ಸಮಸ್ಯೆ ಬಗ್ಗೆ ಕಳೆದ 20 ವರ್ಷಗಳಿಂದಲೂ ವಿಧಾನಸಭೆಯಲ್ಲಿ ಪ್ರಸ್ತಾಪ ಮಾಡುತ್ತಾ ಬರುತ್ತಿದ್ದೇನೆ. ಇದುವರೆಗೆ ಶಾಶ್ವತ ಪರಿಹಾರ ಲಭಿಸಿಲ್ಲ ಎಂದರು.
ಬಳಿಕ ಮಾತನಾಡಿದ ಪಿಸಿಸಿಎಫ್ ರಾಜ್ ಕಿಶೋರ್ ಸಿಂಗ್, ತಮಗೆ ದೊರೆತ ಸಲಹೆ, ಸೂಚನೆ, ಸಮಸ್ಯೆಗಳ ಬಗ್ಗೆ ಸಮರ್ಪವಾದ ವರದಿ ಸಿದ್ದಪಡಿಸಿ ಸರಕಾರಕ್ಕೆ ಸಲ್ಲಿಸಲಾಗುವುದು ಎಂದು ತಿಳಿಸಿದರು. ಸಣ್ಣ ಪುಟ್ಟ ಸಮಸ್ಯೆಗಳನ್ನು ಕೂಡಲೆ ಬಗೆಹರಿಸಲು ಕ್ರ.ಕೈಗೊಳ್ಳಲಾಗುವುದು. ಕೆಲವೊಂದು ಶಾಶ್ವತ ಪರಿಹಾರ ಕ್ರಮಗಳನ್ನು ಕೈಗೊಳ್ಳಲು ಸಮಯ ಹಿಡಿಯಲಿದೆ ಎಂದು ಸಭೆಗೆ ತಿಳಿಸಿದರು.
ಈ ಸಂದರ್ಭ ವಿಶೇಷ ಸಮಿತಿಯ ವಿವಿಧ ವಿಭಾಗಗಳ ಎಪಿಸಿಸಿಎಫ್ ಗಳಾದ ಬ್ರಿಜೇಶ್ ಕುಮಾರ್, ರಂಗರಾವ್, ಶಾಶ್ವತಿ‌ ಮಿಶ್ರಾ, ಕೊಡಗು ವೃತ್ತದ ಸಿಸಿಎಫ್ ಬಿ.ಎನ್.ಎನ್.ಮೂರ್ತಿ, ಮಡಿಕೇರಿ ವಿಭಾಗ ಡಿಸಿಎಫ್ ಗಳಾದ ಎ.ಟಿ.ಪೂವಯ್ಯ, ಶಿವರಾಂ ಬಾಬು, ಎಸಿಎಫ್ ಗಳಾದ ಎ.ಎ.ಗೋಪಾಲ್, ಮೊಹಿಸಿನ್ ಭಾಷಾ, ವಿವಿಧ ವಲಯಗಳ ಆರ್.ಎಫ್.ಒ, ಡಿ.ಆರ್.ಎಫ್ ಒ ಗಳು ಇದ್ದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!