ಸಭೆ

ಶಾಸಕರ ಸಮ್ಮುಖದಲ್ಲಿ ಪೂರ್ವಭಾವಿ ಸಭೆ

ಕುಶಾಲನಗರ, ನ 28: ಶ್ರೀ ಹನುಮ ದಶಮಂಟಪಗಳ ಸೇವಾ ಟ್ರಸ್ಟ್ (ರಿ) ಕುಶಾಲನಗರ ವತಿಯಿಂದ ಕುಶಾಲನಗರದ ಮಹಾಲಕ್ಷ್ಮಿ ರೆಸಿಡೆನ್ಸಿ*ಯಲ್ಲಿ ಹನುಮ ಜಯಂತಿ ಪೂರ್ವಭಾವಿ ಸಭೆ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಂ.ಡಿ. ಕೃಷ್ಣಪ್ಪ ವಹಿಸಿದ್ದರು.

ಸಭೆಯಲ್ಲಿ ಮಾತನಾಡಿದ ಎಂ.ಡಿ. ಕೃಷ್ಣಪ್ಪ ಅವರು, ಹನುಮ ಜಯಂತಿ ಆಚರಣೆ ಈ ಬಾರಿ 8ನೇ ವರ್ಷಕ್ಕೆ ಪಾದಾರ್ಪಣೆ ಮಾಡಿದೆ. ಈ ಕಾರ್ಯಕ್ರಮವನ್ನು ಇನ್ನೂ ಹೆಚ್ಚು ಜೋರಾಗಿ, ಇಡೀ ರಾಜ್ಯದ ಜನ ಕುಶಾಲನಗರದ ಕಡೆಗೆ ಗಮನ ಕೊಡುವಂತೆ ಉತ್ತಮವಾದ ಕಾರ್ಯಕ್ರಮವಾಗಿ ಆಯೋಜಿಸಬೇಕು ಎಂಬ ದೃಷ್ಟಿಯಿಂದ ಶಾಸಕರ ನೇತೃತ್ವದಲ್ಲಿ ಇಂದು ಪೂರ್ವಭಾವಿ ಸಭೆ ಕರೆಯಲಾಗಿದೆ ಎಂದರು.

ಡಿಸೆಂಬರ್ 22 ರಂದು ಹನುಮ ಜಯಂತಿ ಹಬ್ಬವನ್ನು ಆಚರಣೆ ಮಾಡಬೇಕು. ಆ ತಯಾರಿಯ ಉದ್ದೇಶದಿಂದ ಈ ಸಭೆ ಕರೆಯಲಾಗಿದೆ ಎಂದು ಅವರು ತಿಳಿಸಿದರು.

ಕಳೆದ ಬಾರಿ ಆದಂತಹ ಸಮಸ್ಯೆಗಳಾದ ಮರದ ಕೊಂಬೆಗಳನ್ನು ಕಡಿಯುವುದು, ಕೆಇಬಿ ಸಂಬಂಧಿತ ಸಮಸ್ಯೆಗಳು ಸೇರಿದಂತೆ ಬೇರೆ ಬೇರೆ ರೀತಿಯಲ್ಲಿ ಆಗಿರುವ ತೊಂದರೆಗಳನ್ನು ಈಗಲೇ ಸಭೆಯಲ್ಲಿ ತಿಳಿಸಿದರೆ, ಮುಂದೆ ನಡೆಯುವ ಅಧಿಕಾರಿಗಳ ಸಭೆಯಲ್ಲಿ ಶಾಸಕರ ನೇತೃತ್ವದಲ್ಲಿ ಮತ್ತೊಮ್ಮೆ ಸಭೆ ಸೇರಿ ಅದಕ್ಕೆ ಪರಿಹಾರ ಕಂಡುಕೊಳ್ಳಬಹುದು ಎಂದರು. ಆದ್ದರಿಂದ ಎಲ್ಲಾ ಮಂಟಪಗಳ ಪದಾಧಿಕಾರಿಗಳು ತಮ್ಮ ಅಭಿಪ್ರಾಯಗಳನ್ನು, ಸಮಸ್ಯೆಗಳನ್ನು ಸಭೆಯಲ್ಲಿ ಮುಕ್ತವಾಗಿ ಹೇಳಬೇಕು ಎಂದು ಕೃಷ್ಣಪ್ಪ ಅವರು ಮನವಿ ಮಾಡಿದರು.

*ಶಾಸಕ ಡಾ. ಮಂತರ್ ಗೌಡ ಮಾತನಾಡಿ:*
ಹನುಮ ಜಯಂತಿ ಮಹೋತ್ಸವವನ್ನು ಅತ್ಯಂತ ಶಿಸ್ತುಬದ್ಧವಾಗಿ, ಸುರಕ್ಷಿತವಾಗಿ ಹಾಗೂ ಎಲ್ಲಾ ಸಮುದಾಯಗಳ ಸಹಕಾರದೊಂದಿಗೆ ಆಚರಿಸಬೇಕು ಎಂದು ಮಡಿಕೇರಿ ಕ್ಷೇತ್ರದ ಶಾಸಕ ಡಾ. ಮಂತರ್ ಗೌಡ ಅವರು ಕರೆ ನೀಡಿದರು.

*ಸಮಯ ಪಾಲನೆ ಅತಿಮುಖ್ಯ:*
ಪ್ರತಿಯೊಂದು ಟ್ಯಾಬ್ಲೋ ಪ್ರದರ್ಶನಕ್ಕೂ ನಿಗದಿತ ಸಮಯವನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. 10-15 ನಿಮಿಷ ಹೆಚ್ಚು-ಕಡಿಮೆ ಆಗಬಹುದು, ಆದರೆ ಒಂದು ಗಂಟೆ ವ್ಯತ್ಯಾಸವಾದರೆ ಉತ್ಸವ ಮೂರ್ತಿಗೆ ಹಾಗೂ ಇತರ ತಂಡಗಳಿಗೆ ಸಮಸ್ಯೆಯಾಗುತ್ತದೆ. ಸಮಯ ಮೀರಿ ಬೇರೆಯವರಿಗೆ ತೊಂದರೆ ಕೊಡಬಾರದು ಎಂದು ಶಾಸಕರು ತಿಳಿಸಿದರು.

*ಸುರಕ್ಷತೆಗೆ ಮೊದಲ ಆದ್ಯತೆ:*
ಒಂದೊಂದು ಟ್ಯಾಬ್ಲೋದಲ್ಲಿ ಸ್ಥಳೀಯ 100 ಜನ ಯುವಕರು, ಜೊತೆಗೆ ಹೊರಗಿನಿಂದ ಬಂದ 200-300 ಜನ ವೀಕ್ಷಕರು ಇರುತ್ತಾರೆ. ವೆಲ್ಡಿಂಗ್, ಫ್ಲೇಮ್ಸ್, ಸ್ಮೋಕ್ ಮೆಷಿನ್, ಹೈಡ್ರಾಲಿಕ್ ವೈಫಲ್ಯದಂತಹ ಅಪಾಯಗಳಿವೆ. ಆದ್ದರಿಂದ ಟ್ರಯಲ್ ಅನ್ನು ಒಂದೆರಡು ದಿನ ಮುಂಚೆಯೇ ಮುಗಿಸಬೇಕು. ಕೊನೆಯ 10 ನಿಮಿಷದವರೆಗೂ ಕೆಲಸ ಮಾಡುವ ಅಭ್ಯಾಸ ಬಿಡಬೇಕು. ಯುವಕರಿಗೆ ಸುರಕ್ಷತಾ ಕ್ರಮಗಳ ಬಗ್ಗೆ ಸಮಿತಿಯವರು ತಿಳಿಸಬೇಕು. ದೇವರ ಮೇಲೆ ಹಾಕದೆ ನಾವೇ ಜವಾಬ್ದಾರಿ ತೆಗೆದುಕೊಳ್ಳಬೇಕು. ಸೇಫ್ಟಿ ಬಹಳ ಮುಖ್ಯ ಎಂದರು.

*ಪಾರ್ಕಿಂಗ್ ವ್ಯವಸ್ಥೆ:*
ಹಬ್ಬದ ದಿನ ಸಾರ್ವಜನಿಕರಿಗೆ, ವಾಣಿಜ್ಯ ಮಳಿಗೆಗಳಿಗೆ ತೊಂದರೆಯಾಗದಂತೆ ಪಾರ್ಕಿಂಗ್ ವ್ಯವಸ್ಥೆ ಮಾಡಬೇಕು. ಜಿ.ಪಿ. ಶಾಲೆ ಅಥವಾ ಗುಂಡೂರಾವ್ ಲೇಔಟ್‌ನಲ್ಲಿ ಪಾರ್ಕಿಂಗ್ ವ್ಯವಸ್ಥೆ ಮಾಡುವ ಬಗ್ಗೆ ಸಲಹೆ ನೀಡಿದರು.

*ಇದು ಊರ ಹಬ್ಬ:*
ಇದು ಯಾವುದೋ ಒಂದು ಸಮುದಾಯದ ಹಬ್ಬವಲ್ಲ, ಎಲ್ಲಾ ಜನಾಂಗದವರು, ಎಲ್ಲಾ ಜಾತಿಯವರು ಸೇರಿಕೊಂಡು ಮಾಡುತ್ತಿರುವ ಊರ ಹಬ್ಬ. ಎಲ್ಲರೂ ಸೇರಿಕೊಂಡು ಹಬ್ಬವನ್ನು ಯಶಸ್ವಿಗೊಳಿಸೋಣ ಎಂದು ಶಾಸಕರು ಮನವಿ ಮಾಡಿದರು.

ಎಚ್‌ಆರ್‌ಪಿ ಕಾಲೋನಿಯಲ್ಲಿ ನೂತನ ರಸ್ತೆ ಕಾಮಗಾರಿ ಸಂದರ್ಭದಲ್ಲಿ ಮರವನ್ನು ಸಂಪೂರ್ಣ ತೆಗೆಯದೆ ಉಳಿಸಿ, ಡ್ರೈನೇಜ್ ಹಾಗೂ ರಸ್ತೆಯನ್ನು ಸ್ವಲ್ಪ ಕಿರಿದಾಗಿಯಾದರೂ ಹೊಂದಾಣಿಕೆ ಮಾಡಿಕೊಂಡು ಅನುಕೂಲ ಮಾಡಿಕೊಡುವ ಪ್ರಯತ್ನ ಮಾಡುವುದಾಗಿ ಶಾಸಕರು ಈ ಸಂದರ್ಭದಲ್ಲಿ ಭರವಸೆ ನೀಡಿದರು.

*ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ವಿ.ಪಿ. ಶಶಿಧರ್ ಮಾತನಾಡಿ:*
ಇದು ನಮ್ಮೆಲ್ಲರ ಜಾತ್ರೆ, ನಮ್ಮೂರ ಜಾತ್ರೆ. ಇದನ್ನು ನಾವು ನಾಡ ಹಬ್ಬದ ರೂಪದಲ್ಲಿ ಬೆಳೆಸಿಕೊಂಡು ಬಂದಿದ್ದೇವೆ. ಪ್ರತಿಯೊಬ್ಬರೂ ಕೂಡ ಇದರಲ್ಲಿ ಧಾರ್ಮಿಕ ಹಾಗೂ ಆಧ್ಯಾತ್ಮಿಕ ಭಕ್ತಿ ಭಾವನೆಯಿಂದ ಭಾಗವಹಿಸಬೇಕು. ಹನುಮ ಜಯಂತಿಯನ್ನೂ ಅದೇ ಭಕ್ತಿ, ಅದೇ ಶ್ರದ್ಧೆಯಿಂದ ಆಚರಿಸಬೇಕು ಎಂಬುದು ಎಲ್ಲರ ಆಶಯ ಎಂದರು.

ಈ ಹಬ್ಬ ಕೇವಲ ಒಂದು ಸಮುದಾಯಕ್ಕೆ ಸೀಮಿತವಾಗಿಲ್ಲ. ಎಲ್ಲರನ್ನೂ ಒಳಗೊಳ್ಳುವ, ಎಲ್ಲರಿಗೂ ಭಾಗವಹಿಸುವ ಪ್ರೇರಣೆ ನೀಡುವ ವಾತಾವರಣ ಇಲ್ಲಿ ನಿರ್ಮಾಣವಾಗಿದೆ. ಹಾಗಾಗಿ ಇದು ಇಂದು ಎಲ್ಲರ ಹಬ್ಬವಾಗಿ, ಮನೆ ಮನೆಯ ಹಬ್ಬವಾಗಿ ಪರಿವರ್ತನೆಗೊಂಡಿದೆ. ಇತ್ತೀಚಿನ ವರ್ಷಗಳಲ್ಲಿ ಅತ್ಯಂತ ಸಫಲವಾಗಿ, ಅಚ್ಚುಕಟ್ಟಾಗಿ ನಡೆಯುತ್ತಿದೆ ಎಂದರು.

ಹೊರ ಊರುಗಳಿಂದ ಬಂದವರು ನಮ್ಮ ಊರಿನ ಐಕ್ಯತೆ, ಸೌಹಾರ್ದತೆ ಮತ್ತು ಒಗ್ಗಟ್ಟನ್ನು ಕಂಡು ಮೆಚ್ಚುಗೆ ವ್ಯಕ್ತಪಡಿಸುತ್ತಾರೆ. ಈ ಆಚರಣೆಯಲ್ಲಿ ಎದುರಾಗುವ ಸಣ್ಣ-ಪುಟ್ಟ ಅಡಚಣೆಗಳನ್ನು, ಅನಾನುಕೂಲಗಳನ್ನು ಹೇಗೆ ಕಡಿಮೆ ಮಾಡಿಕೊಳ್ಳಬಹುದು ಎಂಬುದೇ ಈ ಸಭೆಯ ಮುಖ್ಯ ಉದ್ದೇಶ ಎಂದು ಅವರು ತಿಳಿಸಿದರು.

ತಾಂತ್ರಿಕ ತೊಂದರೆಗಳು, ಸಂಚಾರ ದಟ್ಟಣೆ ಮತ್ತು ಪ್ರತಿಕೂಲ ಸನ್ನಿವೇಶಗಳನ್ನು ಮೊದಲೇ ಸರಿಪಡಿಸಿಕೊಳ್ಳಬೇಕು. ಕಳೆದ ಬಾರಿ ಒಂದು ಟ್ಯಾಬ್ಲೋ ಕುಶಾಲನಗರಕ್ಕೆ ಬಂದು ಸುಮಾರು ಒಂದೂವರೆ ಗಂಟೆ ಕಾಯಬೇಕಾದ ಪರಿಸ್ಥಿತಿ ಎದುರಾಗಿತ್ತು. ಆಯೋಜಕರು ಒಂದು ತಿಂಗಳಿಂದ ಶ್ರಮಿಸಿರುತ್ತಾರೆ. ಮಂಟಪದಿಂದ ಸರ್ಕಲ್‌ಗೆ ತಂದು ಪ್ರದರ್ಶನ ನೀಡುವವರು ನಿಟ್ಟುಸಿರು ಬಿಡಲೂ ಸಮಯ ಸಿಗದಂತಾಗಿತ್ತು. ಕಾರ್ಯಕ್ರಮ ಮುಗಿಸಿ ಚಪ್ಪರ ಬಿಚ್ಚಿಕೊಂಡು ಹೋಗುವಾಗಲೂ ಎರಡು ಗಂಟೆ ಕಾಯುವ ಪರಿಸ್ಥಿತಿ ಮತ್ತೆ ಬರಬಾರದು. ಈ ಬಾರಿ ಕಟ್ಟುನಿಟ್ಟಿನ ಕ್ರಮ, ಸೂಕ್ತ ಪೂರ್ವ ಸಿದ್ಧತೆ ಹಾಗೂ ವ್ಯವಸ್ಥಿತ ಪಾರ್ಕಿಂಗ್ ಅಗತ್ಯ ಎಂದರು.

ಹನುಮ ಜಯಂತಿ ಈಗಾಗಲೇ ಮಡಿಕೇರಿ ನಾಡ ಹಬ್ಬದ ಮಟ್ಟಕ್ಕೆ ಬೆಳೆದು ನಿಂತಿದೆ. ಸಾಂಸ್ಕೃತಿಕ ಕಾರ್ಯಕ್ರಮಗಳು ವೇದಿಕೆಯಲ್ಲಿ ನಡೆಯುವುದು ಬಿಟ್ಟರೆ, ಉಳಿದೆಲ್ಲಾ ಅಂಶಗಳಲ್ಲಿ ನಾವು ನಾಡ ಹಬ್ಬದ ಮಾದರಿಯಲ್ಲೇ ಆಚರಿಸಿಕೊಂಡು ಬರುತ್ತಿದ್ದೇವೆ. ಉತ್ಸವ ಮೂರ್ತಿ ಸಾಗಿದ ಬಳಿಕ, ಸಂಜೆ 7 ಗಂಟೆಯ ನಂತರ ಕೆಲವು ನಿರ್ಬಂಧಗಳೊಂದಿಗೆ ಪರ್ಯಾಯ ಮಾರ್ಗದ ಮೂಲಕ ವಾಹನಗಳನ್ನು ಕಳುಹಿಸುವ ವ್ಯವಸ್ಥೆ ಮಾಡಬೇಕು. ಮಡಿಕೇರಿ, ವಿರಾಜಪೇಟೆ, ಚಟ್ಟಹಳ್ಳಿ ಕಡೆ ಹೋಗುವವರಿಗೆ ಪರ್ಯಾಯ ಮಾರ್ಗಗಳಿವೆ ಎಂದು ಅವರು ಸಲಹೆ ನೀಡಿದರು.

ಮದುವೆ ಸಮಾರಂಭಗಳು, ಹಿರಿಯರು, ವೃದ್ಧರು, ಮಕ್ಕಳು ಎಲ್ಲರೂ ಈ ದಿನ ರಸ್ತೆಯಲ್ಲಿರುತ್ತಾರೆ. ಆಂಬುಲೆನ್ಸ್‌ಗೆ ಯಾವುದೇ ಅಡಚಣೆಯಾಗಬಾರದು. ಕಳೆದ ಎರಡು ವರ್ಷಗಳಲ್ಲಿ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಟೀಕೆ ವ್ಯಕ್ತವಾಗಿತ್ತು, ಅಧಿಕಾರಿಗಳು ತೀವ್ರ ಒತ್ತಡಕ್ಕೆ ಒಳಗಾಗಿದ್ದರು. ಅಂತಹ ಸನ್ನಿವೇಶಕ್ಕೆ ಮತ್ತೆ ಅವಕಾಶ ನೀಡಬಾರದು. ಮುಂಜಾಗ್ರತೆ ವಹಿಸುವುದು ನಮ್ಮೆಲ್ಲರ ಸಾಮಾಜಿಕ ಜವಾಬ್ದಾರಿ ಎಂದು ಶಶಿಧರ್ ಅವರು ತಿಳಿಸಿದರು. ಇದೇ ಸಂದರ್ಭ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಪ್ರಮೋದ್ ಮುತ್ತಪ್ಪ. ಬಿ.ಬಿ ಭಾರತೀಶ್. ಡಿ. ವಿ ರಾಜೇಶ್. ಡಿ.ಪಿ ಗಿರೀಶ್. ಕಾರ್ಯನಿರತ ಪತ್ರಕರ್ತ ಸಂಘದ ಅಧ್ಯಕ್ಷ ಚಂದ್ರಮೋಹನ್. ಸುಮನ್ ಗೌಡ. ಅನುದೀಪ್. ಪ್ರಶಾಂತ್. ಹೆಚ್ ಟಿ ವಸಂತ್

ಟ್ರಸ್ಟ್‌ನ ಪದಾಧಿಕಾರಿಗಳು, ವಿವಿಧ ದಶಮಂಟಪಗಳ ಸಮಿತಿ ಸದಸ್ಯರು, ಯುವಕರು ಹಾಗೂ ನಗರದ ಪ್ರಮುಖರು ಉಪಸ್ಥಿತರಿದ್ದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!